ಅಮ್ಮ 20 ಸಾವಿರ ರೂ. ಕೊಡಲಿಲ್ಲ ಅಂತ ಪ್ರಾಣ ಕಳ್ಕೊಂಡ ಬಿಕಾಂ ಪದವೀಧರ!

Manoor
Published on

ವಿಜಯನಗರ: ಯುವಕರು ಪ್ರೀತಿ-ಪ್ರೇಮದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವುದು ಸರ್ವೇಸಾಮಾನ್ಯ. ಆದರೆ ಇಲ್ಲೊಬ್ಬ ಯುವಕ ವ್ಯವಹಾರ ಮಾಡಲು ತಾಯಿ ಹಣ ಕೊಡಲಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ವಿಜಯನಗರ ಜಿಲ್ಲೆಯಲ್ಲಿ ಇಂಥದ್ದೊಂದು ಪ್ರಕರಣ ನಡೆದಿದೆ. ಕೊಟ್ಟೂರಿನ ಕೆಳಗೇರಿ ನಿವಾಸಿ ಮನ್ಸೂರ್ (22) ಎಂಬಾತ ಆತ್ಮಹತ್ಯೆ ಮಾಡಿಕೊಂಡ ಯುವಕ. ಈತ ಬಿಕಾಂ ಪದವೀಧರ ಆಗಿದ್ದು, ಖಾಸಗಿಯಾಗಿ ಕೆಲಸ ಮಾಡುತ್ತಿದ್ದ. ಆದರೆ ಏನಾದರೂ ವ್ಯವಹಾರ ಮಾಡಬೇಕು ಎಂಬ ಆಸೆ ಹೊಂದಿದ್ದ.

ಹೀಗಾಗಿ ವ್ಯವಹಾರ ಮಾಡಲು ಹಣ ನೀಡುವಂತೆ ತಾಯಿಗೆ ದುಂಬಾಲು ಬಿದ್ದಿದ್ದ. ಆದರೆ ತಾಯಿ, ಸದ್ಯ ಯಾವುದೇ ವ್ಯವಹಾರ ಬೇಡ, ಮುಂದೆ ಓದು ಎಂದು ತಿಳಿ ಹೇಳುತ್ತಿದ್ದರು. ಮೇ 17ರಂದು ಕೂಡ ಮತ್ತೆ ತಾಯಿಯಲ್ಲಿ 20 ಸಾವಿರ ರೂ. ನೀಡುವಂತೆ ಕೇಳಿದ್ದ. ಗುರುವಾರ ತನ್ನ ಕೆಲಸದ ಬಟವಾಡೆ ಆಗುತ್ತದೆ, ಆಗ ಮರಳಿಸುವೆ ಎಂದೂ ಹೇಳಿದ್ದ. ಆದರೆ ತಾಯಿ ಹಣ ನೀಡದ್ದರಿಂದ ಮನನೊಂದು ಕೊಟ್ಟೂರಿನ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೊಟ್ಟೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net