1964ರಲ್ಲಿ 7 ಸಾವಿರ ರೂ.ಗೆ ಖರೀದಿ: ಈಗ ಹರಾಜಿನಲ್ಲಿ ರೊಲೆಕ್ಸ್​ ಸೇಲಾದ ಮೊತ್ತ ಕೇಳಿದ್ರೆ ಬೆರಗಾಗ್ತೀರಾ!​

Rolex Watch
Published on

ಲಂಡನ್​: ಸುಮಾರು 60 ವರ್ಷಗಳ ಹಿಂದೆ 7 ಸಾವಿರ ರೂಪಾಯಿಗೆ ಖರೀದಿಸಿದ್ದ ರೊಲೆಕ್ಸ್ ವಾಚ್​, ಪ್ರಸ್ತುತ ನಡೆದ ಹರಾಜಿನಲ್ಲಿ ದಾಖಲೆಯ ಬೆಲೆಗೆ ಮಾರಾಟವಾಗುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದೆ.

ರೊಲೆಕ್ಸ್​ ವಾಚ್​ ಅನ್ನು 1964ರಲ್ಲಿ 7000 ರೂ.ಗೆ ಖರೀಸಿದಲಾಗಿತ್ತು. ಇದೀಗ ಯುನೈಟೆಡ್​ ಕಿಂಗ್​ಡಮ್​ನಲ್ಲಿ ನಡೆದ ಹರಾಜಿನಲ್ಲಿ 41,11,692 ರೂಪಾಯಿಗೆ ಮಾರಾಟವಾಗಿದೆ.

ಮೊಟ್ಟ ಮೊದಲ ಡೈವರ್ಸ್​ ವಾಚ್​

ಇದು ರೊಲೆಕ್ಸ್​ ಸಬ್​ಮರಿನರ್​ ಮಾಡೆಲ್​ ವಾಚ್​ ಆಗಿದ್ದು, ದಿ ಡೈವರ್ಸ್​ ವಾಚ್​ ಎಂತಲೂ ಕರೆಯುತ್ತಾರೆ. ಇದನ್ನು 1953ರಲ್ಲಿ ಮೊದಲ ಬಾರಿಗೆ ಲಾಂಚ್​ ಮಾಡಲಾಯಿತು. ಇದು ಮೊಟ್ಟ ಮೊದಲ ಡೈವರ್ಸ್​ ಕೈ ಗಡಿಯಾರವಾಗಿದೆ. ಇದು​ 100 ಮೀಟರ್ (330 ಅಡಿ) ಆಳದ ವಾಟರ್​ಪ್ರೂಫ್ ವಾಚ್​ ಆಗಿತ್ತು. ಪ್ರಸ್ತುತ 300 ಮೀಟರ್ (1,000 ಅಡಿ) ಆಳದವರೆಗೂ ವಾಟರ್​ಪ್ರೂಫ್​ ಸಾಮರ್ಥ್ಯ ಹೊಂದಿದೆ.

ಡೈವರ್​ ಆಗಿದ್ದ ಸಿಮನ್​

ಬಿಬಿಸಿ ಪ್ರಕಾರ ಸಿಮನ್​ ಬಾರ್ನೆಟ್​ ಎಂಬುವರು ಈ ವಾಚ್​ ಅನ್ನು ಮೊದಲು ಖರೀದಿ ಮಾಡಿದ್ದರು. ಡೈವರ್​ ಆಗಿದ್ದ ಸಿಮನ್​, ರಾಯಲ್​ ನೌಕಾಪಡೆಯಲ್ಲಿ ಹೆಲಿಕಾಪ್ಟರ್​ ರಕ್ಷಣಾ ತಂಡದಲ್ಲಿ ಕೆಲಸ ಮಾಡುತ್ತಿದ್ದರು. 2019ರಲ್ಲಿ ಸಿಮನ್​ ಮೃತಪಟ್ಟರು. ಬಳಿಕ ಈ ವಾಚ್​ ಅವರ ಮಗ ಪೀಟೆ ಬರ್ನೆಟ್​ ಬಳಿಯಿತ್ತು. ಇದೀಗ ಅದನ್ನು ಯುನೈಟೆಡ್​ ಕಿಂಗ್​ಡಮ್​ನ ನಾರ್ಫೋಲ್ಕ್​ ಕೌಂಟಿಯ ಡಿಸ್​ ಪಟ್ಟಣದಲ್ಲಿ ಹರಾಜು ಹಾಕಲಾಯಿತು. ಅಂತಿಮವಾಗಿ ವಾಚ್​ 41 ಲಕ್ಷ ರೂ.ಗೆ ಮಾರಾಟವಾಯಿತು.

ನೌಕಾಪಡೆಯಲ್ಲಿ ಸೇವೆ ಸಲ್ಲಿಸುವಾಗ ರಕ್ಷಣಾ ಕಾರ್ಯನಿಮಿತ್ತ ನೀರಿಗೆ ಧುಮುಕಲು ಈ ವಾಚ್​ ಅನ್ನು ನನ್ನ ತಂದೆ ಬಳಸುತ್ತಿದ್ದರು ಎಂದು ಮಗ ಪೀಟೆ ಬರ್ನೆಟ್​ ಹೇಳಿದ್ದಾರೆ.

ಏಕೈಕ ಸಾಧನ

ತಾನು ಎಷ್ಟು ಸಮಯದವರೆಗೆ ನೀರಿನ ಅಡಿಯಲ್ಲಿ ಇದ್ದೇನೆ ಎಂದು ತಿಳಿದುಕೊಳ್ಳಬೇಕಾಗಿತ್ತು. ಆ ಸಮಯದಲ್ಲಿ ಈ ವಾಚ್​ ಏಕೈಕ ಸಾಧನವಾಗಿತ್ತು. ಆ ದಿನಗಳಲ್ಲಿ ರೊಲೆಕ್ಸ್ ಒಂದು ಜಲಾಂತರ್ಗಾಮಿ ಸಾಧನವಾಗಿತ್ತು. ಆದರೆ ಈಗ ಅದೊಂದು ಫ್ಯಾಷನ್ ಪರಿಕರವಾಗಿದೆ ಎಂದು ಪೀಟೆ ಬರ್ನೆಟ್​ ತಿಳಿಸಿದ್ದಾರೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net