ಕುಟುಂಬದಿಂದ ದೂರಾದ ಕಿನ್ನರಿ!

bhoomi shety
Published on

ಕೆ.ಬಿ. ಶುಭ ಬೆಂಗಳೂರು

ಸದಾ ಪಟಪಟ ಅಂತ ಮಾತನಾಡುವ ಹುಡುಗಿಗೆ ಯಾರು ಇಲ್ಲದ ಒಂದು ಕೋಣೆಯಲ್ಲಿ ಕೂಡಿ ಹಾಕಿದರೆ ಹೇಗಿರುತ್ತದೆ ಹೇಳಿ? ಅಂಥದ್ದೇ ಪರಿಸ್ಥಿತಿಯಲ್ಲಿ ‘ಕಿನ್ನರಿ’ ಎಂದೇ ಮನೆಮನೆಯಲ್ಲೂ ಪರಿಚಿತರಾಗಿದ್ದ ಭೂಮಿ ಶೆಟ್ಟಿ ಇತ್ತೀಚೆಗೆ ಇದ್ದರು ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ.

‘ಬಿಗ್ ಬಾಸ್-7’ ರಲ್ಲಿ ಸ್ಪರ್ಧಿಯಾಗಿದ್ದ ಭೂಮಿಯ ತುಂಟಾಟ, ಹಾವ-ಭಾವ, ಮಾತುಗಳಿಗೆ ಮನಸೋಲದವರು ಕಡಿಮೆ. ಆ ಮನೆಯಿಂದ ಹೊರ ಬಂದ ಮೇಲೆ ಮನೆ ಊಟ, ಸುತ್ತಾಟದಂತಹ ಸಾಕಷ್ಟು ಪ್ಲಾನ್ಸ್ ಹಾಕೊಳ್ಳಲಾಗಿತ್ತಂತೆ. ಆದರೆ, ತನ್ನ ಬಯಕೆಗಳನ್ನು ಈಡೇರಿಸಿಕೊಳ್ಳುವ ಮುನ್ನವೇ ಮನೆಯವರಿಂದ ಅಗಲಿ ಬೆಂಗಳೂರಿನಲ್ಲಿ ಲಾಕ್​ಡೌನ್ ಸಮಯದಲ್ಲಿ ಲಾಕ್ ಆಗಿದ್ದರಂತೆ.

ಹೀಗೆ ಒಬ್ಬಂಟಿಯಾಗಿ ತನ್ನ ಮನೆಯಲ್ಲಿ ಒಂದು ವಾರ ಕಳೆಯುವುದು ಕಷ್ಟವಾದ ಭೂಮಿಗೆ ತಕ್ಷಣ ನೆನಪಾಗಿದ್ದು ಸಹೋದರಿ ಮನೆ. ಒಂದು ವಾರ ಮನೆಯಲ್ಲಿ ಸೋಮಾರಿ ತರಹ ಇದ್ದ ಭೂಮಿ, ಸಹೋದರಿ ಮನೆ ಸೇರಿದೊಡನೆ ಕೀ ಬೋರ್ಡ್ ಮೇಲೆ ಲವ್ ಆಗಿದೆ. ಸಹೋದರಿ ಸಹಾಯದಿಂದ ಕೀ ಬೋರ್ಡ್ ಕಲಿಯಲು ಪ್ರಾರಂಭಿಸಿ ಮೊದಲಿಗೆ ‘ಕಲ್ ಹೋನಾ ಹೋ...’ ಹಾಡನ್ನು ಕಲಿತಿದ್ದಾರೆ. ನಂತರ ಕುತೂಹಲ ಹೆಚ್ಚಾಗಿ ಪ್ರತಿನಿತ್ಯ ಅಭ್ಯಾಸ ಮಾಡಿ, ಈಗ ಒಂದು ಹಂತಕ್ಕೆ ಕೀಬೋರ್ಡ್ ನುಡಿಸುವಷ್ಟು ಕಲಿತಿದ್ದಾರಂತೆ.

ಇನ್ನು ಲಾಕ್​ಡೌನ್ ತರಹವೇ ‘ಬಿಗ್ ಬಾಸ್’ ಮನೆಯಲ್ಲೂ ಇತ್ತು ಅಲ್ವಾ ಅಂದರೆ, ‘ಒಂದು ರೀತಿಯಲ್ಲಿ ಹೌದು. ಆದರೆ, ಅಲ್ಲಿ ಡಿಸಿಪ್ಲೀನ್ ಇತ್ತು. ಸ್ನೇಹಿತರು ಜೊತೆಗಿರುತ್ತಿದ್ದರು. ಸದಾ ಚಟುವಟಿಕೆಗಳಿದ್ದವು. ಹಾಗಾಗಿ ‘ಬಿಗ್ ಬಾಸ್’ ಮನೆಯಲ್ಲಿದ್ದಿದ್ದು ಗೊತ್ತಾಗಲಿಲ್ಲ’ ಎಂಬ ಅಭಿಪ್ರಾಯ ಅವರಿಂದ ಬರುತ್ತದೆ.

ವರ್ಕಔಟ್​ಗೆ ರೆಸ್ಟ್ ಕೊಟ್ಟಿದ್ದೇನೆ!: ಲಾಕ್​ಡೌನ್ ಸಮಯದಲ್ಲಿ ಎಲ್ಲರೂ ಮನೆಯಲ್ಲೇ ವರ್ಕಔಟ್ ಮಾಡಲು ಮುಂದಾದರೆ, ಭೂಮಿ ವರ್ಕ್​ಔಟ್​ಗೆ ರೆಸ್ಟ್ ಕೊಟ್ಟಿದ್ದಾರಂತೆ. ವರ್ಕ್ ಔಟ್​ಗೆ ಬೇಸರ ಆಗಬಾರದು ಎಂದು ವಾರದಲ್ಲಿ ಆಗೊಮ್ಮೆಈಗೊಮ್ಮೆ ಅತ್ತ ಮುಖ ಮಾಡುತ್ತಾರಂತೆ. ‘ಲಾಕ್​ಡೌನ್ ಆರಂಭದ ದಿನಗಳಲ್ಲಿ ಬೆಳಗ್ಗೆ ಬೇಗನೆ ಎದ್ದು, ಸೂರ್ಯನ ದರ್ಶನ ಮಾಡಿ, ಅವನಿಗೊಂದಿಷ್ಟು ನಮಸ್ಕಾರ ಹೊಡೆದು, ಸಂಜೆ ವರ್ಕ್ ಔಟ್ ಮಾಡುತ್ತಿದ್ದೆ. ಬರುಬರುತ್ತಾ ಸೋಮಾರಿ ಎನ್ನುವ ಸ್ನೇಹಿತ ಬೆನ್ನೇರಿದ ಎಂದು ಬಾಯಿ ತುಂಬ ನಗುತ್ತಾರೆ ಅವರು. ಮೊದಲಿನಿಂದಲೂ ಓದುವ, ಬರೆಯುವ ಅಭ್ಯಾಸ ಬೆಳೆಸಿಕೊಂಡಿದ್ದು ಲಾಕ್​ಡೌನ್ ಸಮಯದಲ್ಲಿ ಬಹಳ ಸಹಾಯಕ್ಕೆ ಬಂದಿತು ಎನ್ನುತ್ತಾರೆ. ಸದ್ಯ ಚಾನೆಲ್ ಒಂದರ ಜತೆ ಹೊಸ ಪ್ರಾಜೆಕ್ಟ್ ಕುರಿತು ಮಾತುಕತೆ ನಡೆಯುತ್ತಿದೆ. ಅವರು ಗ್ರೀನ್ ಸಿಗ್ನಲ್ ನೀಡುವವರೆಗೆ ಮಾತನಾಡುವಂತಿಲ್ಲ’ ಎನ್ನುತ್ತಾರೆ ಭೂಮಿ.

ಸಮಾಜ ಸೇವೆಗೂ ಜೈ

ಲಾಕ್​ಡೌನ್ ಸಮಯದಲ್ಲಿ ಭೂಮಿ ತಮ್ಮ ಸ್ನೇಹಿತರ ಜತೆ ಸೇರಿ ಬಡವರಿಗೆ, ತಳ್ಳುಗಾಡಿಯವರಿಗೆ, ಪೊಲೀಸರಿಗೆ ಮನೆಯಲ್ಲೇ ಅಡುಗೆ ಮಾಡಿ ಆಹಾರ ವಿತರಿಸಿದ್ದಾರೆ. ಅಲ್ಲದೇ ತಾಳಿಕೋಟೆಯಲ್ಲಿರುವ ಅಸಹಾಯಕರಿಗೆ ಧನಸಹಾಯ ಮಾಡಿದ್ದಾರೆ.

ಅಡುಗೆ ಮಾಡಲು ಕಲಿತೆ

ಬರೀ ಗಿಟಾರ್ ಮಾತ್ರವಲ್ಲ, ಅಡುಗೆ ಮಾಡುವುದನ್ನೂ ಅವರು ಈ ಸಂದರ್ಭದಲ್ಲಿ ಕಲಿತಿದ್ದಾರೆ. ಕಲಿತರು ಎನ್ನುವುದಕ್ಕಿಂತ ಈ ಲಾಕ್​ಡೌನ್ ಕಲಿಸಿತು ಎಂಬುದು ಅವರ ಅಭಿಪ್ರಾಯ. ‘ಲಾಕ್​ಡೌನ್ ಆರಂಭದ 10 ದಿನಗಳು ಈ ಸಿಟಿ ಜೀವನವೇ ಬೇಡ ಎನ್ನುವಷ್ಟು ರೋಸಿ ಹೋಗಿದ್ದೆ. ಕ್ರಮೇಣ ಜೀವನ, ಕೆಲಸ, ಸಮಾಜದ ಮೇಲೆ ಪ್ರೀತಿ, ಅಭಿಮಾನ ಮೂಡಿತು. ಜೀವನ ಎಂದರೆ ಏನು ಎನ್ನುವುದನ್ನು ಸ್ವಲ್ಪ ಮಟ್ಟಿಗೆ ಈ ಲಾಕ್​ಡೌನ್ ಕಲಿಸಿತು’ ಎನ್ನುತ್ತಾರೆ ಭೂಮಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net