

ಬೆಂಗಳೂರು: ರಾಜ್ಯದಲ್ಲಿನ ಕಾಂಗ್ರೆಸ್ ನಾಯಕರನ್ನು ಬಿಜೆಪಿ ಒಂದೊಂದಾಗಿ ಕಾಣೆಯಾಗಿಸುತ್ತಿದೆ. ಇತ್ತೀಚೆಗಷ್ಟೇ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಕಾಣೆಯಾಗಿಸಿದ್ದ ಬಿಜೆಪಿ, ಇದೀಗ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನೂ ನಾಪತ್ತೆ ಆಗಿಸಿದೆ.
'ಸದಾ ಸಾಮಾಜಿಕ ಜಾಲತಾಣಗಳಲ್ಲೇ ಕಾಲಹರಣ ಮಾಡುವ ಸತ್ಯ ಸಂಶೋಧನಾ ಮಂತ್ರಿಗಳಾದ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ. ಕಾಂಗ್ರೆಸ್ನ ದುರಾಡಳಿತಕ್ಕೆ ಬೇಸತ್ತ ಗ್ರಾಮ ವಾಸಿಗರು ಗ್ರಾಮೀಣಾಭಿವೃದ್ಧಿ ಸಚಿವರ ಶೋಧನೆಯಲ್ಲಿ ತೊಡಗಿದ್ದು, ಇವರು ಸೇರಿಕೊಂಡಿರುವ ಜಾಗದ ಖಚಿತ ಮಾಹಿತಿಗಾಗಿ ಕಾದು ಕೂತಿದ್ದಾರೆ. ದಯವಿಟ್ಟು ಹುಡುಕಿ ಕೊಡಿ!' ಎಂದು ರಾಜ್ಯ ಬಿಜೆಪಿಯ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿ ಕಾಣೆಯಾದವರ ಪ್ರಕಟಣೆ ಮಾದರಿಯಲ್ಲಿನ ಪೋಸ್ಟ್ ಹಂಚಿಕೊಳ್ಳಲಾಗಿದೆ.
ಅಂದಹಾಗೆ ಕಳೆದ ವರ್ಷವೂ ಪ್ರಿಯಾಂಕ್ ಖರ್ಗೆ ವಿಚಾರವಾಗಿ ಇಂಥದ್ದೇ ಪ್ರಕಟಣೆ ಹೊರಡಿಸಲಾಗಿತ್ತು. ‘ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಕಾಣೆಯಾಗಿದ್ದಾರೆ’ ಎಂದು ಬಿಜೆಪಿ ಯುವ ಮುಖಂಡ ಅರವಿಂದ್ ಚೌಹಾಣ್ ಎಂಬವರು ಕಲಬುರಗಿ ಜಿಲ್ಲೆಯ ಚಿತ್ತಾಪುರ ನಗರದ ಹಲವೆಡೆ ಪೋಸ್ಟರ್ ಅಂಟಿಸಿದ್ದರು.
ಕೆಲವು ದಿನಗಳ ಹಿಂದೆ, ‘ಡಿ.ಕೆ.ಶಿವಕುಮಾರ್ ಕಾಣೆಯಾಗಿದ್ದಾರೆ, ದಯವಿಟ್ಟು ಹುಡುಕಿಕೊಂಡಿ’ ಎಂದು ಕಾಣೆಯಾದವರ ಜಾಹೀರಾತು ಮಾದರಿಯಲ್ಲಿ ಪೋಸ್ಟರ್ ರಚಿಸಿ ರಾಜ್ಯ ಬಿಜೆಪಿಯ ಅಧಿಕೃತ ಹ್ಯಾಂಡಲ್ನಲ್ಲಿ ಪೋಸ್ಟ್ ಮಾಡಲಾಗಿತ್ತು.
ಬಿಜೆಪಿಯ ಈ ಕಾಣೆಯಾಗಿದ್ದಾರೆ ಪ್ರಕಟಣೆಗೆ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದು, ಚುನಾವಣೆಯಲ್ಲಿ ಹೀನಾಯವಾಗಿ ಸೋತು, ಜನರಿಂದ ತಿರಸ್ಕಾರಕ್ಕೆ ಒಳಗಾಗಿ, ದೆಹಲಿಯಲ್ಲಿ ಮರ್ಯಾದೆ ಸಿಗದೆ, ರಾಜ್ಯದಲ್ಲಿ ಅಧಿಕಾರದ ಕುರ್ಚಿ ಸಿಗದೆ ಬಿಜೆಪಿಗರು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.
ಅಲ್ಲದೆ, ರಾಜ್ಯದಲ್ಲಿ ಕಾಣೆಯಾಗಿರೋದು ಕಾಂಗ್ರೆಸ್ ನಾಯಕರಲ್ಲ.. ಕಾಣೆಯಾಗಿರುವುದು ಬಿಜೆಪಿಗರ ಬೆನ್ನು ಮೂಳೆ, ಕಾಣೆಯಾಗಿರುವುದು ಬಿಜೆಪಿಯ ನಾಯಕತ್ವ, ಕಾಣೆಯಾಗಿರುವುದು ಬಿಜೆಪಿಗರ ಸ್ವಾಭಿಮಾನ, ಕಾಣೆಯಾಗಿರುವುದು ಬಿಜೆಪಿಯ ಅಸ್ತಿತ್ವ ಎಂದಿರುವ ಪ್ರಿಯಾಂಕ್, ಬಿಜೆಪಿಯಲ್ಲಿ ನಾಯಕತ್ವವೇ ಕಾಣೆಯಾಗಿದೆ ಎಂದಿದ್ದಾರೆ.