More

    ವ್ಯಾಪಾರಿಗಳಿಂದ ಲಂಚ ಪಡೆದ ಪ್ರಕರಣ: ಎಸಿಪಿ, ಪಿಐಗಳ ವಿರುದ್ಧ ಕೇಸ್

    ಬೆಂಗಳೂರು: ಸಿಗರೇಟ್ ಸಗಟು ವ್ಯಾಪಾರಿಗಳಿಂದ ಲಕ್ಷಾಂತರ ರೂ. ಲಂಚ ಪಡೆದ ಪ್ರಕರಣದಲ್ಲಿ ಸಿಸಿಬಿ ಎಸಿಪಿ ಮತ್ತು ಇನ್​ಸ್ಪೆಕ್ಟರ್​ಗಳ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳದಲ್ಲಿ (ಎಸಿಬಿ) ಪ್ರತ್ಯೇಕ ಮೂರು ಎಫ್​ಐಆರ್ ದಾಖಲಾಗಿವೆ.

    ಸಿಸಿಬಿಯ ಎಸಿಪಿ ಪ್ರಭುಶಂಕರ್ ಹಾಗೂ ಇನ್​ಸ್ಪೆಕ್ಟರ್​ಗಳಾದ ಅಜಯ್ ಮತ್ತು ನಿರಂಜನ್​ಕುಮಾರ್ ವಿರುದ್ಧ ಗುರುವಾರ ಎಫ್​ಐಆರ್ ದಾಖಲಾಗಿವೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಲಂಚ ಸ್ವೀಕಾರ, ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ಎಸಿಬಿ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

    ಇದನ್ನೂ ಓದಿ: ಪುರುಷರ ವಾರ್ಡ್​ನಲ್ಲಿ ಒಳ ಉಡುಪು ಕಾಣುವಂತೆ ಪಾರದರ್ಶಕ ಪಿಪಿಇ ಗೌನ್ ತೊಟ್ಟ ನರ್ಸ್​…!

    ಲಾಕ್​ಡೌನ್ ಕಾರಣ ಏಪ್ರಿಲ್ ಮತ್ತು ಮೇನಲ್ಲಿ ಬೆಂಗಳೂರು ನಗರದಲ್ಲಿ ತಂಬಾಕು ಉತ್ಪನ್ನಗಳ ಮಾರಾಟಕ್ಕೆ ನಿಷೇಧ ವಿಧಿಸಲಾಗಿತ್ತು. ಸಿಸಿಬಿಯ ಕೆಲ ಪೊಲೀಸ್ ಅಧಿಕಾರಿಗಳು ಖಾಸಗಿ ವ್ಯಕ್ತಿಗಳ ಮೂಲಕ ಸಗಟು ವ್ಯಾಪಾರಿಗಳನ್ನು ಸಂಪರ್ಕ ಮಾಡಿ ಸಿಗರೇಟ್ ಮಾರಾಟಕ್ಕೆ ಅನುಮತಿ ನೀಡುವುದಾಗಿ ಹೇಳಿ ಲಕ್ಷಾಂತರ ರೂ. ಲಂಚ ಪಡೆದಿದ್ದರು. ಇದು ಇಲಾಖಾ ವಿಚಾರಣೆ ವೇಳೆ ತಿಳಿದುಬಂದಿದೆ. ಇದಲ್ಲದೆ, ಎನ್-95 ನಕಲಿ ಮಾಸ್ಕ್ ಮಾರಾಟ ಜಾಲದ ಬಗ್ಗೆ ಬಾಣಸವಾಡಿ ಠಾಣೆಯಲ್ಲಿ ದಾಖಲಾದ ಪ್ರಕರಣದಲ್ಲಿ ಆರೋಪಿಗಳಿಗೆ ಸಹಾಯ ಮಾಡುವ ನೆಪದಲ್ಲಿ ಲಕ್ಷಾಂತರ ರೂ. ಲಂಚ ಪಡೆದಿದ್ದಾರೆ. ತಪ್ಪಿತಸ್ಥ ಪೊಲೀಸರ ವಿರುದ್ಧ ಕಾನೂನು ರೀತಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುವಂತೆ ಎಸಿಬಿಗೆ ಪೊಲೀಸ್ ಮಹಾನಿರ್ದೇಶಕ

    ಪ್ರವೀಣ್ ಸೂದ್ ಪತ್ರ ಬರೆದಿದ್ದರು. ಈ ಮೇರೆಗೆ ಎಸಿಬಿ ಬೆಂಗಳೂರು ನಗರ ಘಟಕ ಅಧಿಕಾರಿಗಳು, ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದು ಪ್ರಕರಣ ದಾಖಲಿಸಿದ್ದಾರೆ.

    ಸಿಸಿಬಿ ಕಚೇರಿಯಲ್ಲೇ ಡೀಲ್: ಚಾಮರಾಜಪೇಟೆ ಸಿಸಿಬಿ ಕಚೇರಿಗೆ ಹನುಮಂತನಗರದ ಸಿಗರೇಟು ಸಗಟು ವ್ಯಾಪಾರಿ ಸಂತೋಷ್ ಎಂಬಾತನನ್ನು ಕರೆಸಿಕೊಂಡು ಎಸಿಪಿ ಪ್ರಭುಶಂಕರ್ ಡೀಲ್ ಮಾಡಿದ್ದರು. ಅಕ್ರಮವಾಗಿ ಸಿಗರೇಟ್ ಮಾರಾಟಕ್ಕೆ ಅವಕಾಶ ಕೊಡುವುದಾಗಿ ಏಜೆಂಟ್​ಗಳ ಮೂಲಕ ಲಂಚ ಸ್ವೀಕರಿಸಿದ ಆರೋಪದ ಮೇಲೆ ಕೇಸು ದಾಖಲಾಗಿದೆ.

    ಇದನ್ನೂ ಓದಿ: ವಿವಾಹಿತೆಯೊಂದಿಗೆ ಯುವತಿ ಆತ್ಮಹತ್ಯೆ: ಸಮಾಜ ಒಪ್ಪದ ಸಂಬಂಧವೇ ಇಬ್ಬರಿಗೂ ಮುಳುವಾಯಿತಾ?​

    ಕೇಸ್​ನಿಂದ ಕೈಬಿಡುವ ಭರವಸೆ: ಬಾಣಸವಾಡಿಯಲ್ಲಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ನಕಲಿ ಮಾಸ್ಕ್ ಜಾಲದ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಪ್ರಕರಣ ದಾಖಲಿಸಿದ್ದರು. ಆ ನಂತರ ಕೇಸ್​ನಿಂದ ಪಾರು ಮಾಡುವುದಾಗಿ ಆರೋಪಿಗಳಿಂದ ಲಕ್ಷಾಂತರ ರೂ. ಲಂಚ ಪಡೆದಿದ್ದಾರೆ. ಇದರಲ್ಲಿ ಪ್ರಭುಶಂಕರ್, ಮತ್ತು ಅಜಯ್ ಸೇರಿ ಇತರರು ಕೈ ಜೋಡಿಸಿರುವುದು ಬೆಳಕಿಗೆ ಬಂದಿದೆ.

    ನೋಟಿಸ್ ಕೊಟ್ಟು ವಿಚಾರಣೆ

    ಮೊದಲು ಆರೋಪ ಹೊತ್ತ ಎಸಿಪಿ ಮತ್ತು ಇನ್​ಸ್ಪೆಕ್ಟರ್​ಗಳಿಗೆ ನೋಟಿಸ್ ಕೊಟ್ಟು ವಿಚಾರಣೆ ನಡೆಸಲಾಗುತ್ತದೆ. ಆ ನಂತರ ಹಣ ಕೊಟ್ಟಿರುವ ಸಿಗರೇಟ್ ಸಗಟು ವ್ಯಾಪಾರಿಗಳಿಂದ ಹೇಳಿಕೆ ದಾಖಲಿಸಿಕೊಂಡು ಸೂಕ್ತ ಸಾಕ್ಷ್ಯಾಧಾರ ಸಂಗ್ರಹಿಸಿ ಮುಂದಿನ ಕ್ರಮ ತೆಗೆದುಕೊಳ್ಳಲಾಗುತ್ತದೆ. ಎಸಿಬಿ ಆಡಳಿತ ವಿಭಾಗ ಎಸ್​ಪಿ ಅಬ್ದುಲ್ ಅಹದ್ ಅವರಿಗೆ ತನಿಖೆ ಜವಾಬ್ದಾರಿ ವಹಿಸಲಾಗಿದೆ.

    ಇದನ್ನೂ ಓದಿ: ಕುಟುಂಬದಿಂದ ದೂರಾದ ಕಿನ್ನರಿ!

    8 ಮಂದಿ ಹೇಳಿಕೆ ದಾಖಲು

    ಬೆಂಗಳೂರು: ಸಿಗರೇಟ್ ವ್ಯಾಪಾರಿಗಳಿಂದ 62.5 ಲಕ್ಷ ರೂ. ಸುಲಿಗೆ ಆರೋಪ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಪ್ರಭುಶಂಕರ್, ನಿರೀಕ್ಷಣಾ ಜಾಮೀನು ಪಡೆದು ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ಮುಂದೆ ಹಾಜರಾಗಿದ್ದರು. ಪಶ್ಚಿಮ ವಿಭಾಗ ಡಿಸಿಪಿ ಕಚೇರಿಗೆ ಹಾಜರಾಗಿದ್ದ ಪ್ರಭುಶಂಕರ್ ಅವರನ್ನು ಡಿಸಿಪಿ ರಮೇಶ್ ಬಾನೋತ್ 4 ತಾಸು ವಿಚಾರಣೆ ನಡೆಸಿದರು. ಮತ್ತೆ ವಿಚಾರಣೆಗೆ ಬರುವಂತೆ ನೋಟಿಸ್ ಕೊಟ್ಟು ಕಳುಹಿಸಿದ್ದರು. ವಿಚಾರಣೆ ಬಳಿಕ ಎಸಿಪಿ, ಕಾಟನ್​ಪೇಟ್ ಠಾಣೆಗೆ ತೆರಳಿ ನಿರೀಕ್ಷಣಾ ಜಾಮೀನು ಪ್ರತಿ ಕೊಟ್ಟು ಪ್ರಕ್ರಿಯೆ ಮುಗಿಸಿದ್ದಾರೆ. ಗುರುವಾರ ಎಸಿಬಿ ಎಫ್​ಐಆರ್ ದಾಖಲಿಸಿದ ಮೇಲೆ ಮತ್ತೆ ಬಂಧನ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ. ಸುಲಿಗೆ ಪ್ರಕರಣ ಸಂಬಂಧ ದೂರುದಾರರು ಮತ್ತು 8 ಮಂದಿ ಸಿಗರೇಟ್ ಸಗಟು ವ್ಯಾಪಾರಿಗಳ ಹೇಳಿಕೆಯನ್ನು ಡಿಸಿಪಿ ರಮೇಶ್ ಪಡೆದಿದ್ದಾರೆ. ಯಾವಾಗ ಸಿಸಿಬಿ ಎಸಿಪಿ ಮತ್ತು ಇನ್​ಸ್ಪೆಕ್ಟರ್​ಗಳು ಭೇಟಿಯಾಗಿದ್ದರು, ಎಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದರು. ನೀವೆಷ್ಟು ಹಣ ಕೊಟ್ಟಿದ್ದೀರಾ ಎಂಬ ಪ್ರಶ್ನೆಗಳಿಗೆ ಉತ್ತರ ಪಡೆದಿದ್ದಾರೆ. ಇನ್​ಸ್ಪೆಕ್ಟರ್ ನಿರಂಜನಕುಮಾರ್ ಸಲ್ಲಿಸಿರುವ ನಿರೀಕ್ಷಣಾ ಜಾಮೀನು ಅರ್ಜಿಗೆ ಪಶ್ಚಿಮ ವಿಭಾಗದ ಪೊಲೀಸರು ಆಕ್ಷೇಪಣೆ ಸಲ್ಲಿಸಿದ್ದಾರೆ. ಗಂಭೀರ ಸ್ವರೂಪದ ಪ್ರಕರಣವಾಗಿದೆ ಎಂದು ಕೋರ್ಟ್​ಗೆ ತಿಳಿಸಿ ಜಾಮೀನು ನೀಡದಂತೆ ಕೋರಿದ್ದಾರೆ.

    ಬ್ರೆಜಿಲ್ ಈಗ ಜಾಗತಿಕ ಮಟ್ಟದ ಕರೊನಾ ಹಾಟ್ ಸ್ಪಾಟ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts