ISSF ವರ್ಲ್ಡ್​ಕಪ್​: ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಕನ್ನಡತಿ

divya and sarabjot singh
Published on

ಬಾಕು: ಅಜರ್‌ಬೈಜಾನ್‌ನ ಬಾಕುದಲ್ಲಿ ನಡೆದ ಐಎಸ್‌ಎಸ್‌ಎಫ್ ವಿಶ್ವಕಪ್‌ ಮಿಶ್ರ ತಂಡದ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಸರಬ್ಜೋತ್ ಸಿಂಗ್ ಮತ್ತು ಟಿಎಸ್ ದಿವ್ಯಾ ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದಾರೆ.

ಸರ್ಬೀಯಾದ ದಿಗ್ಗಜ ಆಟಗಾರರಾದ ದಮಿರ್ ಮೈಕೆಕ್ ಮತ್ತು ಜೊರಾನಾ ಅರುನೋವಿಕ್​ರನ್ನು 16-14ರಿಂದ ಸೋಲಿಸಿ ಭಾರತೀಯ ಜೋಡಿ ಚಿನ್ನದ ಪದಕವನ್ನು ಗೆದ್ದಿತು. ಫೈನಲ್‌ನ ಮೊದಲ ಎರಡು ಸುತ್ತುಗಳನ್ನು ಭಾರತೀಯ ಜೋಡಿ ಗೆದ್ದ ನಂತರ ಅನುಭವಿ ಸರ್ಬಿಯಾ ತಂಡ ಒತ್ತಡಕ್ಕೆ ಸಿಲುಕಿತು. ನಂತರ ಸರ್ಬಿಯಾದ ಜೋಡಿ ಮತ್ತೆ ಪುಟಿದೆದ್ದು ಸಮಬಲವನ್ನು ಸಾಧಿಸಿತು. ಆದರೆ ಅಂತಿಮ ಸುತ್ತಿನಲ್ಲಿ ಉತ್ತಮ ಪ್ರದರ್ಶನ ತೋರಿದ ಭಾರತೀಯ ಜೋಡಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು.

ಐಎಸ್‌ಎಸ್‌ಎಫ್ ವಿಶ್ವಕಪ್‌ನಲ್ಲಿ ಮೊದಲ ಪದಕ ಗೆದ್ದಿರುವ ದಿವ್ಯಾ, ಈ ಮೊದಲು ಬಾಸ್ಕೆಟ್​ಬಾಲ್​ ಆಟಗಾರರಾಗಿದ್ದರು. ಅಪಘಾತವೊಂದರಲ್ಲಿ ಕೈಗೆ ಗಾಯ ಮಾಡಿಕೊಂಡಿದ್ದರಿಂದ ಬಾಸ್ಕೆಟ್​ಬಾಲ್​ಗೆ ಗುಡ್​ಬೈ ಹೇಳಿ, 2018ರಲ್ಲಿ ಶೂಟಿಂಗ್​ ಆಯ್ದುಕೊಂಡಿದ್ದರು.

ಇನ್ನೋರ್ವ ಆಟಗಾರ ಸರಬ್ಜೋತ್ ಸಿಂಗ್​ ಪ್ರಸಕ್ತ ಋತುವಿನಲ್ಲಿ ಉತ್ತಮ ಪ್ರದರ್ಶನ ತೋರಿದ್ದು, ಈ ಹಿಂದೆಯೂ ಭೋಪಾಲ್​ನಲ್ಲಿ ನಡೆದ ವಿಶ್ವಕಪ್​ನಲ್ಲಿ ಚಿನ್ನ ಗೆದ್ದಿದ್ದರು. ಆದರೆ ಕನ್ನಡತಿ ದಿವ್ಯಾಗೆ ಇದು ಮೊದಲ ಐಎಸ್‌ಎಸ್‌ಎಫ್ ವಿಶ್ವಕಪ್ ಪದಕವಾಗಿದೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net