ವೆಡ್ಡಿಂಗ್​ ಆ್ಯನಿವರ್ಸರಿಗೆ ಗಿಫ್ಟ್​ ಕೊಡದ ಗಂಡ; ಚಾಕುವಿನಿಂದ ಇರಿದ ಪತ್ನಿ

Anniversary Gift
Published on

ಬೆಂಗಳೂರು: ವೆಡ್ಡಿಂಗ್​ ಆ್ಯನಿವರ್ಸರಿಗೆ ಗಿಫ್ಟ್​ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಪತ್ನಿಯೇ ತನ್ನ ಪತಿಗೆ ಚಾಕುವಿನಿಂದ ಇರಿದು ಹತ್ಯೆ ಮಾಡಲು ಯತ್ನಿಸಿರುವ ಘಟನೆ ಬೆಂಗಳೂರು ನಗರದ ಬೆಳ್ಳಂದೂರು ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಘಟನೆಯೂ ಫೆಬ್ರವರಿ 27ರ ತಡರಾತ್ರಿ 1:30ರ ಸುಮಾರಿಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗಾಯಗೊಂಡಿದ್ದ ವ್ಯಕ್ತಿಯನ್ನು ಸ್ಥಳೀಯರು ತಕ್ಷಣವೇ ಆಸ್ಪತ್ರೆಗೆ ಸೇರಿಸಿದ ಪರಿಣಾಮ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಫೆಬ್ರವರಿ 27ರಂದು ಈ ಘಟನೆ ನಡೆದಿದೆ. ರಾತ್ರಿ 1.30ಕ್ಕೆ ಗೃಹಿಣಿಯಾಗಿರುವ 35 ವರ್ಷದ ಮಹಿಳೆ, ಅಡುಗೆ ಕೋಣೆಯಲ್ಲಿರುವ ಚಾಕು ತೆಗೆದುಕೊಂಡು ಗಂಡನಿಗೆ (37) ಇರಿದಿದ್ದಾಳೆ. ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿ, ನಾನು ರಾತ್ರಿ ಮಲಗಿದ್ದಾಗ ಹೆಂಡತಿ ಬಂದು ಕೈಗೆ ಚಾಕುವಿನಿಂದ ಇರಿದಿದ್ದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾನೆ. ತಕ್ಷಣ ನಿದ್ದೆಯಿಂದ ಎಚ್ಚೆತ್ತ ವ್ಯಕ್ತಿ, ಪತ್ನಿಯನ್ನು ದೂರ ತಳ್ಳಿದ ಕಾರಣ ಹೆಚ್ಚಿನ ಅಪಾಯ ತಪ್ಪಿದ್ದಾಗಿ ತಿಳಿಸಿದ್ದಾನೆ.

ಕಿರುಚಾಟ ಕೇಳಿ ಸ್ಥಳಕ್ಕೆ ತಲುಪಿದ ಸ್ಥಳೀಯರು ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ವ್ಯಕ್ತಿ ದೇಹದಲ್ಲಿ ಚಾಕು ಇರಿತದ ಗಾಯವಿದ್ದ ಕಾರಣ ವೈದ್ಯರ ತಂಡ ಪೊಲೀಸರಿಗೆ ಮಾಹಿತಿ ನೀಡಿದೆ. ಗಂಡನಿಗೆ ಚಾಕುವಿನಿಂದ ಇರಿದ ಪತ್ನಿಯ ವಿರುದ್ಧ ಮಾರ್ಚ್‌ 01ರಂದು ದೂರು ದಾಖಲಾಗಿದ್ದು, ಈ ಬಗ್ಗೆ ವಿಚಾರಣೆ ನಡೆಯುತ್ತಿದೆ. ಇದು ಕೌಟುಂಬಿಕ ಸಮಸ್ಯೆಯಾಗಿರುವ ಕಾರಣ, ಪತಿ-ಪತ್ನಿ ಈ ಬಗ್ಗೆ ಮಾತನಾಡಿ ನಂತರ ಮಾಹಿತಿ ನೀಡುವಂತೆ ತಿಳಿಸಿದ್ದೇವೆ.

ಮೊದಲಿಗೆ ವಿಚಾರಿಸಿದಾಗ ಗಂಡನ ಅಜ್ಜ ತೀರಿಕೊಂಡಿದ್ದ ಕಾರಣ ಆತ ಪತ್ನಿಗೆ ವೆಡ್ಡಿಂಗ್ ಆನಿವರ್ಸರಿ ಗಿಫ್ಟ್ ತಂದುಕೊಟ್ಟಿಲ್ಲ. ಆದರೆ ವಿವಾಹ ವಾರ್ಷಿಕೋತ್ಸವಕ್ಕೆ ಮೊದಲ ಬಾರಿಗೆ ಗಿಫ್ಟ್ ನೀಡದೇ ಇದ್ದ ಕಾರಣ ಪತ್ನಿ ವಿಪರೀತ ಸಿಟ್ಟುಕೊಂಡಿದ್ದಳು. ಹೀಗಾಗಿ ಈ ಕೃತ್ಯ ಎಸಗಿದ್ದಾಗಿ ತಿಳಿದುಬಂದಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net