

ಬೆಂಗಳೂರು: ಬಿಗ್ ಬಾಸ್ ಮನೆಯ ಸದಸ್ಯರು ಇದೀಗ ಶಾಲೆಗೆ ಮರಳಿದ್ದು, ವಿಧೇಯ ವಿದ್ಯಾರ್ಥಿಗಳ ಬದಲಿಗೆ ಕಿತಾಪತಿ ವಿದ್ಯಾರ್ಥಿಗಳಾಗಿ ಕಾಣಿಸಿಕೊಂಡಿದ್ದಾರೆ. ಬಿಗ್ ಬಾಸ್ ಪ್ರಾಥಮಿಕ ಶಾಲೆ ಎಂಬ ಟಾಸ್ಕ್ನಲ್ಲಿ ತರಲೆ, ತಮಾಷೆ ಮಾಡಿದ ಸ್ಪರ್ಧಿಗಳು ಇಂದು ಶಾಲೆಯ ಎರಡನೇ ದಿನಕ್ಕೆ ತಪ್ಪದೇ ಹಾಜರಾಗಿದ್ದಾರೆ.
ನಿನ್ನೆಯ ಬಿಗ್ ಬಾಸ್ ಶಾಲಾ ವೇಳಾಪಟ್ಟಿಯಲ್ಲಿ ಹೆಡ್ ಮಿಸ್ ಆಗಿದ್ದ ತನಿಷಾ ಜತೆಗೆ ಪ್ರತಾಪ್, ಮೈಕಲ್ ಮತ್ತು ಪವಿ ಪೂವಯ್ಯ ಟೀಚರ್ಗಳಾಗಿ ಚಟುವಟಿಕೆಯಲ್ಲಿ ಭಾಗವಹಿಸಿದರು. ಈ ನಾಲ್ವರನ್ನು ಹೊರತುಪಡಿಸಿ ಉಳಿದ ಸದಸ್ಯರು ವಿದ್ಯಾರ್ಥಿಗಳಾಗಿ ಕಾಣಿಸಿಕೊಂಡರು. ಶಿಕ್ಷಕಿಯಾಗಿ ಬಂದ ತನಿಷಾ ಕಾಲೆಳೆದ ವರ್ತೂರು ಸಂತೋಷ್ ಹಾಗೂ ತುಕಾಲಿ ಸಂತೋಷ್ ಮನೆ ಮಂದಿಯನ್ನು ಹೊಟ್ಟೆ ಹುಣ್ಣಾಗುವಂತೆ ನಗಿಸಿದರು.
ಇಂದು ಶಾಲೆಯ ಎರಡನೇ ದಿನವಾಗಿದ್ದು, ನಿನ್ನೆ ವಿದ್ಯಾರ್ಥಿಯಾಗಿದ್ದವರು ಇಂದು ಶಿಕ್ಷಕರಾಗಿ ಬದಲಾಗಿದ್ದಾರೆ. ನಮ್ರತಾ, ತುಕಾಲಿ ಸಂತೋಷ್, ಸಿರಿ ಹಾಗೂ ಸಂಗೀತಾ ಶಿಕ್ಷಕರಾಗಿ ವಿದ್ಯಾರ್ಥಿಗಳನ್ನು ನೋಡಿಕೊಂಡಿದ್ದಾರೆ.
ಈ ವೇಳೆ ತುಕಾಲಿಗೆ ತಾನು ಹೇಳಿದ್ದನೇ ರಿಪೀಟ್ ಮಾಡುವ ಮೂಲಕ ಬೆವರಿಳಿಸಿದ ಸ್ಟೂಡೆಂಟ್ಸ್, ನಿರಂತರವಾಗಿ ಪರದಾಡಿಸಿದ್ದಾರೆ. ಸ್ಟೇಜ್ ಮೇಲೆ ತನಿಷಾ ನೋಡುತ್ತ ಪಟಾಕಿ ಯಾರದೇ ಆಗಿರಲಿ ಹಚ್ಚೋರು ನಾವಾಗಿರಬೇಕು ಎಂದು ವರ್ತೂರು ಹೇಳಿದ್ದು, ಸದ್ಯ ಪ್ರೋಮೋದಲ್ಲಿ ಹೈಲೈಟ್ ಆಗಿದೆ.