

ಬೆಂಗಳೂರು: ಕರೊನಾ ಸೋಂಕಿತರು, ಶಂಕಿತರ ಪತ್ತೆಯಲ್ಲಿ ನಿಖರ ಫಲಿತಾಂಶದ ಜತೆಗೆ ಕೇಂದ್ರ ಸರ್ಕಾರದ ಮಾನ್ಯತೆ ಪಡೆದಿರುವ ‘ಆರೋಗ್ಯ ಸೇತು’ ಆಪ್ ಅಭಿವೃದ್ಧಿಪಡಿಸಿದ ಶ್ರೇಯಸ್ಸು ರಾಜ್ಯದ ಯುವಕರಿಬ್ಬರಿಗೆ ಸಲ್ಲುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ಬಹಿರಂಗಪಡಿಸಿದರು.
ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಗೋ ಇಬಿಬೋ ಕಂಪನಿಯ ಮುಖ್ಯ ತಾಂತ್ರಿಕ ಅಧಿಕಾರಿ ವಿಕಲ್ಪ ಸಹಾನಿ ಹಾಗೂ ಹಿರಿಯ ಉಪಾಧ್ಯಕ್ಷ ರಾಹುಲ್ ಗೋಯಲ್ ಈ ಸಾಧನೆ ಮಾಡಿದ್ದು, ಪರೀಕ್ಷೆ, ಎಚ್ಚರಿಕೆ, ಕ್ವಾರಂಟೈನ್ ಹಾಗೂ ಸುರಕ್ಷತಾ ಪ್ರದೇಶದ ಕುರಿತು ಸ್ಪಷ್ಟ ಮಾಹಿತಿ ಒದಗಿಸುವುದು ಆಪ್ನ ಹೆಗ್ಗಳಿಕೆಯಾಗಿದೆ ಎಂದರು.
ರಾಜ್ಯದ 67 ಲಕ್ಷ ಸೇರಿ ದೇಶದಲ್ಲಿ 11 ಕೋಟಿ ಜನರು ಆರೋಗ್ಯ ಸೇತು ಆಪ್ ಡೌನ್ಲೋಡ್ ಮಾಡಿಕೊಂಡಿದ್ದಾರೆ. ದೇಶದಲ್ಲಿ 1,000 ಕರೊನಾ ಶಂಕಿತರಿಗೆ ಸರಾಸರಿ 7.5 ದೃಢಪಡುತ್ತಿದ್ದರೆ, ಈ ಆಪ್ ಮೂಲಕ 30 ಪ್ರಕರಣಗಳು ದೃಢಪಡುತ್ತಿದೆ. ಆಪ್ನ ನಿಖರತೆಗೆ ನಿರ್ದಶನವಿದು. ಸ್ವಯಂ ಪರೀಕ್ಷೆಗೆ ಅವಕಾಶ, ದೈಹಿಕ ಅಂತರದ ಜತೆಗೆ ಎಚ್ಚರಿಕೆ ಸಂದೇಶವನ್ನು ನೀಡುತ್ತದೆ ಎಂದರು.
ಕಡ್ಡಾಯಕ್ಕೆ ಇಷ್ಟರಲ್ಲೇ ಆದೇಶ: ಗ್ರಾಪಂನಿಂದ ಹಿಡಿದು ವಿಧಾನಸೌಧದವರೆಗೆ ಎಲ್ಲ ಸಿಬ್ಬಂದಿ ಹಾಗೂ ಅಧಿಕಾರಿಗಳು ಆರೋಗ್ಯ ಸೇತು ಆಪ್ ಡೌನ್ಲೋಡ್ ಮಾಡಿಕೊಳ್ಳುವುದು ಕಡ್ಡಾಯ. ಇಲ್ಲದಿದ್ದರೆ, ಕಚೇರಿಗೆ ಪ್ರವೇಶ ಇಲ್ಲವೆಂಬ ಕುರಿತು ಅಧಿಕಾರಿಗಳ ಜತೆ ಮತ್ತೊಂದು ಸುತ್ತಿನ ಜತೆ ಚರ್ಚೆ ನಡೆಸಿ ಸುತ್ತೋಲೆ ಹೊರಡಿಸಲಾಗುವುದು. ಡೌನ್ಲೋಡ್ ಮಾಡಿಕೊಂಡಿದ್ದರೆ ಮೇಲುಸ್ತುವಾರಿ ಸಹಿತ ನಿರ್ವಹಣಾ ಕ್ರಮಗಳ ಮಾರ್ಗಸೂಚಿ (ಎಸ್ಒಪಿ) ಒದಗಿಸಲಿದ್ದು, ವೈಯಕ್ತಿಕ ಆರೋಗ್ಯ ಹಾಗೂ ದೇಶದ ರಕ್ಷಣೆ ದೃಷ್ಟಿಯಿಂದ ಖಾಸಗಿ ಕಂಪನಿ ನೌಕರರು ಹಾಗೂ ಸಾರ್ವಜನಿಕರು ಆಪ್ ಡೌನ್ಲೋಡ್ ಮಾಡಿಕೊಳ್ಳಬೇಕು ಎಂದು ಸಚಿವರು ವಿನಂತಿಸಿದರು.
ಕೇಂದ್ರದ ಪ್ರಯತ್ನ ಪ್ರೇರಣೆ
ಕರೊನಾ ಶಂಕಿತರು ಹಾಗೂ ಸೋಂಕಿತರ ಪತ್ತೆ, ಪರೀಕ್ಷೆ ಹಾಗೂ ತ್ವರಿತ ಚಿಕಿತ್ಸೆಗೆ ನೆರವು ನೀಡುತ್ತಿರುವ ‘ಆರೋಗ್ಯ ಸೇತು’ ಆಪ್ ಆವಿಷ್ಕಾರಕ್ಕೆ ಕೇಂದ್ರ ಸರ್ಕಾರದ ಪ್ರಯತ್ನವೇ ಪ್ರೇರಣೆ ಎಂದು ಗೋ ಇಬಿಬೋ ಕಂಪನಿ ಹಿರಿಯ ಉಪಾಧ್ಯಕ್ಷ ರಾಹುಲ್ ಗೋಯಲ್ ಗುರುವಾರ ‘ವಿಜಯವಾಣಿ’ಯೊಂದಿಗೆ ಸಂತಸ ಹಂಚಿಕೊಂಡರು. ಮಾರಕ ಪಿಡುಗು ಬಾಧಿತರು ಹಾಗೂ ಅನುಮಾನ ಇರುವವರ ಬಗ್ಗೆ ಆಡಳಿತ ಯಂತ್ರಾಂಗ ಬಳಸಿಕೊಳ್ಳುತ್ತಿರುವುದನ್ನು ಗಮನಿಸಿ, ಲಭ್ಯ ತಂತ್ರಜ್ಞಾನ ಬಳಕೆ ಸೂಕ್ತವೆನಿಸಿತು. ಈ ದಿಸೆಯಲ್ಲಿ ಕಂಪನಿಯ ಮತ್ತೊಬ್ಬ ಸಹೋದ್ಯೋಗಿ ಮುಖ್ಯ ತಾಂತ್ರಿಕ ಅಧಿಕಾರಿ ವಿಕಲ್ಪ ಸಹಾನಿ ಜತೆಗೂಡಿ ಇಂಥ ಪ್ರಯತ್ನಕ್ಕೆ ಕೈಹಾಕಿದೆವು. ಆಪ್ಗಳ ಅಭಿವೃದ್ಧಿಯಲ್ಲಿನ ಅನುಭವ, ಕೌಶಲ ಬಳಸಿಕೊಂಡು 18 ದಿನಗಳಲ್ಲಿ ನಿಖರ ಫಲಿತಾಂಶ ಹಾಗೂ ಪರಿಣಾಮಕಾರಿ ಕ್ರಮಕ್ಕೆ ಅನುಕೂಲವಾಗುವ ಆಪ್ ಅಭಿವೃದ್ಧಿಪಡಿಸಲಾಯಿತು. ಕೇಂದ್ರ ಸರ್ಕಾರ ಈ ಆಪ್ಗೆ ನೀಡಿದ ಮಾನ್ಯತೆ, ರಾಜ್ಯ ಸರ್ಕಾರದ ಪ್ರೋತ್ಸಾಹ ಖುಷಿ ತಂದಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ದೇಶದ ಜನರ ಆರೋಗ್ಯ ರಕ್ಷಣಾ ಕೆಲಸದಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವುದು ತೃಪ್ತಿಕೊಟ್ಟಿದೆ ಎಂದು ರಾಹುಲ್ ಹೇಳಿದರು.