

ಬೊಗೊಟಾ: ಜೀವಂತ ಗೂಬೆಯ ತಲೆಯನ್ನು ಕತ್ತರಿಸಿದ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟು ತೀವ್ರ ಟೀಕೆ ಗುರಿಯಾಗಿದ್ದ ಯುವತಿಯೊಬ್ಬಳು ಇದೀಗ ಗುಂಡೇಟಿಗೆ ಬರ್ಬರ ಹತ್ಯೆಯಾಗಿರುವ ಘಟನೆ ಕೊಲಂಬಿಯಾದಲ್ಲಿ ನಡೆದಿದೆ.
ಮಿಲೆಡಿಸ್ ಅಲ್ಡಾನಾ (21) ಮೃತ ಯುವತಿ. ಭಾನುವಾರ ಮಧ್ಯಾಹ್ನ ಕೊಲಂಬಿಯಾದ ಸುಕ್ರೆ ರಾಜ್ಯದ ಕರೊಜಾಲ್ ಪಟ್ಟಣದಲ್ಲಿರುವ ನಿವಾಸದ ಹೊರಭಾಗದಲ್ಲಿ ಮೋಟರ್ ಸೈಕಲ್ ಸವಾರನ ಗುಂಡೇಟಿಗೆ ಅಲ್ಡಾನಾ ಬಲಿಯಾಗಿದ್ದಾಳೆ. ಜೀವಂತ ಗೂಬೆಯ ತಲೆಯನ್ನು ಕತ್ತರಿಸಿ, ಒಂದು ಕೈಯಲ್ಲಿ ರುಂಡ ಹಾಗೂ ಮತ್ತೊಂದು ಕೈಯಲ್ಲಿ ಮುಂಡವನ್ನು ಹಿಡಿದುಕೊಂಡಿದ್ದ ವಿಡಿಯೋವನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡಿ ತೀವ್ರ ಟೀಕೆಗೆ ಗುರಿಯಾಗಿದ್ದಾಳು. ಈ ಘಟನೆ ನಡೆದ ಆರು ತಿಂಗಳ ಬಳಿಕ ಅಲ್ಡಾನಾ ಭೀಕರ ಹತ್ಯೆಯಾಗಿದ್ದಾಳೆ.
ಕಳೆದ ಭಾನುವಾರ ಮೋಟರ್ ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅಲ್ಲಿಂದ ಪರಾರಿಯಾಗುವ ಮುನ್ನ ಅಲ್ಡಾನಾ ಮೇಲೆ ಆರು ಬಾರಿ ಗುಂಡಿನ ಮಳೆಗೆರೆದಿದ್ದಾರೆ. ಗಂಭೀರವಾಗಿದ್ದ ಆಕೆಯನ್ನು ತಕ್ಷಣ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದಾದರೂ ಅಷ್ಟರಲ್ಲಾಗಲೇ ಮೃತಪಟ್ಟಿದ್ದಳು.
ಇನ್ನು ಗೂಬೆ ಕೊಂದ ಪ್ರಕರಣದಲ್ಲೂ ಅಲ್ಡಾನಾ ಪೊಲೀಸ್ ವಿಚಾರಣೆ ಎದುರಿಸುತ್ತಿದ್ದಳು. ಕೊಲಂಬಿಯಾ ಪರಿಸರ ಸಂಸ್ಥೆ ಗೂಬೆ ಕೊಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ದೂರು ದಾಖಲಿಸಿತ್ತು. ಇದೇ ಪ್ರಕರಣದಡಿಯಲ್ಲಿ ತನಿಖೆಯು ನಡೆಯುತ್ತಿತ್ತು. ಹೀಗಿರುವಾಗ ಇತ್ತೀಚಿನ ದಿನಗಳಲ್ಲಿ ಅಲ್ಡಾನಾಗೆ ಸಾಕಷ್ಟು ಬೆದರಿಕೆ ಸಂದೇಶಗಳು ಬರುತ್ತಿದ್ದವು. ಆದರೂ ಆಕೆಯ ಕೊಲೆಗೆ ನಿಖರ ಕಾರಣ ಏನೆಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಅಲ್ಡಾನ ಸಾವಿನ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಮೂಕ ಪ್ರಾಣಿಯ ಶಾಪವೇ ಇಂದು ಆಕೆಯ ಬರ್ಬರ ಹತ್ಯೆಗೆ ಕಾರಣವೆಂದು ಪ್ರಾಣಿ ಪ್ರಿಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. (ಏಜೆನ್ಸೀಸ್)