ಮಿತವ್ಯಯದ ಕಮಿಷನ್!

Cold-Allergy-and-Sinus-Tablet
Published on

ರಮೇಶ ದೊಡ್ಡಪುರ

ಬೆಂಗಳೂರು: ದೋಷಪೂರಿತ ಪಿಪಿಇ ಕಿಟ್ ಖರೀದಿಸಿ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರೂ. ನಷ್ಟವುಂಟು ಮಾಡಿದ ಆರೋಪಕ್ಕೆ ಗುರಿಯಾಗಿದ್ದ ಆರೋಗ್ಯ ಇಲಾಖೆ ಇದೀಗ ಇನ್ನೊಂದು ಎಡವಟ್ಟಿಗೆ ಮುಂದಾಗಿದೆ. ಕರ್ನಾಟಕ ಪಾರದರ್ಶಕ ಖರೀದಿ ಕಾಯ್ದೆ (ಕೆಟಿಪಿಪಿ) ಅನ್ವಯ ಟೆಂಡರ್ ಕರೆಯುವ ಪದ್ಧತಿಗೆ ತಿಲಾಂಜಲಿ ಇಟ್ಟು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದಲೇ ಔಷಧ ಖರೀದಿಸುವ ವ್ಯವಸ್ಥೆ ಜಾರಿಗೆ ತರಲು ನಿರ್ಧರಿಸಿದೆ. ತನ್ಮೂಲಕ ಮಿತವ್ಯಯದ ನೆಪದಲ್ಲಿ ‘ಕಮಿಷನ್’ ದಂಧೆಗೆ ಅವಕಾಶ ಕಲ್ಪಿಸಲು ಸಿದ್ಧತೆ ನಡೆಸಿರುವ ವಿಚಾರ ಬೆಳಕಿಗೆ ಬಂದಿದೆ.

ದೇಶಕ್ಕೇ ಮಾದರಿ ಎಂಬಂತೆ ರಾಜ್ಯದಲ್ಲಿ ಅಳವಡಿಸಿ ಕೊಂಡಿದ್ದ ಕೆಟಿಪಿಪಿ ಕಾಯ್ದೆಯನ್ನು ಕೈಬಿಟ್ಟು ಕೆಲವೇ ಸರ್ಕಾರಿ ಕಂಪನಿಗಳಿಂದ ಔಷಧ ಖರೀದಿಸಿದರೆ ಒಟ್ಟಾರೆ ಪಾರದರ್ಶಕತೆ ಹಾಗೂ ಸ್ಪರ್ಧಾತ್ಮಕ ವ್ಯವಸ್ಥೆಯೇ ಇಲ್ಲವಾಗುತ್ತದೆ. ಜತೆಗೆ ಹೆಚ್ಚಿನ ದರಕ್ಕೆ ಕಳಪೆ ಔಷಧ ಖರೀದಿಸಿ ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಸುವ ಪದ್ಧತಿಗೂ ನಾಂದಿಯಾಗಬಹುದೆಂಬ ಆತಂಕ ಎದುರಾಗಿದೆ.

ಕರ್ನಾಟಕ ಡ್ರಗ್ಸ್ ಲಾಜಿಸ್ಟಿಕ್ಸ್ ಆಂಡ್ ವೇರ್​ಹೌಸಿಂಗ್ ಸೊಸೈಟಿ (ಕೆಡಿಎಲ್​ಡಬ್ಲ್ಯುಎಸ್) ಮೂಲಕ ಸರ್ಕಾರಿ ಆಸ್ಪತ್ರೆಗಳಿಗೆ ಪೂರೈಸಲು ಖರೀದಿಸುವ ಔಷಧಗಳ ಬಹುಪಾಲು ಪ್ರಮಾಣವನ್ನು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದಲೇ ಖರೀದಿಸುವ ನಿರ್ಧಾರ ಕೈಗೊಂಡಿರುವ ಕುರಿತು ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಬರೆದಿರುವ ಪತ್ರ ‘ವಿಜಯವಾಣಿ’ಗೆ ಲಭ್ಯವಾಗಿದೆ.

ಮೇಲ್ನೋಟಕ್ಕೆ ಇದು ಆರ್ಥಿಕ ಮಿತವ್ಯಯದಂತೆ ಕಂಡರೂ ಕೂಡ ತನ್ನದೇ ಸ್ವಾಧೀನದ ಸಂಸ್ಥೆಗೆ ಲೈಸನಿಂಗ್ ಆಫೀಸರ್ ಮೂಲಕ ಕಮಿಷನ್ ನೀಡುವ ಪರಿಪಾಠಕ್ಕೆ ಉತ್ತೇಜನ ನೀಡಿದಂತಾಗುತ್ತದೆ. ಸರ್ಕಾರಿ ಸಂಸ್ಥೆಗಳು ಸರಬರಾಜು ಮಾಡುವ ಔಷಧ ಮಾರುಕಟ್ಟೆ ದರಕ್ಕಿಂತ ಹೆಚ್ಚಾಗಿರುತ್ತದೆಯಲ್ಲದೆ ಗುಣಮಟ್ಟದಲ್ಲೂ ಕೊರತೆ ಇರುತ್ತದೆ ಎಂಬ ವಿಚಾರ ಈಗ ಗುಟ್ಟಾಗೇನೂ ಉಳಿದಿಲ್ಲ. ಇಷ್ಟಾದರೂ ಕಮಿಷನ್ ಹಣದ ಸಲುವಾಗಿ ಅಧಿಕಾರಿಗಳು ಹೊಸ ವ್ಯವಸ್ಥೆ ಜಾರಿಗೆ ಮುಂದಾಗಿದ್ದಾರೆಂಬ ಆರೋಪಗಳು ಕೇಳಿಬಂದಿವೆ.

ಕಮಿಷನ್​ಗಾಗಿ ಅಧಿಕಾರಿ ನೇಮಕ: ಸರ್ಕಾರಿ ಸಂಸ್ಥೆಗಳಿಂದ ಉತ್ಪನ್ನ ಖರೀದಿಸಲು ‘ಮಾತುಕತೆ’ಗೆ ಲೈಸನಿಂಗ್ ಅಧಿಕಾರಿ ಎಂಬ ಹುದ್ದೆಯನ್ನು ಅಧಿಕಾರಿಗಳು, ಲಂಚಕೋರರು ಅನಧಿಕೃತವಾಗಿ ನೇಮಿಸಿಕೊಂಡಿದ್ದಾರೆ.

ಕಳಪೆ ಜತೆಗೆ ದರವೂ ಜಾಸ್ತಿ: ಸರ್ಕಾರಿ ಸಂಸ್ಥೆಗಳಿಂದಲೇ ಔಷಧ ಖರೀದಿಸಿದರೆ ಔಷಧದ ದರ ಕಡಿಮೆ ಇರುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ಅನೇಕ ಸಂದರ್ಭಗಳಲ್ಲಿ ಮಾರುಕಟ್ಟೆ ದರಕ್ಕಿಂತಲೂ ಹಾಗೂ ಆನ್​ಲೈನ್​ನಲ್ಲಿ ಅನೇಕ ಖಾಸಗಿ ಸಂಸ್ಥೆಗಳು ಪ್ರಕಟಿಸಿದ ದರಕ್ಕಿಂತಲೂ ಹೆಚ್ಚಿನ ದರವನ್ನು ಸರ್ಕಾರಿ ಸ್ವಾಮ್ಯದ ಕಂಪನಿಗಳಿಗೆ ನೀಡಲಾಗಿದೆ. ದರದ ಜತೆಗೆ ಗುಣಮಟ್ಟದ ವಿಚಾರದಲ್ಲೂ ಅಪಸ್ವರವಿದೆ. ಹಿಂದಿನ 2-3 ವರ್ಷಗಳಲ್ಲಿ ಕರ್ನಾಟಕ ಸರ್ಕಾರದ ಆರೋಗ್ಯ ಇಲಾಖೆಯ ಅಧೀನದಲ್ಲಿರುವ ಔಷಧ ನಿಯಂತ್ರಣ ಇಲಾಖೆ ನಡೆಸಿದ ತಪಾಸಣೆಯಲ್ಲಿ, ಕೆಎಪಿಎಲ್ ಉತ್ಪಾದಿಸಿದ ಪ್ಯಾರಸಿಟಮಾಲ್​ನಂತಹ ಕನಿಷ್ಠ ಮಟ್ಟದ ಔಷಧ ಕೂಡ Not of Standard Quality ಎಂದು ಘೊಷಿಸಿವೆ. 25ಕ್ಕೂ ಹೆಚ್ಚು ಔಷಧಗಳು ಮಾನವ ಸೇವನೆಗೆ ಅರ್ಹವಲ್ಲ ಎಂದು ತಿಳಿಸಿತ್ತು. ದೇಶದ ಹಲವು ರಾಜ್ಯಗಳು ಖರೀದಿಸುವ ಔಷಧಗಳ ದರಕ್ಕೆ ಹೋಲಿಸಿದರೆ ಕರ್ನಾಟಕ ಅತಿ ಹೆಚ್ಚು ದರಗಳನ್ನು ನೀಡುತ್ತಿದೆ ಎಂಬುದು ಬಹಿರಂಗ ಸತ್ಯ.

ಸರ್ಕಾರಿ ಸಂಸ್ಥೆಗಳಿಂದಲೇ ಹೆಚ್ಚು ಔಷಧ ಖರೀದಿಸುವ ಕುರಿತು ಪ್ರಸ್ತಾವನೆಯ ಕಡತ ಬಂದಿದೆ. ಈ ರೀತಿ ಮಾಡಲು ಸಾಧ್ಯವೇ ಎಂಬುದರ ಕುರಿತು ಕಾನೂನು ಅಭಿಪ್ರಾಯ ಪಡೆದು ನಂತರ ಮುಂದುವರಿಯುತ್ತೇವೆ. | ಬಿ. ಶ್ರೀರಾಮುಲು ಆರೋಗ್ಯ ಸಚಿವ

ಇದನ್ನೂ ಓದಿ: ಕಾಶ್ಮೀರದ ವಿಚಾರದಲ್ಲಿ ಪಾಕ್​ ಜತೆ ನಾವಿಲ್ಲ, ಇತ್ತ ತಲೆನೇ ಹಾಕಲ್ಲ ಎಂದ ತಾಲೀಬಾನ್​: ಪಾಕಿಸ್ತಾನಕ್ಕಾಯ್ತು ಭಾರಿ ಮುಖಭಂಗ! ಶೇ.10 ಕಮಿಷನ್: ರಾಜ್ಯ ಸರ್ಕಾರ ಸರ್ಕಾರಿ ಆಸ್ಪತ್ರೆಗಳಿಗೆ ಕೆಡಿಎಲ್​ಡಬ್ಲ್ಯುಎಸ್ ಮೂಲಕ ಔಷಧ ಖರೀದಿಸುತ್ತದೆ. ಇನ್ಮುಂದೆ ಟೆಂಡರ್ ಕರೆಯುವ ಬದಲು ರಾಜ್ಯ ಹಾಗೂ ಕೇಂದ್ರ ಸರ್ಕಾರದ ಜಂಟಿ ಸಹಭಾಗಿತ್ವದ ಕರ್ನಾಟಕ ಆಂಟಿಬಯಾಟಿಕ್ಸ್ ಆಂಡ್ ಫಾರ್ವಸ್ಯುಟಿಕಲ್ಸ್ ಲಿಮಿಟೆಡ್ (ಕೆಎಪಿಎಲ್) ಮಾದರಿಯಲ್ಲಿ ವಿವಿಧ ರಾಜ್ಯಗಳಲ್ಲಿರುವ ಸಂಸ್ಥೆಗಳಿಂದ ಔಷಧ ಖರೀದಿಸುವ ವ್ಯವಸ್ಥೆ ಆರಂಭಿಸಲು ಮುಂದಾಗಿದೆ. ಆದರೆ ತನ್ನದೇ ಪಾಲುದಾರಿಕೆಯ ಸಂಸ್ಥೆಯಿಂದ ಔಷಧ ಖರೀದಿಸಲು ಸರ್ಕಾರ ಲೈಸನಿಂಗ್ ಆಫೀಸರ್ ಎಂಬುವರಿಗೆ ಕಮಿಷನ್ ನೀಡುತ್ತದೆ. 4ಜಿ ವಿನಾಯಿತಿ ಪಡೆದು ಮಾರುಕಟ್ಟೆಗಿಂತ ಹೆಚ್ಚಿನ ದರ ನಮೂದಿಸಿ ಔಷಧ ಮಾರಾಟ ಮಾಡಿ ಕಮಿಷನ್ ಹೆಸರಿನಲ್ಲಿ ನೀಡುವ ಶೇ.10 ಪಾಲನ್ನು ಅಧಿಕಾರಿಗಳಾದಿಯಾಗಿ ಹಂಚಿಕೊಳ್ಳುವುದು ಇದರ ಹಿಂದಿರುವ ಹುನ್ನಾರ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಪತ್ರದಲ್ಲೇನಿದೆ?: ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಏ.28ಕ್ಕೆ ಕೆಎಸ್​ಡಿಎಲ್​ಡಬ್ಲ್ಯುಗೆ ಪತ್ರ ಬರೆದಿದ್ದಾರೆ. ‘ಸರ್ಕಾರದ ಅಧೀನದ ಸಂಸ್ಥೆಗಳಿಂದ ಸಂಗ್ರಹಿಸಬೇಕಾದ ಔಷಧ ಪ್ರಮಾಣವನ್ನು ನಿಗದಿಪಡಿಸಿ, ಸೀಮಿತ ಪ್ರಮಾಣವನ್ನಷ್ಟೇ ಟೆಂಡರ್ ಮೂಲಕ ಸಂಗ್ರಹಿಸುವುದು ಸೂಕ್ತ. ಇದರಿಂದ ವೆಚ್ಚ ಪರಿಣಾಮಕಾರಿ (ಕಡಿಮೆ ವೆಚ್ಚ) ಎಂಬ ನಿರ್ಧಾರಕ್ಕೆ ಬರಲಾಗಿದೆ’ ಎಂದು ಉಲ್ಲೇಖಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net