

ಮಂಡ್ಯ: ಬೆಳಗಾವಿ ಅಧಿವೇಶನದಲ್ಲಿ ಕಾವೇರಿ ನದಿ ನೀರಿನ ಬಗ್ಗೆ ಚರ್ಚೆ ಮಾಡದ ರಾಜ್ಯಸರ್ಕಾರ, ತೀವ್ರ ವಿರೋಧದ ನಡುವೆಯೂ ನಾಲೆಗಳ ಮೂಲಕ ತಮಿಳುನಾಡಿಗೆ ನೀರು ಹರಿಸಿ ರೈತರಿಗೆ ವಂಚನೆ ಮಾಡಿದೆ ಎಂದು ಜಿಲ್ಲಾ ರೈತ ಹಿತರಕ್ಷಣಾ ಸಮಿತಿ ಸಂಘಟನಾ ಕಾರ್ಯದರ್ಶಿ ಸುನಂದಾ ಜಯರಾಂ ಗಂಭೀರ ಆರೋಪ ಮಾಡಿದರು.
ಪ್ರಸ್ತುತ ಯಾವುದೇ ಬೆಳೆಗೂ ನೀರು ಬೇಕೆಂದು ರೈತರೂ ಕೇಳುತ್ತಿಲ್ಲ. ಆದರೂ ವಿಶ್ವೇಶ್ವರಯ್ಯ ನಾಲೆ, ಕಾವೇರಿ ಬ್ರಾೃಂಚ್, ಕೌಡ್ಲೆ ನಾಲೆ ಗೆ ನೀರು ಹರಿಸುವ ಮೂಲಕ ತ.ನಾಡಿನ ರೈತ ಹಿತ ಕಾಯುತ್ತಿದೆ. ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ ಒಟ್ಟು ನಾಲ್ಕು ಕಟ್ಟು ನೀರು ಹರಿಸಲಾಗುವುದು ಎಂದು ಅಧಿಸೂಚನೆ ಹೊರಡಿಸಲಾಗಿತ್ತು. ಅದರಂತೆ ಕೊನೇ ಕಟ್ಟು ನೀರನ್ನು ನ.8 ರಿಂದ ನ.23ರವರೆಗೆ ನೀರು ಹರಿಸಿ ನ.24 ರಿಂದ ನಿಲ್ಲಿಸಬೇಕಾಗಿತ್ತು. ಆದರೆ, ಕಳೆದ 18 ದಿನದಿಂದ ನಿರಂತರವಾಗಿ ನೀರನ್ನು ಹರಿಸಲಾಗುತ್ತಿದೆ. ಸಮಿತಿಯು ಈ ವಿಷಯವನ್ನು ಸಂಗ್ರಹಿಸಿ ಖಚಿತಪಡಿಸಿಕೊಂಡಿದೆ. ಕೆಆರ್‌ಎಸ್ ಅಣೆಕಟ್ಟೆಯಲ್ಲಿ ಸಧ್ಯ ಇರುವ ನೀರಿನ ಸಂಗ್ರಹ ಇನ್ನೂ ಎರಡು ಕಟ್ಟು ನೀರನ್ನು ಬಿಡಲು ಸಾಧ್ಯವಿತ್ತು. ಆದರೆ ರಾಜ್ಯಸರ್ಕಾರ ವಾಮ ಮಾರ್ಗದಲ್ಲಿ ತಮಿಳುನಾಡಿಗೆ ನೀರು ಹರಿಸುತ್ತಿರುವುದು ಅತ್ಯಂತ ಖಂಡನೀಯ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯಸರ್ಕಾರದ ಇಂತಹ ನಡೆಯನ್ನು ಸದುಪಯೋಗಪಡಿಸಿಕೊಳ್ಳುವ ತ.ನಾಡು. ಇದನ್ನೇ ದಾಖಲೆ ಮಾಡಿಕೊಂಡು ಭವಿಷ್ಯದಲ್ಲಿ ನಿರಂತರವಾಗಿ ನಮ್ಮಿಂದ ನೀರನ್ನು ದೋಚಲು ಅವಕಾಶ ಮಾಡಿಕೊಟ್ಟಂತಾಗಿದೆ. ಸರ್ಕಾರದ ಈ ನಡೆ ಕರ್ನಾಟಕ ರಾಜ್ಯಕ್ಕೆ ಮಾಡಿದ ದ್ರೋಹವಾಗಿದೆ. ಇನ್ನು ಜಿಲ್ಲಾ ರೈತ ಹಿತ ರಕ್ಷಣ ಸಮಿತಿ ಕಾವೇರಿ ನೀರಿನ ರಕ್ಷಣೆಯ ವಿಷಯದಲ್ಲಿ ಅನೇಕ ರೀತಿಯ ಒತ್ತಾಯ ಮಾಡುತ್ತಿದ್ದರೂ ಸಹ ರಾಜ್ಯಸರ್ಕಾರ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕಾವೇರಿ ನದಿ ನೀರಿನ ವಿಷಯದಲ್ಲಿ ಚರ್ಚಿಸಲು ಎರಡೂ ಸದನಗಳ ಜಂಟಿ ವಿಶೇಷ ಅಧಿವೇಶನ ಕರೆಯಲು ಮುಖ್ಯಮಂತ್ರಿ ಹಾಗೂ ಎರಡೂ ಸದನಗಳ ಅಧ್ಯಕ್ಷರು, ಬಿಜೆಪಿ ಮತ್ತು ಜೆಡಿಎಸ್ ಶಾಸಕರಿಗೆ ಒತ್ತಾಯಿಸಲಾಗಿತ್ತು. ಆದರೂ ಈ ವಿಷಯದಲ್ಲಿ ಯಾವುದೇ ನಿಲುವು ಪ್ರಕಟಿಸದೆ ನಿರ್ಲಕ್ಷ್ಯ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕಾವೇರಿ ಕಣಿವೆಯ ನೀರಾವರಿ ಅಭಿವೃದ್ಧಿ, ಅಂತರ್ಜಲ ಅಭಿವೃದ್ಧಿ, ವಿದ್ಯುತ್ ಅಭಿವೃದ್ಧಿಗೆ ಯೋಜನೆಗಳನ್ನು ರೂಪಿಸಿ ಕ್ರಮ ತೆಗೆದುಕೊಳ್ಳಲು ಒತ್ತಾಯಿಸಲಾಗಿತ್ತು. ಇವುಗಳ ಬಗ್ಗೆಯೂ ಸರ್ಕಾರ ಮೌನವಹಿಸಿರುವುದು ಸರಿಯಲ್ಲ. ಒಟ್ಟಾರೆ ಸರ್ಕಾರ ಹಾಗೂ ವಿರೋಧ ಪಕ್ಷಗಳು ಕಾವೇರಿ ನದಿ ನೀರಿನ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳದೆ ಅಸಡ್ಡೆ ತೋರುತ್ತಿವೆ. ಆದ್ದರಿಂದ ಕಾವೇರಿ ಕೊಳ್ಳದ ರೈತರು, ಸಾರ್ವಜನಿಕರು, ನಾಗರಿಕರು ಒಟ್ಟಾಗಿ ಕಾವೇರಿ ನದಿ ನೀರನ್ನು ಉಳಿಸಿ ರಕ್ಷಿಸಿಕೊಳ್ಳಲು ಹೋರಾಟ ಮಾಡಬೇಕಾಗಿದೆ. ಇಲ್ಲದಿದ್ದರೆ ಸರ್ಕಾರ ರೈತರ ಮರಣ ಶಾಸನ ಬರೆಯಲಿದೆ. ಇನ್ನೂ ಕಾಲಾವಕಾಶವಿದ್ದು, ಅಧಿವೇಶನದಲ್ಲಿ ಚರ್ಚೆ ನಡೆಸಬೇಕು. ಇಲ್ಲದಿದ್ದರೆ ಹೋರಾಟದ ಸ್ವರೂಪ ಬದಲಾವಣೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇನ್ನು ಇತ್ತೀಚೆಗೆ ನಮ್ಮ ಹೋರಾಟ ಮತ್ತು ಸಂಘಟನೆಯ ಕುರಿತು ಕೆಲವರು ಅಸಡ್ಡೆಯಿಂದ ಮಾತನಾಡುತ್ತಿದ್ದಾರೆ. ಈ ರೀತಿ ಹಗುರವಾಗಿ ಮಾತನಾಡುವುದು ಸರಿಯಲ್ಲ. ಪ್ರತಿಭಟನೆ ಮಾಡುವ ಇಚ್ಚೆಯಿದ್ದರೆ ಬನ್ನಿ, ಇಲ್ಲದಿದ್ದರೆ ಸುಮ್ಮನೆ ಇರಬೇಕು. ಹೋರಾಟ ಪಾರದರ್ಶಕವಾಗಿ ನಡೆಯುತ್ತಿದೆ. ನಮ್ಮ ಒತ್ತಾಯ ಈಡೇರಿ ತಾರ್ಕಿಕ ಅಂತ್ಯಕ್ಕೆ ಬಂದಾಗ ಪ್ರತಿಯೊಂದಕ್ಕೂ ಲೆಕ್ಕ ಕೊಡಲಾಗುವುದು. ಟೀಕೆ ಮಾಡುವವರು ಅಂದು ಹಾಜರಾಗಬಹುದೆಂದು ತಿರುಗೇಟು ನೀಡಿದರು.
ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ಬೋರಯ್ಯ, ರೈತ ಸಂಘದ ಜಿಲ್ಲಾಧ್ಯಕ್ಷ ಇಂಡುವಾಳು ಚಂದ್ರಶೇಖರ್, ಮಾಜಿ ಅಧ್ಯಕ್ಷ ಮುದ್ದೇಗೌಡ, ಜೈ ಕರ್ನಾಟಕ ಪರಿಷತ್ ರಾಜ್ಯಾಧ್ಯಕ್ಷ ಎಸ್.ನಾರಾಯಣ್, ಕೆ.ಶಂಕರ್, ಎಂ.ವಿ.ಕೃಷ್ಣ, ಮಹಾಂತಪ್ಪ ಇದ್ದರು.