

ಬೆಂಗಳೂರು: ಆಸ್ತಿ-ಮನೆ ಹೊಂದಿದ್ದಕ್ಕೆ ಏನೇನು ಕಷ್ಟ ಎದುರಿಸಬೇಕಾಯಿತು ಎಂದು ಉದ್ಯಮಿಯೊಬ್ಬರು ಹೇಳಿಕೊಂಡಿದ್ದಾರೆ. ಮಾತ್ರವಲ್ಲ, ರಿಯಲ್ ಎಸ್ಟೇಟ್ ನಮ್ಮಂಥವರಿಗಲ್ಲ, ಮಾರುಕಟ್ಟೆಯಲ್ಲಿ ಹಣ ತೊಡಗಿಸುವುದೇ ಲೇಸು ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ.
ಬೆಂಗಳೂರು ಮೂಲದ ಕ್ಯಾಪಿಟಲ್ಮೈಂಡ್ ಎಂಬ ಕಂಪನಿಯ ಸ್ಥಾಪಕ ಹಾಗೂ ಸಿಇಒ ಆಗಿರುವ ದೀಪಕ್ ಶೆಣೈ ಎಂಬವರು ಈ ಕುರಿತು ಹೇಳಿಕೊಂಡಿದ್ದಾರೆ. ಹಿರಿಯ ವ್ಯಕ್ತಿಯೊಬ್ಬರು ಬಾಡಿಗೆದಾರರಿಂದ ಫ್ಲ್ಯಾಟ್ ವಾಪಸ್ ಪಡೆಯಲು 4 ವರ್ಷ ಪರದಾಡಿದ ಕುರಿತು ಪತ್ರಿಕೆಯೊಂದರಲ್ಲಿ ಬಂದಿರುವ ಸುದ್ದಿಯನ್ನು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿಕೊಂಡಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ದೀಪಕ್ ಶೆಣೈ ತನ್ನ ತಾಯಿಯೂ ಇಂಥದ್ದೇ ಸಮಸ್ಯೆ ಎದುರಿಸಿದ್ದ ಬಗ್ಗೆ ಹೇಳಿಕೊಂಡಿದ್ದಾರೆ.
ನಾವೂ ಇಂಥದ್ದನ್ನು ಅನುಭವಿಸಿದ್ದೇವೆ. ಬಾಡಿಗೆಗೆ ಬಂದ ಮೊದಲ ತಿಂಗಳ ಬಳಿಕ ಬಾಡಿಗೆ ಕೊಡದೆ ಸತಾಯಿಸುತ್ತಿದ್ದವರನ್ನು ಮನೆಯಿಂದ ಎಬ್ಬಿಸಲು ನನ್ನ ಅಮ್ಮ ಎರಡು ವರ್ಷ ಕೋರ್ಟ್ಗೆ ಅಲೆಯಬೇಕಾಯಿತು. ನಂತರ ಕೋರ್ಟ್ ಆದೇಶ ಬಂದ ಮೇಲೂ ಮನೆಯಿಂದ ಖಾಲಿ ಮಾಡಿಸಲು 3 ತಿಂಗಳು ಬೇಕಾಯಿತು ಎಂದು ದೀಪಕ್ ಶೆಣೈ ಹೇಳಿಕೊಂಡಿದ್ದಾರೆ.
ಆ ಬಳಿಕ ಅಮ್ಮ ತನ್ನ ಎಲ್ಲ ಆಸ್ತಿಗಳನ್ನು ಮಾರಿ ಈಗಿರುವ ಏಕೈಕ ಮನೆಯಲ್ಲಿ ವಾಸವಿದ್ದಾರೆ. ಅಲ್ಲದೆ ನಮ್ಮ ಒಂದು ಜಾಗವನ್ನು ಗೂಂಡಾಗಳು ಸ್ವಾಧೀನಪಡಿಸಿಕೊಂಡಿದ್ದನ್ನೂ ನೆನಪಿಸಿಕೊಂಡ ಶೆಣೈ, ರಿಯಲ್ ಎಸ್ಟೇಟ್ ನಮ್ಮಂಥವರಿಗಲ್ಲ. ನಾವು ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡುವುದಕ್ಕಿಂತ ಷೇರು ಮಾರುಕಟ್ಟೆಯಲ್ಲಿ ಹಣ ತೊಡಗಿಸುವುದರಿಂದ ಕಡಿಮೆ ತೊಂದರೆಯಲ್ಲಿ ಹೆಚ್ಚಿನ ಹಣ ಗಳಿಸಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.