

ಬೆಂಗಳೂರು: ಪೆಟ್ರೋಲ್-ಡಿಸೇಲ್ ಬಂಕ್ಗಳಲ್ಲಿ ವಾಹನ ಚಾಲಕ-ಮಾಲೀಕರು ಎಷ್ಟೇ ಎಚ್ಚರಿಕೆಯಿಂದ ಗಮನಿಸಿದರೂ ಮೋಸವಾಗಿರುತ್ತದೆ ಎಂಬುದು ಈಗಾಗಲೇ ಬಹಳಷ್ಟು ಜನರ ಮನಸಲ್ಲಿ ಅಚ್ಚೊತ್ತಿರುವ ವಿಷಯ. ಇದೀಗ ಇಂಥ ಮೋಸವನ್ನು ತಪ್ಪಿಸಲು ಹೊಸದೊಂದು ಬೇಡಿಕೆ ಸಾರ್ವಜನಿಕರಿಂದ ವ್ಯಕ್ತವಾಗಿದೆ.
ರಾಜ್ಯದಲ್ಲಿನ ಕೆಲವು ಪೆಟ್ರೋಲ್-ಡೀಸೆಲ್ ಬಂಕ್ಗಳಲ್ಲಿ ಮೀಟರ್ ಜೀರೋ ಆಗಿರುವುದನ್ನು ಖಚಿತ ಪಡಿಸಿಕೊಂಡ ಮೇಲೂ ಹಾಕಿರುವ ಪೆಟ್ರೋಲ್-ಡೀಸೆಲ್ ಪ್ರಮಾಣದಲ್ಲಿ ವ್ಯತ್ಯಾಸವಾಗಿರುತ್ತದೆ, ಕೊಟ್ಟ ಹಣಕ್ಕೆ ಸರಿಯಾದ ಇಂಧನ ಹಾಕಿರುವುದಿಲ್ಲ ಎಂಬ ಆರೋಪ ಅಲ್ಲೊಂದು ಇಲ್ಲೊಂದು ಕೇಳಿ ಬರುತ್ತಲೇ ಇರುತ್ತವೆ.
ಆದರೆ ಇಂಥ ಮೋಸವನ್ನು ತಪ್ಪಿಸಲು ಸರಳ ಉಪಾಯವೊಂದಿದೆ. ಒಂದು ಸಣ್ಣ ಬದಲಾವಣೆಯನ್ನು ಮಾಡಲು ಸರ್ಕಾರ ಆದೇಶ ಹೊರಡಿಸಿದರೆ ರಾಜ್ಯದ ಪೆಟ್ರೋಲ್-ಡೀಸೆಲ್ ಬಂಕ್ಗಳಲ್ಲಿನ ಮೋಸ ಬಹುತೇಕ ನಿವಾರಣೆ ಆಗುತ್ತದೆ ಇಲ್ಲವೇ ನಿಯಂತ್ರಣಕ್ಕೆ ಬರುತ್ತದೆ ಎಂದು ಕಲಬುರಗಿ ಜಿಲ್ಲೆಯ ಸೇಡಮ್ನ ಶೇಖರ್ ಎಂಬ ವ್ಯಕ್ತಿ ಪೆಟ್ರೋಲ್ ಬಂಕ್ನಲ್ಲೇ ವಿಡಿಯೋವೊಂದನ್ನು ಮಾಡುವ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಸಾಮಾನ್ಯವಾಗಿ ಬಂಕ್ಗಳಲ್ಲಿನ ಪೆಟ್ರೋಲ್-ಡಿಸೇಲ್ ಹಾಕುವ ಜೆಟ್ನ ಪೈಪ್ ಕಪ್ಪು ಇರುತ್ತದೆ. ಇಂಥ ಕಪ್ಪು ಇಲ್ಲವೇ ಅಪಾರದರ್ಶಕ ಪೈಪ್ಗಳ ಬದಲಿಗೆ ಬಿಳಿ ಅಥವಾ ಪಾರದರ್ಶಕ ಪೈಪ್ ಅಳವಡಿಸಿದರೆ ಪೆಟ್ರೋಲ್ ಚಲನೆ ಸರಿಯಾಗಿ ಕಾಣುತ್ತದೆ. ಇದರಿಂದ ಮೋಸವಾಗುವ ಸಾಧ್ಯತೆ ಬಹುತೇಕ ತಪ್ಪಿಸಿದಂತಾಗುತ್ತದೆ. ಸರ್ಕಾರ ಈ ಕುರಿತು ಒಂದು ಆದೇಶ ಮಾಡಿದರೆ ಮಹತ್ವದ ಬದಲಾವಣೆ ಆಗಲಿದೆ ಎಂದು ಶೇಖರ್ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಇವರ ಅಭಿಪ್ರಾಯಕ್ಕೆ ಸಾರ್ವಜನಿಕರು ತಮ್ಮ ಸಹಮತ ಸೂಚಿಸಿದ್ದು, ಕಪ್ಪು ಬದಲು ಬಿಳಿ ಪಾರದರ್ಶಕ ಪೈಪ್ ಇರಬೇಕು ಎಂದು ಆಗ್ರಹಿಸಿದ್ದಾರೆ. ಇವರು ಪೋಸ್ಟ್ ಮಾಡಿರುವ ವಿಡಿಯೋ ಐದೇ ಗಂಟೆಗಳಲ್ಲಿ 300ಕ್ಕೂ ಅಧಿಕ ಶೇರ್ ಕಂಡಿದ್ದು, 12 ಸಾವಿರಕ್ಕೂ ಅಧಿಕ ವೀಕ್ಷಣೆಯನ್ನು ಕಂಡಿದೆ. 350ಕ್ಕೂ ಅಧಿಕ ಮಂದಿ ಇವರ ಅಭಿಪ್ರಾಯಕ್ಕೆ ಒಪ್ಪಿ ಕಮೆಂಟ್ ಮಾಡಿದ್ದಾರೆ.