

ಹಾವೇರಿ: ಬೃಹತ್ ಜಲಾಶಯಗಳು, ಹಿನ್ನೀರು ಹಾಗೂ ನದಿಗಳಲ್ಲಿ ಕಂಡು ಬರುವ ನೀರು ನಾಯಿಗಳು ಹಾವೇರಿಯ ಹೆಗ್ಗೇರಿ ಕೆರೆಯಲ್ಲಿ ಪತ್ತೆಯಾಗಿದ್ದು, ಪರಿಸರ ಪ್ರೇಮಿಗಳಲ್ಲಿ ಸಂತಸ ಮೂಡಿಸಿದೆ.
ಹೆಗ್ಗೇರಿ ಕೆರೆಯಲ್ಲಿ ನೀರು ನಾಯಿಗಳ ಹಿಂಡು ಬೀಡು ಬಿಟ್ಟಿದ್ದು, ಹಾವೇರಿಯ ವನ್ಯಜೀವಿ ಛಾಯಾಗ್ರಾಹಕ ಮಾಲತೇಶ ಅಂಗೂರ ಅವರ ಕ್ಯಾಮರಾ ಕಣ್ಣಿಗೆ ಬಿದ್ದಿವೆ. ಶನಿವಾರ ನಸುಕಿನ ಜಾವ ಕೆರೆಯಂಗಳಕ್ಕೆ ತೆರಳಿದ್ದ ಅಂಗೂರ ಅವರ ಕ್ಯಾಮರಾಕ್ಕೆ ಈ ಅಪರೂಪದ ಅತಿಥಿಗಳು ಸೆರೆಸಿಕ್ಕಿವೆ.
ನೀರು ನಾಯಿಗಳು ಅರೆ-ಜಲ ಪ್ರಾಣಿಗಳಾಗಿವೆ. ನೀರು ನಾಯಿಗಳ ಪ್ರಮುಖ ಆಹಾರ ಮೀನು. ಉಳಿದಂತೆ ಹಾವು, ಉಭಯಚರಗಳು, ಇಲಿ, ಹೆಗ್ಗಣ, ಸಣ್ಣ ಸಸ್ತನಿಗಳು ಮತ್ತು ಚಿಕ್ಕ ಹಕ್ಕಿಗಳನ್ನು ಬೇಟೆಯಾಡುತ್ತವೆ. ಇವುಗಳ ವಿಶಿಷ್ಟ ಜೀವಿತಾವಧಿ 4ರಿಂದ 10 ವರ್ಷಗಳು. ಇವುಗಳು ಪ್ರತ್ಯೇಕವಾಗಿ ಬೇಟೆಯಾಡುತ್ತವೆ. ಆದರೆ, ಒಟ್ಟಿಗೆ ಮಲವಿಸರ್ಜನೆ ಮಾಡುವ ಮೂಲಕ ತಮ್ಮ ಗಡಿ ಗುರುತಿಸುತ್ತವೆ. ದೇಶದಲ್ಲಿರುವ ಮೂರು ಜಾತಿಗಳ ಪೈಕಿ ಅತಿದೊಡ್ಡ-ಹೊದಿಕೆಯ ನೀರುನಾಯಿಗಳು, ಸಾಂಪ್ರದಾಯಿಕವಾಗಿ ಒಂದು ಸಿಹಿನೀರಿನ ಪ್ರಭೇದವಾಗಿದೆ. ಅಲ್ಲದೇ ಅತಿ ಚಿಕ್ಕ ಪ್ರಭೇದ ಹಾವೇರಿಯ ಪರಿಸರದಲ್ಲಿ ಕಂಡಿರುವ ನೀರುನಾಯಿ ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಕೆರೆಯ ಪರಸರಕ್ಕೆ ಬಂದಿದ್ದು ಹೇಗೆ?
ಕಾವೇರಿ, ಕಾಳಿ, ತುಂಗಭದ್ರಾ ನದಿಗಳ ಪರಿಸರದಲ್ಲಿ ದೊಡ್ಡ ತೊರೆಗಲ್ಲಿ ಕಂಡು ಬರುವ ಶುದ್ಧವಾದ ನೀರಿನಲ್ಲಿ ಈ ನೀರುನಾಯಿಗಳು ಕಂಡುಬರುತ್ತವೆ. ಇವುಗಳಿಗೆ ಫ್ರೆಶ್ ವಾಟರ್ ಓಟರ್ (ಸಿಹಿನೀರು ನಾಯಿ) ಎಂದು ಕರೆಯಲಾಗುತ್ತದೆ. ಹಂಪಿಯ ಪರಿಸರದಲ್ಲಿನ ತುಂಗಭದ್ರಾ ನದಿಯಲ್ಲಿ ಇವು ಕಂಡು ಬರುವುದು ಸಾಮಾನ್ಯ.
ಹೆಗ್ಗೇರಿ ಕೆರೆಗೆ ಕೆಲ ತಿಂಗಳ ಹಿಂದೆ ತುಂಗಭದ್ರಾ ನದಿಯ ನೀರನ್ನು ಯುಟಿಪಿ ಕಾಲುವೆಗಳ ಮೂಲಕ ಹರಿಸಲಾಗಿತ್ತು. ಈ ಸಂದರ್ಭದಲ್ಲಿ ನೀರಿನ ಹರಿವಿನ ಜತೆಗೆ ಕೆರೆ ಪರಿಸರಕ್ಕೆ ಬಂದಿರಬಹುದು. ಅಥವಾ ವಲಸೆ ಹೋಗುವ ಇವುಗಳ ಗುಣದಿಂದ ಇಲ್ಲಿಗೆ ಬಂದಿರುವ ಸಾಧ್ಯತೆಗಳಿವೆ ಎನ್ನುತ್ತಾರೆ ವನ್ಯಜೀವಿ ಛಾಯಾಗ್ರಾಹಕ ಮಾಲತೇಶ ಅಂಗೂರ.
ಪ್ರೆಶ್ ವಾಟರ್ ಓಟರ್ ಸಂರಕ್ಷಿತ ಪ್ರದೇಶವಾಗಲಿ
ರಾಜ್ಯದ ಕೊಪ್ಪಳದ ಬಳಿಯ ಮುದ್ಲಾಪುರ ಗ್ರಾಮದಿಂದ ತುಂಗಭದ್ರ ನದಿಯ ಹರಿವಿನ 34 ಕಿ.ಮೀ. ಪ್ರದೇಶವನ್ನು ನೀರು ನಾಯಿ ಸಂರಕ್ಷಿತ ಪ್ರದೇಶವೆಂದು ರಾಜ್ಯ ಸರ್ಕಾರ 1972ರಲ್ಲಿ ಘೋಷಿಸಿದೆ. ಮುದ್ಲಾಪುರ ಹಳ್ಳಿಯಿಂದ ತುಂಗಭದ್ರ ನದಿಯ ಉದ್ದಕ್ಕೂ 34 ಕಿಮೀ ಉದ್ದದ ಪ್ರದೇಶವನ್ನು ಬಳ್ಳಾರಿ ಜಿಲ್ಲೆಯ ಕಂಪ್ಲಿವರೆಗೆ ವಿಸ್ತರಿಸಲಾಗಿದೆ. ಈ ವಿಸ್ತಾರವು ವಿಶ್ವ ಪರಂಪರೆಯ ತಾಣವಾದ ಹಂಪಿ ಮತ್ತು ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಒಳಗೊಂಡಿದೆ.
ಕೋಟ್:
ಹಾವೇರಿಯ ಹೆಗ್ಗೇರಿ ಕೆರೆಯಲ್ಲಿ 7 ನೀರುನಾಯಿಗಳು ಕಂಡುಬಂದಿವೆ. ಈ ಕೆರೆ ಪರಿಸರದಲ್ಲಿ ಪತ್ತೆಯಾಗಿರುವ ನೀರು ನಾಯಿಗಳು ಯಾವ ಪ್ರಬೇಧ ಎಂಬುದನ್ನು ಸಂಶೋಧಿಸಬೇಕಿದೆ. ಅಳಿವಿನಂಚಿನಲ್ಲಿರುವ ನೀರುನಾಯಿಗಳ ರಕ್ಷಣೆಗೆ ಸರ್ಕಾರ, ಜಿಲ್ಲಾಡಳಿತ ವಿಶೇಷ ಕಾಳಜಿ ವಹಿಸಬೇಕು.
- ಮಾಲತೇಶ ಅಂಗೂರ, ವನ್ಯಜೀವಿ ಛಾಯಾಗ್ರಾಹಕ