ಟಿಕೆಟ್ ನಿಷೇಧಿಸಿ ಪ್ರಯಾಣಿಕರ ಜೇಬಿಗೆ ಕತ್ತರಿ ಹಾಕುತ್ತಿರುವ ಬಿಎಂಟಿಸಿ

City 4 BMTC
Published on

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳ ಬಸ್ ಸಂಚಾರ ಪುನರಾರಂಭವಾಗಿ 3 ದಿನಗಳಾಗಿವೆ. ಆದರೆ, ಬಿಎಂಟಿಸಿಯ ವಿಭಿನ್ನ ಟಿಕೆಟ್ ವ್ಯವಸ್ಥೆಯಿಂದಾಗಿ ಪ್ರಯಾ ಣಿಕರ ಜೇಬಿಗೆ ಕತ್ತರಿ ಬೀಳುವಂತಾಗಿದೆ.

ಮೇ 31ರವರೆಗೂ ಲಾಕ್​ಡೌನ್ ಇದ್ದರೂ ರಾಜ್ಯ ಸರ್ಕಾರ ತನ್ನ ಅಧಿಕಾರ ಬಳಸಿ ಮಂಗಳವಾರ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಸೇವೆ ಆರಂಭಿಸಿದೆ. ಬೇರೆ ಸಾರಿಗೆ ನಿಗಮಗಳಲ್ಲಿ ಮುಂಗಡ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆ ಇದೆ. ಆದರೆ, ಬಿಎಂಟಿಸಿಯಲ್ಲಿ ಮಾತ್ರ ಬಸ್​ಗಳಲ್ಲಿ ಟಿಕೆಟ್ ನೀಡುವುದನ್ನು ನಿಷೇಧಿಸಲಾಗಿದ್ದು, ಪ್ರಯಾಣಿಕರು ಪಾಸ್ ಖರೀದಿಸಲೇಬೇಕಿದೆ. ಕೇವಲ 10 ರೂ. ಟಿಕೆಟ್ ಬೆಲೆಯಿದ್ದ ಕಡೆಗೆ ಸಂಚರಿಸಬೇಕೆಂದರೂ ಕನಿಷ್ಠ 70 ರೂ. ಖರ್ಚು ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಟಿಕೆಟ್​ನಿಂದ ಬರುತ್ತೆ ಕರೊನಾ?: ಬಿಎಂಟಿಸಿ ಅಧಿಕಾರಿಗಳ ಲೆಕ್ಕಾಚಾರದಂತೆ ನಿರ್ವಾಹಕರಿಂದ ಬಸ್​ಗಳಲ್ಲಿ ಹಣ ನೀಡಿ ಟಿಕೆಟ್ ಖರೀದಿಸಿದರೆ ಕರೊನಾ ಸೋಂಕು ಹರಡುತ್ತದೆ ಎಂದು ಹೇಳಲಾಗುತ್ತದೆ. ಅದೇ ನಿರ್ವಾಹಕರು ನಮ್ಮಿಂದ ಹಣ ಪಡೆದು ಪಾಸ್ ವಿತರಿಸುತ್ತಾರೆ. ಆಗ ಸೋಂಕು ಹರಡುವುದಿಲ್ಲವೇ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಗಳವಾರ 2,106 ಬಸ್​ಗಳಲ್ಲಿ 48,900 ಪಾಸ್ ಖರೀದಿಸಿ ಜನರು ಪ್ರಯಾಣಿಸಿದ್ದರು. ಇದರಿಂದ ನಿಗಮಕ್ಕೆ -ಠಿ;63 ಲಕ್ಷ ಅದಾಯ ಬಂದಿತ್ತು. ಬುಧವಾರ 2,244 ಬಸ್​ಗಳಲ್ಲಿ 65,300 ಪಾಸ್ ಖರೀದಿ ಯಾಗಿದ್ದು, -ಠಿ;84 ಲಕ್ಷ ಆದಾಯ ಬಂದಿದೆ.

ನಷ್ಟ ಸರಿದೂಗಿಸಲು ದುಬಾರಿ ಪಾಸ್?

55 ದಿನ ಬಸ್​ಗಳು ಸಂಚಾರ ಮಾಡದ ಕಾರಣ ಬಿಎಂಟಿಸಿಗೆ 400 ಕೋಟಿ ರೂ.ಗೂ ಹೆಚ್ಚಿನ ನಷ್ಟವಾಗಿದೆ. ಸೇವೆ ಆರಂಭವಾದ ನಂತರ ಟಿಕೆಟ್ ದರ ಹೆಚ್ಚಿಸಿದರೆ ಪ್ರಯಾಣಿಕರು ಆಕ್ರೋಶಗೊಳ್ಳುತ್ತಾರೆ ಎಂಬ ಕಾರಣಕ್ಕಾಗಿ, ಟಿಕೆಟ್ ನೀಡುವ ವ್ಯವಸ್ಥೆಯನ್ನೇ ರದ್ದು ಮಾಡಲಾಗಿದೆ. ಅಲ್ಲದೆ, ಕಡಿಮೆ ಪ್ರಯಾಣ ದರದ ಮಾರ್ಗಕ್ಕೂ ದುಬಾರಿ ಪಾಸ್ ಖರೀದಿಸಿ ಜನರು ಓಡಾಡುವುದರಿಂದ ನಿಗಮಕ್ಕೆ ಆದಾಯವೂ ಬರುತ್ತದೆ ಎಂಬ ಲೆಕ್ಕಾಚಾರ ಅಧಿಕಾರಿಗಳದ್ದಾಗಿದೆ ಎಂದು ಜನರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಕೆಎಸ್​ಆರ್​ಟಿಸಿಯಲ್ಲಿ ಯಥಾಸ್ಥಿತಿ

ಬೆಂಗಳೂರು: ಕೆಎಸ್​ಆರ್​ಟಿಸಿಯಲ್ಲಿ ಕಳೆದೆರಡು ದಿನಗಳ ಮಾದರಿಯಲ್ಲಿಯೇ ಗುರುವಾರ ಬೆಳಗ್ಗೆ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದ್ದ ನಿಲ್ದಾಣ ಗಳು ಮಧ್ಯಾಹ್ನದ ವೇಳೆಗೆ ಖಾಲಿಯಾಗಿದ್ದವು. ಕಲಬುರಗಿ, ಧಾರವಾಡ, ಬೆಳಗಾವಿ, ಹುಬ್ಬಳ್ಳಿ, ಕೋಲಾರ, ಶಿವಮೊಗ್ಗ, ಶಿರಸಿ ಸೇರಿ ರಾಜ್ಯದ ವಿವಿಧ ಸ್ಥಳಗಳಿಗೆ ತೆರಳಲು ಬೆಳಗ್ಗೆ 6 ಗಂಟೆಗೇ ಬಂದಿದ್ದರು. ಅದಾದ ನಂತರ ಕಡಿಮೆ ಸಂಖ್ಯೆಯಲ್ಲಿ ಪ್ರಯಾಣಿಕರು ನಿಲ್ದಾಣದತ್ತ ಬಂದರು. ಮೈಸೂರು ರಸ್ತೆಯ ಸೆಟಲೈಟ್ ಬಸ್ ನಿಲ್ದಾಣದಿಂದ ಮೈಸೂರು, ರಾಮನಗರ, ಚಾಮರಾಜನಗರ, ಮಡಿಕೇರಿ ಭಾಗಗಳಿಗೆ ಬಸ್ ಕಾರ್ಯಾಚರಣೆ ಮಾಡುತ್ತಿದೆ. ಅಲ್ಲಿ ಕೂಡ ಮಧ್ಯಾಹ್ನದ ವೇಳೆ ಪ್ರಯಾಣಿಕರೇ ಇಲ್ಲದಂತಾಗಿತ್ತು.

ಉತ್ತರ ಕರ್ನಾಟಕ ಭಾಗಕ್ಕೆ ಹೆಚ್ಚಿನ ಜನರು ಪ್ರಯಾಣಿಸುತ್ತಿದ್ದಾರೆ. ದೂರದ ಸ್ಥಳಗಳಿಗೆ ತೆರಳುವ ಬಸ್ ಚಾಲಕ- ನಿರ್ವಾಹಕರಿಗೆ ಊಟ, ತಿಂಡಿ ಮತ್ತು ಕುಡಿಯುವ ನೀರಿನದ್ದೇ ಸಮಸ್ಯೆಯಾಗಿದೆ. ಮೆಜೆಸ್ಟಿಕ್ ನಿಲ್ದಾಣದಲ್ಲಿ ರಾತ್ರಿ ತಂಗುವ ಚಾಲನಾ ಸಿಬ್ಬಂದಿಗೆ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಆದರೆ, ದೂರದ ಜಿಲ್ಲೆಗಳಿಗೆ ತೆರಳುವ ಬಸ್ ಚಾಲನಾ ಸಿಬ್ಬಂದಿಗೆ ಮಾರ್ಗ ಮಧ್ಯೆ ಊಟ, ತಿಂಡಿ ಮತ್ತು ನೀರಿನ ಸಮಸ್ಯೆಯಾಗುತ್ತಿದೆ. ಇದರಿಂದಾಗಿ ಸಾಕಷ್ಟು ಚಾಲನಾ ಸಿಬ್ಬಂದಿ ಅನಾರೋಗ್ಯಕ್ಕೆ ತುತ್ತಾಗುವ ಆತಂಕದಲ್ಲಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net