More

    ಶರಣರ ಫಲಪುಷ್ಪ ಪ್ರದರ್ಶನ ಮನಸೋತ ಜನ: 50 ಸಾವಿರಕ್ಕೂ ಅಧಿಕ ಮಂದಿ ಭೇಟಿ

    ಬೆಂಗಳೂರು: ಗಣರಾಜ್ಯೋತ್ಸವ ನಿಮಿತ್ತ ತೋಟಗಾರಿಕೆ ಇಲಾಖೆ ವತಿಯಿಂದ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಆಯೋಜಿಸಲಾಗಿರುವ ‘ಫಲಪುಷ್ಪ’ ಪ್ರದರ್ಶನದ 3ನೇ ದಿನವಾದ ಭಾನುವಾರ ಜನರ ದಂಡೇ ಹರಿದುಬಂದಿತ್ತು. ವಾರಾಂತ್ಯ ಹಿನ್ನೆಲೆಯಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ತಂಡೋಪತಂಡವಾಗಿ ಆಗಮಿಸಿದ ಜನರು, ‘ವಚನ ಸಾಹಿತ್ಯ’ ಆಧಾರಿತ ಹೂಗಳ ಮಾದರಿಗಳನ್ನು ಕಣ್ತುಂಬಿಕೊಂಡರು. ವಚನಕಾರರ ಪ್ರತಿಮೆಗೆ ವೀಕ್ಷಕರು ಮನಸೋತರು. ಭಾನುವಾರ 50 ಸಾವಿರಕ್ಕೂ ಅಧಿಕ ಮಂದಿ ಫಲಪುಷ್ಪಕ್ಕೆ ಭೇಟಿ ನೀಡಿರಬಹುದು ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.

    ಐಟಿ ಉದ್ಯೋಗಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿ ಕಿಕ್ಕಿರಿದು ಸೇರಿದ್ದ ಜನರು ಗಾಜಿನ ಮನೆ ಒಳಗೆ ಹಾಗೂ ಹೊರಗೆ ನಿರ್ಮಿಸಿರುವ ಆಕರ್ಷಕ ಹೂಗಳ ಪ್ರತಿಕೃತಿ ವೀಕ್ಷಿಸಿದರು. ಪುಷ್ಪ ಮಾದರಿಯ ಅನುಭವ ಮಂಟಪ, ಐಕ್ಯ ಮಂಟಪ, ಶರಣರ ಪ್ರತಿಮೆಗಳು, ಓಲೆಗರಿ ಸಂಸ್ಕರಣಾ ವಿಧಾನ, ಇಷ್ಟಲಿಂಗ ಇತ್ಯಾದಿ ಹೂವಿನ ಕಲಾಕೃತಿಗಳನ್ನು, ಪೂರಕ ಕಲೆಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದರು. ಹೆಜ್ಜೆ ಹೆಜ್ಜೆಗೂ ಸೆಲ್ಫೀ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು
    ಎಳೆಯ ತೆಂಗಿನ ಗರಿ, ಬಾಳೆ ಎಲೆಗಳಿಂದ ಮೂಡಿದ ಶ್ರೀರಾಮನ ಪ್ರತಿಕೃತಿ, ಶ್ರೀ ರಾಮ ಮಂದಿರ ಸೇರಿ ವಿವಿಧ ದೇವಾಲಯಗಳ ಗೋಪುರಗಳು, ಹೂವುಗಳು, ಪ್ರಾಣಿಪಕ್ಷಿಗಳ ವಿವಿಧ ಆಕೃತಿಗಳ ಜಾನೂರು ಕಲೆ, ಥಾಯ್ ಆರ್ಟ್ ಲಾಲ್‌ಬಾಗ್‌ನ ಮಾಹಿತಿ ಕೇಂದ್ರದಲ್ಲಿ ಅನಾವರಣಗೊಂಡಿದ್ದು, ನೋಡುಗರ ಗಮನ ಸೆಳೆಯುತ್ತಿವೆ.

    ಗಾಜಿನ ಮನೆಯೊಳಗೆ 12ನೇ ಶತಮಾನದ ವಚನ ಸಾಹಿತ್ಯದ ದರ್ಶನವಾಗುತ್ತಿದ್ದರೆ, ಮತ್ತೊಂದೆಡೆ ಪೂರಕ ಕಲೆಗಳಾದ ಡಚ್ ಹಾಗೂ ಒಣ ಹೂವುಗಳ ಆಕರ್ಷಕ ಜೋಡಣೆ, ಪುಷ್ಪ ರಂಗೋಲಿ, ತರಕಾರಿ ಕೆತ್ತನೆ, ಬೋನ್ಸಾಯ್ ಗಿಡಗಳ ಪ್ರದರ್ಶನವು ಆಕರ್ಷಣೆ ಕೇಂದ್ರವಾಗಿವೆ. ಗಾಜಿನ ಮನೆಯ ಒಳಾಂಗಣದಲ್ಲಿ ಬಣ್ಣಬಣ್ಣದ ಹೂಗಳಿಂದ ಅನಾವರಣಗೊಳಿಸಲಾಗಿದ್ದ ಅನುಭವ ಮಂಟಪ, ಬಸವಣ್ಣ, ಅಕ್ಕಮಹಾದೇವಿ, ಅಂಬಿಗರ ಚೌಡಯ್ಯ, ಹಡಪದ ಅಪ್ಪಣ್ಣ, ಕುಂಬಾರ ಗುಂಡಣ್ಣ, ಅಕ್ಕ ನಾಗಲಾಂಬಿಕೆ, ಮಡಿವಾಳ ಮಾಚಿದೇವ, ಸಮಗಾರ ಹರಳಯ್ಯ, ಬಾಚಿಕಾಯಕದ ಬಸವಣ್ಣ ಮತ್ತು ಶರಣೆ ಸತ್ಯಕ್ಕ ಅವರ ಪ್ರತಿಮೆಗಳು ನೋಡುಗರ ಮನಸೆಳೆಯುತ್ತಿವೆ. ವರ್ಟಿಕಲ್ ಗಾರ್ಡನ್ ಹಾಗೂ ಇಷ್ಟಲಿಂಗ ಪರಿಕಲ್ಪನೆಯ ಕಲಾಕೃತಿಗಳು 12ನೇ ಶತಮಾನದ ವೈಚಾರಿಕ ಕ್ರಾಂತಿಯನ್ನು ಪರಿಚಯಿಸುತ್ತಿವೆ.

    ರಾಮಮಂದಿರ ಕಲಾಕೃತಿ ನಿರ್ಮಿಸಿ ಸಂಭ್ರಮಿಸಿದ ಮಕ್ಕಳು
    ಕೂಡಲಸಂಗಮದಲ್ಲಿರುವ ಬಸವಣ್ಣನ ಐಕ್ಯಮಂಟಪದ ಪುಷ್ಪ ಮಾದರಿ, ಅವರ ಬದುಕಿನ ಪ್ರಮುಖ ಘಟ್ಟಗಳನ್ನು ಪರಿಚಯಿಸುವ ಇಂಗಳೇಶ್ವರದಲ್ಲಿನ ಸ್ಮಾರಕ, ಬಾಗೇವಾಡಿಯಲ್ಲಿನ ಸ್ಮಾರಕ, ಬಸವಣ್ಣ ಮೊದಲು ಅಧಿಕಾರ ನಿರ್ವಹಿಸಿದ ಮಂಗಳವೇಡೆ ಕೋಟೆ, ಕಾರ್ಯಕ್ಷೇತ್ರ ಬಸವ ಕಲ್ಯಾಣ- ಮತ್ತಿತರ ಹೂ ಕಲಾಕೃತಿಗಳು ಹಾಗೂ ಶರಣರ ಪ್ರತಿಮೆಗಳಿವೆ. ಪ್ರತಿಕೃತಿ ಹಾಗೂ ಉದ್ಯಾನದ ಆಯ್ದ ಸ್ಥಳಗಳಲ್ಲಿ ತಾಳೆಗರಿ ವಿನ್ಯಾಸದಲ್ಲಿ ತೂಗುಹಾಕಿರುವ ವಚನಕಾರರ ಸಮಾಜಮುಖಿ ಮತ್ತು ಪರಿಸರಸ್ನೇಹಿ ಆಯ್ದ 300ಕ್ಕೂ ಹೆಚ್ಚು ವಚನಗಳನ್ನು ಓದುತ್ತಿದ್ದ ದೃಶ್ಯ ಕಂಡುಬಂತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts