ಕಾಂಗ್ರೆಸ್​ ಪಕ್ಷ ಮೊದಲಿನಂತಿಲ್ಲ ಸಮುದಾಯವನ್ನು ನಿರ್ಲಕ್ಷಿಸುತ್ತಿದೆ: ಹಿರಿಯ ಮುಸ್ಲಿಂ ನಾಯಕ ಆಕ್ರೋಶ

Aarif Khan
Published on

ಮುಂಬೈ: ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರಾಜಕೀಯ ಪಕ್ಷಗಳು ಬಿರುಸಿನ ಮತಬೇಟೆಯಲ್ಲಿ ತೊಡಗಿವೆ. ಇದರ ನಡುವೆಯೇ ಮಹಾರಾಷ್ಟ್ರ ಕಾಂಗ್ರೆಸ್​ ಪ್ರಚಾರ ಸಮಿತಿ ಅಧ್ಯಕ್ಷ ಮುಹಮ್ಮದ್​ ಆರಿಫ್​ ನಸೀಮ್​ ಖಾನ್​ ಸ್ವಪಕ್ಷದ ವಿರುದ್ಧವೇ ಗಂಭೀರ ಆರೋಪ ಒಂದನ್ನು ಮಾಡಿದ್ದು, ವ್ಯಾಪಕ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ.

ಈ ಕುರಿತು ಮಾತನಾಡಿರುವ ನಸೀಮ್​ ಖಾನ್​, ಮಹಾರಾಷ್ಟ್ರದ 48 ಲೋಕಸಭೆ ಕ್ಷೇತ್ರಗಳಿಗೆ ಪಕ್ಷವು ಸಮುದಾಯದ ಒಬ್ಬರಿಗೂ ಟಿಕೆಟ್​ ನೀಡದೆ ಅನ್ಯಾಯ ಮಾಡಿದೆ. ಕಾಂಗ್ರೆಸ್​ಗೆ ಮುಸ್ಲಿಮರ ಮತ ಬೇಕಿದೆ. ಆದರೆ, ನಾಯಕತ್ವ ಬೇಡವಾಗಿದೆ. ಹೀಗಾಗಿ ನಾನು ಈ ಬಾರಿ ಕಾಂಗ್ರೆಸ್​ ಪರ ಪ್ರಚಾರ ಮಾಡದಿರಲು ನಿರ್ಧರಿಸಿದ್ದೇನೆ.

ಮಹಾರಾಷ್ಟ್ರದಾದ್ಯಂತ ಅನೇಕ ಮುಸ್ಲಿಂ ಸಂಘಟನೆಗಳು, ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರು, ಅಲ್ಪಸಂಖ್ಯಾತ ಸಮುದಾಯದಿಂದ ಒಬ್ಬ ಅಭ್ಯರ್ಥಿಯನ್ನು ಕಾಂಗ್ರೆಸ್ ನಾಮನಿರ್ದೇಶನ ಮಾಡುತ್ತದೆ ಎಂಬ ನಂಬಿಕೆ ಇತ್ತು. ಆದರೆ ದುರದೃಷ್ಟವಶಾತ್ ನಮ್ಮ ನಿರೀಕ್ಷೆ ಹುಸಿಯಾಗಿದೆ. ಹೀಗಾಗಿ ನಾನು ಪ್ರಚಾರ ಸಮಿತಿ ಅಧ್ಯಕ್ಷನ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಘೋಷಿಸಿದ್ದಾರೆ.

ಇವರಿಗೆ ನಮ್ಮ ಮತಬೇಕು, ಆದರೆ ನಮ್ಮ ನಾಯಕತ್ವಬೇಡ, ಈ ಎಲ್ಲಾ ಕಾರಣಗಳಿಂದಾಗಿ, ನಾನು ಕಾಂಗ್ರೆಸ್​​​ನಲ್ಲಿ ಮುಂದುವರಿಯುವುದಿಲ್ಲ, ನಮ್ಮ ಸಮುದಾಯಕ್ಕೆ ಕಾಂಗ್ರೆಸ್​​​ನಲ್ಲಿ ಯಾಕೆ ಅವಕಾಶವಿಲ್ಲ ಎಂಬ ಪ್ರಶ್ನೆಗೆ ನನ್ನ ಬಳಿ ಉತ್ತರವಿಲ್ಲ. ಕಾಂಗ್ರೆಸ್ ತನ್ನ ಸಿದ್ಧಾಂತದಿಂದ ಹೊರಗೆ ಬರುತ್ತಿದೆ. ಮೊದಲಿನ ಪಕ್ಷದಂತಿಲ್ಲ, ಮಹಾರಾಷ್ಟ್ರದಲ್ಲಿ ಚುನಾವಣೆಗೆ ಟಿಕೆಟ್ ನೀಡುವಾಗ ಕಾಂಗ್ರೆಸ್ ಏಕೆ ಮುಸ್ಲಿಂ ಸಮುದಾಯವನ್ನು ನಿರ್ಲಕ್ಷಿಸಿದೆ ಎಂದು ಗೊತ್ತಿಲ್ಲ. ಯಾವ ಕಾರಣಕ್ಕೆ ನಮಗೆ ಅನ್ಯಾಯ ಮಾಡಲಾಗುತ್ತಿದೆ ಎಂದು ಮುಹಮ್ಮದ್​ ಆರೀಫ್​ ನಸೀಮ್​ ಖಾನ್​ ಪ್ರಶ್ನಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net