

ಮಂಗಳೂರು: ತಮ್ಮ ನೇರ ಮಾತು ಹಾಗೂ ಮ್ಯಾನರಿಸಂ ಮೂಲಕವೇ ಹೆಚ್ಚು ಖ್ಯಾತಿ ಪಡೆದಿರುವ ಕಿಚ್ಚ ಸುದೀಪ್ ಪ್ರಸ್ತುತ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕನ್ನಡ ಮಾತ್ರವಲ್ಲೇ ಪರಭಾಷೆಗಳಲ್ಲಿಯೂ ಅಪಾರ ಅಭಿಮಾನಿಗಳನ್ನು ಹೊಂದಿರುವ ನಟ ಕಿಚ್ಚ ಸುದೀಪ್ಗೆ ಮಂಗಳೂರು ಎಂದರೆ ಎಲ್ಲಿಲ್ಲದ ಪ್ರೀತಿ ಎಂದು ಹೇಳಬಹುದಾಗಿದೆ. ಏಕೆಂದರೆ ಸುದೀಪ್ ಅವರ ತಾಯಿ ಮಂಗಳೂರಿನವರು. ಹೀಗಾಗಿ, ಅವರಿಗೆ ಮಂಗಳೂರಿನ ಬಗ್ಗೆ ವಿಶೇಷ ಪ್ರೀತಿ ಇದೆ.
ಇತ್ತೀಚಿಗೆ ಮಂಗಳೂರಿನಲ್ಲಿ ಯಕ್ಷ ಧ್ರುವ ಪಟ್ಲ ಫೌಂಡೇಶನ್ ಆಯೋಜಿಸಿದ್ದ ಯಕ್ಷ ಧ್ರುವ ಪಟ್ಲ ಸಂಭ್ರಮದಲ್ಲಿ ಭಾಗಿಯಾಗಿದ್ದ ನಟ ಕಿಚ್ಚ ಸುದೀಪ್ ಕರಾವಳಿ ಜನ ತುಂಬಾ ಸ್ವಾಭಿಮಾನಿಗಳು. ಇಲ್ಲಿಯ ಜನ ಅಷ್ಟು ಬೇಗ ಯಾರನ್ನೂ ಇಷ್ಟಪಡಲ್ಲ ಎಂದು ಹೇಳುವ ಮೂಲಕ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದಾರೆ.
ಎಲ್ಲರಿಗೂ ನಮಸ್ಕಾರ. ವೇದಿಕೆ ಮೇಲಿದ್ದವರು ನಮ್ಮ ತುಳುನಾಡಿಗೆ ನಮ್ಮ ತುಳುನಾಡಿಗೆ ಎಂದು ನಮ್ಮನ್ನು ಹೊರಗಿನವರನ್ನಾಗಿ ಮಾಡುತ್ತಿದ್ದಾರೆ. ತುಳುನಾಡು ಕರ್ನಾಕಟದಲ್ಲೇ ಇದೆ. ಕರ್ನಾಟಕ ನಮ್ಮ ಹೃದಯದಲ್ಲಿದೆ. ನಾವು ಅರ್ಧ ಈಕಡೆಯವರು ಎಂದು ನಿರೂಪಕರು ಹೇಳಿದರು. ನಮ್ಮ ತಂದೆಗೆ ಇಡೀ ಕರ್ನಾಟಕದಲ್ಲಿ ಮಂಗಳೂರಿನ ಹುಡುಗಿ ಇಷ್ಟ ಆಯ್ತು ಎಂದು ಹೇಳಿದ್ದಾರೆ.
ಪ್ರತಿ ಬಾರಿ ಇಲ್ಲಿಗೆ ಕರೆದಾಗ ಬಹಳ ಖುಷಿ ಆಗುತ್ತದೆ. ಈ ಊರಿನ ಬಗ್ಗೆ ಗೊತ್ತಿರೋದು ಎಂದರೆ ಅವರು ಸ್ವಾಭಿಮಾನಿಗಳು. ಬಹಳ ಸುಲಭವಾಗಿ ಯಾರನ್ನೂ ಇಷ್ಟಪಡಲ್ಲ. ಅಂಥಹುದರಲ್ಲಿ ಮನಸ್ಸಲ್ಲಿ ನನಗೆ ಸಣ್ಣ ಜಾಗ ಕೊಟ್ಟಿದ್ದೀರಿ. ಅದು ಪೀಠಕ್ಕಿಂತ ದೊಡ್ಡದು. ನಿಮ್ಮ ಗೌರವ ಸ್ವೀಕರಿಸಿಲ್ಲ ಎಂದುಕೊಳ್ಳಬೇಡಿ. ಅದನ್ನು ಸ್ವೀಕರಿಸಿದ್ರೆ ನಾನು ಅದಕ್ಕಾಗಿಯೇ ಬಂದೆ ಎಂದುಕೊಳ್ಳುತ್ತಾರೆ. ನಾನು ಬಂದಿದ್ದು ನನ್ನ ಸ್ನೇಹಿತರಿಗೆ.
ನನ್ನ ತಾಯಿ ತುಳು ಚೆನ್ನಾಗಿ ಮಾತಾಡ್ತಾರೆ. ನನಗೆ ಜಾಸ್ತಿ ತುಳು ಬರಲ್ಲ. ಕನ್ನಡ ಚಿತ್ರರಂಗಕ್ಕೆ ನಿಮ್ಮವರು ತುಂಬಾ ಜನ ಬಂದಿದ್ದಾರೆ. ಇದರಿಂದ ಕನ್ನಡ ಯಾವುದು, ತುಳು ಯಾವುದು ಅನ್ನೋದು ತಿಳಿಯುತ್ತಿಲ್ಲ’ ಎಂದು ಹಾಸ್ಯ ಮಾಡಿದರು. ತುಳು ಚಿತ್ರರಂಗದಿಂದ ಕನ್ನಡ ಚಿತ್ರರಂಗಕ್ಕೆ ಬಂದು ಉತ್ತಮ ಸಿನಿಮಾ ನೀಡುತ್ತಿದ್ದೀರಾ ಎಂದು ನಟ ಕಿಚ್ಚ ಸುದೀಪ ಮೆಚ್ಚುಗೆ ಸೂಚಿಸಿದ್ದಾರೆ.