ಅರಿಶಿನ-ಕುಂಕುಮ ಬಳಸದೆ ಆಯುಧಪೂಜೆ ಮಾಡಿ: ಸರ್ಕಾರದಿಂದ ಹೊಸ ಆದೇಶ

Arishina kumkuma
Published on

ಬೆಂಗಳೂರು: ಗಣೇಶ ಹಬ್ಬದ ಸಂದರ್ಭದಲ್ಲಿ ಪಿಒಪಿ ಗಣೇಶನ ಬದಲು ಮಣ್ಣಿನ ಗಣಪತಿಯನ್ನೇ ಕೂರಿಸಿ ಚೌತಿ ಆಚರಿಸಿ, ದೀಪಾವಳಿ ಸಂದರ್ಭದಲ್ಲಿ ಹಸಿರು ಪಟಾಕಿಗಳನ್ನಷ್ಟೇ ಸಿಡಿಸಿ ಸಂಭ್ರಮಿಸಿ ಎಂದು ಸರ್ಕಾರ ಪ್ರತಿ ವರ್ಷ ಆದೇಶ ಹೊರಡಿಸುವುದು ನಡೆಯುತ್ತಿರುತ್ತದೆ. ಈ ನಡುವೆ ದಸರಾ ಹಿನ್ನೆಲೆಯಲ್ಲಿ ಸರ್ಕಾರ ಇನ್ನೊಂದು ಆದೇಶ ಹೊರಡಿಸಿದ್ದು, ಅರಿಶಿನ-ಕುಂಕುಮ ಇತ್ಯಾದಿ ಬಳಸದೆ ಆಯುಧಪೂಜೆ ಮಾಡುವಂತೆ ಸೂಚನೆ ನೀಡಿದೆ.

ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡದಲ್ಲಿ ಆಯುಧಪೂಜೆ ಸಂದರ್ಭದಲ್ಲಿ ಅರಿಶಿನ-ಕುಂಕುಮ ಸೇರಿದಂತೆ ಯಾವುದೇ ರಾಸಾಯನಿಕಯುಕ್ತ ಬಣ್ಣಗಳನ್ನು ಕಚೇರಿಗಳ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಬಳಸಬಾರದು ಎಂದು ಸರ್ಕಾರ ಆದೇಶ ಹೊರಡಿಸಿದೆ.

ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡಗಳಲ್ಲಿ ಆಯುಧ ಪೂಜೆ ಸಮಯದಲ್ಲಿ ಕಚೇರಿಗಳ ಒಳಗೆ ಮತ್ತು ಕಾರಿಡಾರ್‌ಗಳಲ್ಲಿ ರಾಸಾಯನಿಕ ಮಿಶ್ರಿತ ಬಣ್ಣಗಳನ್ನು ಬಳಸುವುದರಿಂದ ಹಾನಿಕಾರಕ ಬಣ್ಣವು ನೆಲಹಾಸಿನ ಮೇಲೆ ಬಿದ್ದು, ಸುಮಾರು ತಿಂಗಳುಗಳ ಕಾಲ ಹಾಗೆಯೇ ಅಂಟಿಕೊಂಡು ಉಳಿಯುತ್ತದೆ.

ಇದರಿಂದ ವಿಧಾನಸೌಧ, ವಿಕಾಸಸೌಧ, ಬಹುಮಹಡಿ ಕಟ್ಟಡದ ನೆಲಹಾಸುಗಳ ಸೌಂದರ್ಯಕ್ಕೆ ಧಕ್ಕೆಯುಂಟಾಗುತ್ತದೆ. ಈ ಕುರಿತಂತೆ ಹಿಂದೆಯೂ ಅನೇಕ ಸುತ್ತೋಲೆಗಳನ್ನು ಹೊರಡಿಸಿದ್ದಾಗ್ಯೂ ಕೆಲವು ಇಲಾಖೆಯವರು ಈ ಸೂಚನೆಗಳನ್ನು ಪಾಲನೆ ಮಾಡದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ಸರ್ಕಾರ ಇನ್ನೊಮ್ಮೆ ಈ ಆದೇಶ ಹೊರಡಿಸಿದ್ದಾಗಿ ತಿಳಿಸಿದೆ.

ವಿಧಾನಸೌಧ, ವಿಕಾಸಸೌಧ ಮತ್ತು ಬಹುಮಹಡಿ ಕಟ್ಟಡಗಳು ಪಾರಂಪರಿಕ ಕಟ್ಟಡಗಳಾಗಿರುವುದರಿಂದ ಆಯುಧಪೂಜೆ ವೇಳೆ ಕಛೇರಿ ಒಳಗೆ ಅಥವಾ ಕಾರಿಡಾರ್‌ಗಳಲ್ಲಿ ಕುಂಬಳಕಾಯಿ ಮತ್ತು ರಂಗೋಲಿಗಳಲ್ಲಿ ಯಾವುದೇ ರೀತಿಯ ರಾಸಾಯನಿಕ ಮಿಶ್ರಿತ ಬಣ್ಣ/ಕುಂಕುಮ/ಅರಿಶಿನ/ಸುಣ್ಣ ಹಾಗೂ ಇನ್ನಿತರ ವಸ್ತುಗಳನ್ನು ಕಡ್ಡಾಯವಾಗಿ ಬಳಸದಂತೆ ಸೂಚಿಸಲಾಗಿದೆ.

ಹಾಗೆಯೇ ಪೂಜಾ ದಿನದಂದು ಕಚೇರಿಯಿಂದ ಹೊರಡುವ ಮುನ್ನ ದೀಪಗಳನ್ನು ಹಾಗೂ ವಿದ್ಯುತ್‌ ಸ್ವಿಚ್‌ಗಳನ್ನು ನಂದಿಸಿ ತೆರಳುವಂತೆ ಸೂಚಿಸಲಾಗಿದೆ. ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ವ್ಯವಸ್ಥಿತವಾಗಿ ವಿಲೇವಾರಿ ಮಾಡತಕ್ಕದ್ದು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net