

ಉತ್ತರಪ್ರದೇಶ: ಉತ್ತರಪ್ರದೇಶ ಸರ್ಕಾರವು ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯನ್ನು ಇದೀಗ ರದ್ದುಗೊಳಿಸಿದ್ದು, ಇದು ಯುವ ಏಕತೆ ಮತ್ತು ವಿದ್ಯಾರ್ಥಿ ಶಕ್ತಿಯ ವಿಜಯ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಕಳೆದ ಹಲವು ದಿನಗಳಿಂದ ಉತ್ತರಪ್ರದೇಶ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ವ್ಯಾಪಕವಾಗಿ ಕೇಳಿಬಂದಿತ್ತು. ಅನೇಕ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರಶ್ನೆಗಳು ಸೋರಿಕೆಯಾಗಿರುವ ಸ್ಕ್ರೀನ್ ಶಾಟ್ಗಳನ್ನು ಹರಿಬಿಟ್ಟು, ಗಂಭೀರವಾಗಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಪರೀಕ್ಷೆಯನ್ನು ಇದೀಗ ಯುಪಿ ಸರ್ಕಾರ ರದ್ದುಗೊಳಿಸಿದ್ದು, ಆರು ತಿಂಗಳೊಳಗೆ ಮರು ಪರೀಕ್ಷೆ ನಡೆಸುವಂತೆ ಆದೇಶಿಸಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, “ವಿದ್ಯಾರ್ಥಿ ಶಕ್ತಿ ಮತ್ತು ಯುವ ಏಕತೆಗೆ ಇದು ದೊಡ್ಡ ಗೆಲುವು. ಉತ್ತರ ಪ್ರದೇಶ ಪೊಲೀಸ್ ಪರೀಕ್ಷೆಯನ್ನು ಅಂತಿಮವಾಗಿ ರದ್ದುಗೊಳಿಸಲಾಗಿದೆ. ಸಂದೇಶವು ಸ್ಪಷ್ಟವಾಗಿದೆ. ಸರ್ಕಾರವು ಸತ್ಯವನ್ನು ನಿಗ್ರಹಿಸಲು ಎಷ್ಟೇ ಪ್ರಯತ್ನಿಸಿದರೂ, ಒಗ್ಗಟ್ಟಿನಿಂದ ಹೋರಾಡುವ ಮೂಲಕ ಮಾತ್ರ ನಮ್ಮ ಹಕ್ಕುಗಳನ್ನು ಗೆಲ್ಲಲು ಸಾಧ್ಯ ಎಂದು ಎಕ್ಸ್‌ನಲ್ಲಿ (ಈ ಹಿಂದಿನ ಟ್ವಿಟರ್) ಪೋಸ್ಟ್ ಮಾಡಿದ್ದಾರೆ.
ಈ ಕುರಿತು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ಮಾತನಾಡಿದ್ದು, "ಯುವ ಶಕ್ತಿಯ ಮುಂದೆ ಸರ್ಕಾರ ತಲೆಬಾಗಬೇಕಾಗಿರುವುದರಿಂದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯನ್ನು ಇದೀಗ ರದ್ದುಗೊಳಿಸಲಾಗಿದೆ. ನಿನ್ನೆಯವರೆಗೂ, ಸರ್ಕಾರದಲ್ಲಿ ಕುಳಿತವರು ಪತ್ರಿಕೆ ಸೋರಿಕೆಯನ್ನು ನಿರಾಕರಿಸುವ ಪ್ರಯತ್ನದಲ್ಲಿ ಹೇಳಿಕೆಗಳನ್ನು ನೀಡುತ್ತಿದ್ದರು. ಆದರೆ ಅವರ ಸುಳ್ಳುಗಳು ಯುವಕರ ಶಕ್ತಿಯ ಮುಂದೆ ನಿಲ್ಲಲು ವಿಫಲವಾದ ಕಾರಣ ಪರೀಕ್ಷೆ ರದ್ದುಗೊಂಡಿದೆ" ಎಂದು ಹೇಳಿದ್ದಾರೆ,(ಏಜೆನ್ಸೀಸ್).