

ನವದೆಹಲಿ: ಬಿಜೆಪಿ ಉಗ್ರವಾದಿಗಳ ಪಕ್ಷ, ಭಯೋತ್ಪಾದಕರೊಂದಿಗೆ (Terrorists) ನಿಕಟ ಸಂಪರ್ಕ ಹೊಂದಿರುವ ಬಿಜೆಪಿ ಜನರ ಹತ್ಯೆ (lynching) ಮಾಡುವುದರಲ್ಲಿ ತೊಡಗಿರುವ ಪಕ್ಷ ಎಂದು ಎಐಸಿಸಿ ಅಧ್ಯಕ್ಷ (Aicc President) ಮಲ್ಲಿಕಾರ್ಜುನ ಖರ್ಗೆ (Mallikarjun Kharge) ವಾಗ್ದಾಳಿ ನಡೆಸಿದ್ದಾರೆ.
ಕೆಲ ದಿನಗಳ ಹಿಂದೆ ಕಾರ್ಯಕ್ರಮ ಒಂದರಲ್ಲಿ ಮಾತನಾಡುವಾಗ ಪ್ರಧಾನಿ ಮೋದಿ (PM Modi) ಕಾಂಗ್ರೆಸ್ ಪಕ್ಷದಲ್ಲಿರುವವರು ಅರ್ಬನ್ ನಕ್ಸಲರು ಎಂದು ಹೇಳಿದ್ದರು. ಈ ಹೇಳಿಕೆ ಕುರಿತಾಗಿ ಮಾತನಾಡಿರುವ ಖರ್ಗೆ (Mallikarjun Kharge), ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಮೋದಿ ಯಾವಾಗಲೂ ಕಾಂಗ್ರೆಸ್ ಅನ್ನು ಅರ್ಬನ್ ನಕ್ಸಲ್ ಪಕ್ಷ ಎಂದು ಕರೆಯುತ್ತಾರೆ. ಅದು ಅವರ ಅಭ್ಯಾಸವಾಗಿದೆ. ಆದರೆ ಅವರ ಪಕ್ಷವನ್ನು ನೋಡಿ, ಬಿಜೆಪಿಯು ಭಯೋತ್ಪಾದಕರ ಪಕ್ಷವಾಗಿದ್ದು, ಹತ್ಯೆಗಳಲ್ಲಿ ತೊಡಗಿದೆ. ಮೋದಿಯವರಿಗೆ ಕಾಂಗ್ರೆಸ್ ವಿರುದ್ಧ ಆರೋಪ ಮಾಡುವ ಹಕ್ಕಿಲ್ಲ ಎಂದು ಕಿಡಿಕಾರಿದ್ದಾರೆ.
ಅಕ್ಟೋಬರ್ 05ರಂದು ಮಹಾರಾಷ್ಟ್ರದ ವಾಶಿಮ್ನಲ್ಲಿ ಸಮಾವೇಶ ಒಂದರಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್ ಪಕ್ಷವನ್ನು ಅರ್ಬನ್ ನಕ್ಸಲರು ನಿಯಂತ್ರಿಸುತ್ತಿದ್ದು, ಪಕ್ಷದ ಅಪಾಯಕಾರಿ ಕಾರ್ಯಸೂಚಿಯ ವಿರುದ್ಧ ಜನರು ಒಗ್ಗಟ್ಟಾಗಿ ನಿಲ್ಲಬೇಕಿದೆ. ಭಾರತಕ್ಕೆ ಹಿತವನ್ನು ಬಯಸದ ಜನರೊಂದಿಗೆ ಕಾಂಗ್ರೆಸ್ ನಿಂತಿದೆ. ದಲಿತರನ್ನು ದಲಿತರನ್ನಾಗಿ, ಬಡವರನ್ನು ಬಡವರನ್ನಾಗಿಯೇ ಇಟ್ಟುಕೊಳ್ಳುವುದು ಅವರ ಅಜೆಂಡಾ. ಕಾಂಗ್ರೆಸ್ ಬಗ್ಗೆ ಎಚ್ಚರದಿಂದಿರಿ ಎಂದು ಹೇಳಿದ್ದರು. ಈ ವಿಚಾರ ಕಾಂಗ್ರೆಸ್ ಅವರ ಕೆಂಗಣ್ಣಿಗೆ ಗುರಿಯಾಗಿತ್ತು.