

ನವದೆಹಲಿ: ಯಾವುದೇ ಸಂಸ್ಥೆಯಲ್ಲಿ ಮೀಟಿಂಗ್ ಎಂದರೆ ಅಲ್ಲೊಂದು ಶಿಸ್ತು ಸಹಜವಾಗಿಯೇ ಇರುತ್ತದೆ. ಅದರಲ್ಲೂ ಅಂಥ ಮೀಟಿಂಗ್ನಲ್ಲಿ ಬಾಸ್ ಎನಿಸಿಕೊಂಡವರ ದಿರಿಸು ಟಿಪ್ಟಾಪ್ ಆಗಿರುವುದಲ್ಲದೆ ಅವರ ವರ್ತನೆ ಕೂಡ ಗಂಭೀರವಾಗಿ ಇರುತ್ತದೆ. ಆದರೆ ಇಲ್ಲೊಂದು ಅಂಥ ಮೀಟಿಂಗ್ ನಗೆಪಾಟಲಿಗೆ ಈಡಾಗಿದೆ.
ಏರ್ ಏಷ್ಯಾ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಎಒ) ಟೋನಿ ಫೆರ್ನಾಂಡಿಸ್ ಅಂಗಿ ಧರಿಸದೆ ಮ್ಯಾನೇಜ್ಮೆಂಟ್ ಮೀಟಿಂಗ್ ನಡೆಸಿದ್ದು, ಆ ಕುರಿತ ಮಾಹಿತಿಯನ್ನು ಲಿಂಕ್ಡ್ ಇನ್ನಲ್ಲಿ ಹಂಚಿಕೊಂಡಿದ್ದರು.
ಮಲೇಷ್ಯಾದ ಈ ಕಡಿಮೆ ವೆಚ್ಚದ ವೈಮಾನಿಕ ಸಂಸ್ಥೆಯ ಉದ್ಯೋಗ ಸಂಸ್ಕೃತಿಯನ್ನು ಹೊಗಳುವ ಸಲುವಾಗಿ ಅವರು ಶರ್ಟ್ ಇಲ್ಲದೆ ಹಾಗೂ ಮಸಾಜ್ ಮಾಡಿಸಿಕೊಳ್ಳುತ್ತ ಸಭೆಯಲ್ಲಿ ಭಾಗವಹಿಸಿದ್ದರು. ಆದರೆ ಬಳಿಕ ನಕಾರಾತ್ಮಕ ಪ್ರತಿಕ್ರಿಯೆಗಳು ಬಂದಿದ್ದರಿಂದ ಲಿಂಕ್ಡ್ ಇನ್ ಪೋಸ್ಟ್ ಡಿಲೀಟ್ ಮಾಡಲಾಗಿದೆ.
ವಾರವಿಡೀಯ ಒತ್ತಡದ ನಿವಾರಣೆಗಾಗಿ ವೆರಾನಿಟಾ ಯೊಸೆಫಿನ್ ಮಸಾಜ್ ಮಾಡಿಸಿಕೊಳ್ಳಲು ಸೂಚಿಸಿದರು. ಇಂಡೋನೇಷ್ಯಾ ಮತ್ತು ಏರ್ಏಷ್ಯಾ ಸಂಸ್ಕೃತಿಯನ್ನು ಪ್ರೀತಿಸಲು ನಾನು ಮಸಾಜ್ ಜತೆ ಮ್ಯಾನೇಜ್ಮೆಂಟ್ ಸಭೆಯನ್ನೂ ಮಾಡಬಹುದು. ನಾವು ದೊಡ್ಡ ಪ್ರಗತಿ ಸಾಧಿಸುತ್ತಿದ್ದೇವೆ ಮತ್ತು ನಾನು ಈಗ ಕ್ಯಾಪಿಟಲ್ ಎ ರಚನೆ ಅಂತಿಮಗೊಳಿಸಿದ್ದೇನೆ. ಮುಂದಿನ ದಿನಗಳು ಅದ್ಭುತವಾಗಿರಲಿದ್ದು, ಅದಕ್ಕಾಗಿ ಹೆಮ್ಮೆಪಡೋಣ ಎಂದು ಅವರು ಈ ಸಭೆಯಲ್ಲಿ ಉದ್ಯೋಗಿಗಳನ್ನು ಉದ್ದೇಶಿಸಿ ಹೇಳಿದ್ದರು.
ಜತೆಗೆ ಶರ್ಟ್ ಧರಿಸದೆ ಮತ್ತು ಮಸಾಜ್ ಮಾಡಿಸಿಕೊಳ್ಳುತ್ತ ಮಾಡಿದ ಈ ಸಭೆಯ ಫೋಟೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಆದರೆ ಪಬ್ಲಿಕ್ ಲಿಸ್ಟಿಂಗ್ ಕಂಪನಿಯ ಸಿಇಒ ಒಬ್ಬರು ಈ ರೀತಿ ಶರ್ಟ್ ಧರಿಸದೆ ಸಭೆ ನಡೆಸುವುದು ಸರಿಯಲ್ಲ ಎಂದು ವ್ಯಾಪಕ ಟೀಕೆಗೆ ಗುರಿಯಾಗಿದ್ದರು.