ನನ್ನದೂ ಆಗಲೂ ಈಗಲೂ ಒಂದೇ ಮಾತು, ಅದು ಬಿಜೆಪಿಗೆ ಬಹುಮತ: ಸಿಎಂ ಬೊಮ್ಮಾಯಿ‌ ಹೇಳಿಕೆ

CM Bommai
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
Published on

ಬೆಂಗಳೂರು: ಚುನಾವಣೆಗೆ ಮುಂಚೆ, ನಂತರ ಯಾವುದೇ ಇರಲಿ. ಸಮೀಕ್ಷೆಗಳು ಏನೇ ಹೇಳಿರಲಿ. ನನ್ನದು ಆಗಲೂ ಈಗಲೂ ಒಂದೇ ಮಾತು. ಅದು, ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆ. ಗ್ರೌಡ್ ರಿಪೋರ್ಟ್ ಕೂಡ ಅದೇ ಹೇಳುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು.

ಆರ್ ಟಿ ನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ವಸ್ತುಸ್ಥಿತಿ ವರದಿಯನ್ನು ವರಿಷ್ಠರಿಗೆ ಸಲ್ಲಿಸಿರುವೆ. ಬಿಜೆಪಿ ಗಳಿಸಲಿರುವ ನಂಬರ್ ಗಳ ಬಗ್ಗೆ ಹಿರಿಯ ನಾಯಕ ಹೇಳಿದ್ದೇ ನನ್ನ ನಂಬರ್. ಇಬ್ಬರದೂ ಬೇರೆ ನಂಬರ್ ಗಳಿಲ್ಲ ಎಂದರು.

ಕಾಂಗ್ರೆಸ್ ಕುಟುಕು

ಕಾಂಗ್ರೆಸ್ ನವರಿಗೆ ಬಹುಮತ ಬರಲ್ಲ. ಹಾಗಾಗಿ ಬೇರೆ ಪಕ್ಷದವರ ಜತೆ ಮಾತನಾಡಲು ಪ್ರಯತ್ನಿಸುತ್ತಿದ್ದಾರೆ. ಅವರ ಪಕ್ಷದ ಶಾಸಕರ ಮೇಲೆ ಅವರಿಗೆ ನಂಬಿಕೆ ಇಲ್ಲ ಎಂದಾಯಿತು ಎಂದು ಸಿಎಂ ಬೊಮ್ಮಾಯಿ‌ ಕುಟುಕಿದರು.

ಮೈತ್ರಿ ಸಂದರ್ಭವೇ ಬರುವುದಿಲ್ಲ. ಈಗ ನಮ್ಮ ಮುಂದೆ ಆ ಪ್ರಶ್ನೆ ಇಲ್ಲ. ನಾವು ಬಹುಮತದ ಸಂಖ್ಯೆ ದಾಟುತ್ತೇವೆ. ಕಾಂಗ್ರೆಸ್‌ನವರು ಏನೇ ಸಭೆ ಮಾಡಲಿ. ಆ ಬಗ್ಗೆ ನಾವೇಕೆ ಯೋಚಿಸಬೇಕು. ಅವರಿಗೆ ಸಭೆ ಮಾಡುವ ಹಕ್ಕಿದೆ ಮಾಡಿಕೊಳ್ಳುತ್ತಾರೆ. ಎಲ್ಲ ಪಕ್ಷಗಳೂ ಸಭೆ ಮಾಡುವುದು ಹೊಸದೇನಲ್ಲ ಎಂದು ಬೊಮ್ಮಾಯಿ‌ ಹೇಳಿದರು.

ಎಂಟಿಬಿ, ಸೋಮಣ್ಣ ಭೇಟಿ

ಆರ್ ಟಿ ನಗರ ನಿವಾಸಕ್ಕೆ ದೌಡಾಯಿಸಿದ ವಿ.ಸೋಮಣ್ಣ, ಚಾಮರಾಜನಗರ ಮತ್ತು ವರುಣಾ ಕ್ಷೇತ್ರದ ಅಂಕಿಅಂಶಗಳನ್ನು ವಿವರಿಸಿದರೆ, ಹೊಸಕೋಟೆ ಕ್ಷೇತ್ರದಲ್ಲಿ ದಾಖಲೆಯ ಮತದಾನ ಆಗಿರುವುದಕ್ಕೆ ಖುಷಿಯಿಂದ ಉಬ್ಬಿರುವ ಎಂಟಿಬಿ ತಮ್ಮದೇ ಗೆಲುವು ಎಂಬ ವಿಶ್ವಾಸವನ್ನು ಸಿಎಂ ಮುಂದೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net