

Air India flights : ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಇಸ್ರೇಲ್ ಶುಕ್ರವಾರ (ಜೂನ್ 13) ವಾಯುದಾಳಿ ನಡೆಸಿದ ಬೆನ್ನಲ್ಲೇ ಇರಾನ್ ತನ್ನ ವಾಯುಪ್ರದೇಶವನ್ನು ಮುಚ್ಚಿದೆ. ಇದರ ಪರಿಣಾಮ ಕನಿಷ್ಠ 16 ಏರ್ ಇಂಡಿಯಾ ವಿಮಾನಗಳನ್ನು ಬೇರೆಡೆಗೆ ಡೈವರ್ಟ್ ಮಾಡಲಾಗಿದೆ ಮತ್ತು ವಾಪಸ್ ಕರೆಸಿಕೊಳ್ಳಲಾಗಿದೆ.
ವಿವರಗಳಿಗೆ ಬರುವುದಾದರೆ, ಇಸ್ರೇಲ್ ಮತ್ತು ಇರಾನ್ ನಡುವೆ ಉದ್ವಿಗ್ನತೆ ಹೆಚ್ಚಾಗಿದ್ದು, ಉಭಯ ದೇಶಗಳ ನಡುವೆ ವಾಯುಪ್ರದೇಶದ ನಿರ್ಬಂಧಗಳು ಮುಂದುವರೆದಿವೆ. ಈ ಸಂದರ್ಭದಲ್ಲಿ, ಶುಕ್ರವಾರ ಬೆಳಗ್ಗೆ 5.39ಕ್ಕೆ ಮುಂಬೈನಿಂದ ಲಂಡನ್‌ಗೆ ಹೊರಟ ಏರ್ ಇಂಡಿಯಾ ವಿಮಾನವು ಭಾರಿ ಅಪಘಾತವನ್ನು ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡಿದೆ. ಮೂರು ಗಂಟೆಗಳ ಪ್ರಯಾಣದ ನಂತರ, ರಾಡಾರ್ ಸಿಗ್ನಲ್‌ಗಳಲ್ಲಿ ಸಮಸ್ಯೆ ಉದ್ಭವಿಸಿತು. ಇದರಿಂದಾಗಿ, ವಿಮಾನವನ್ನು ಡೈವರ್ಟ್ ಮಾಡಲಾಗಿದೆ. ಈ ವಿಷಯವನ್ನು ಫ್ಲೈಟ್ ರಾಡಾರ್ 24 ದೃಢಪಡಿಸಿದೆ. ರಾಡಾರ್ ಸಿಗ್ನಲ್‌ಗಳಲ್ಲಿನ ಸಮಸ್ಯೆಯಿಂದಾಗಿ ವಿಮಾನವನ್ನು ಡೈವರ್ಟ್ ಮಾಡಲಾಗಿದೆ ಎಂದು ವರದಿಯಾಗಿದೆ.
ಇರಾನ್‌ನಲ್ಲಿ ಉದ್ಭವಿಸಿರುವ ಪರಿಸ್ಥಿತಿ ಹಾಗೂ ಅದರ ವಾಯುಪ್ರದೇಶವನ್ನು ಮುಚ್ಚಿದ ಬಳಿಕ ನಮ್ಮ ಪ್ರಯಾಣಿಕರ ಸುರಕ್ಷತೆಯ ದೃಷ್ಟಿಯಿಂದ, ಈ ಕೆಳಗಿನ ಏರ್ ಇಂಡಿಯಾ ವಿಮಾನಗಳನ್ನು ಡೈವರ್ಟ್ ಮಾಡಲಾಗಿದೆ ಅಥವಾ ಅವುಗಳ ಮೂಲ ಸ್ಥಳಕ್ಕೆ ಹಿಂತಿರುಗಿಸಲಾಗುತ್ತಿದೆ ಎಂದು ಏರ್ ಇಂಡಿಯಾ ತನ್ನ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದೆ.
* AI130 – ಲಂಡನ್ ಹೀಥ್ರೂ ಟು ಮುಂಬೈ – ವಿಯೆನ್ನಾಗೆ ತಿರುಗಿಸಲಾಗಿದೆ
* AI102 – ನ್ಯೂಯಾರ್ಕ್ ಟು ದೆಹಲಿ – ಶಾರ್ಜಾಗೆ ತಿರುಗಿಸಲಾಗಿದೆ
* AI116 – ನ್ಯೂಯಾರ್ಕ್ ಟು ಮುಂಬೈ – ಜೆಡ್ಡಾಗೆ ತಿರುಗಿಸಲಾಗಿದೆ
* AI2018 – ಲಂಡನ್ ಹೀಥ್ರೂ ಟು ದೆಹಲಿ – ಮುಂಬೈಗೆ ತಿರುಗಿಸಲಾಗಿದೆ
* AI129 – ಮುಂಬೈ ಟು ಲಂಡನ್ ಹೀಥ್ರೂ – ಮುಂಬೈಗೆ ತಿರುಗಿಸಲಾಗಿದೆ
* AI119 – ಮುಂಬೈ ಟು ನ್ಯೂಯಾರ್ಕ್ – ಮುಂಬೈಗೆ ಹಿಂತಿರುಗುತ್ತಿದೆ
* AI103 – ದೆಹಲಿ ಟು ವಾಷಿಂಗ್ಟನ್ – ದೆಹಲಿಗೆ ಹಿಂತಿರುಗುತ್ತಿದೆ
* AI106 – ನ್ಯೂವಾರ್ಕ್ ಟು ದೆಹಲಿ – ದೆಹಲಿಗೆ ಹಿಂತಿರುಗುತ್ತಿದೆ
* AI188 – ವ್ಯಾಂಕೋವರ್ ಟು ದೆಹಲಿ – ಜೆಡ್ಡಾಗೆ ತಿರುಗಿಸಲಾಗುತ್ತಿದೆ
* AI101 – ದೆಹಲಿ ಟು ನ್ಯೂಯಾರ್ಕ್ – ಫ್ರಾಂಕ್‌ಫರ್ಟ್/ಮಿಲನ್‌ಗೆ ತಿರುಗಿಸಲಾಗುತ್ತಿದೆ
* AI126 – ಚಿಕಾಗೋ ಟು ದೆಹಲಿ – ಜೆಡ್ಡಾಗೆ ತಿರುಗಿಸಲಾಗುತ್ತಿದೆ
* AI132 – ಲಂಡನ್ ಹೀಥ್ರೂ ಟು ಬೆಂಗಳೂರು – ಶಾರ್ಜಾಗೆ ತಿರುಗಿಸಲಾಗಿದೆ
* AI2016 – ಲಂಡನ್ ಹೀಥ್ರೂ ಟು ದೆಹಲಿ – ವಿಯೆನ್ನಾ
* AI104 – ವಾಷಿಂಗ್ಟನ್ ಟು ದೆಹಲಿ – ವಿಯೆನ್ನಾಗೆ ತಿರುಗಿಸಲಾಗಿದೆ
* AI190 – ಟೊರೊಂಟೊ ಟು ದೆಹಲಿ – ಫ್ರಾಂಕ್‌ಫರ್ಟ್‌ಗೆ ತಿರುಗಿಸಲಾಗಿದೆ
* AI189 – ದೆಹಲಿ ಟು ಟೊರೊಂಟೊ – ದೆಹಲಿಗೆ ಹಿಂತಿರುಗುತ್ತಿದೆ
ಪ್ರಯಾಣಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಏರ್ ಇಂಡಿಯಾ ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ. ವಿಮಾನ ಹಾರಾಟ ನಡೆಸಲು ಬಯಸುವವರಿಗೆ ಪರ್ಯಾಯ ಪ್ರಯಾಣ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ. ಅಲ್ಲದೆ, ಹಣ ಮರುಪಾವತಿ ಸಹ ಮಾಡಲಾಗುತ್ತಿದೆ ಎಂದು ಕಂಪನಿ ತಿಳಿಸಿದೆ.
ಅಂದಹಾಗೆ, ಶುಕ್ರವಾರ ಬೆಳಗ್ಗೆ ಇಸ್ರೇಲ್, ಇರಾನ್ ರಾಜಧಾನಿಯ ಮೇಲೆ ದಾಳಿ ಮಾಡಿತು. ದೇಶದ ಪರಮಾಣು ಪ್ರೋಗ್ರಾಮ್ ಗುರಿಯಾಗಿಸಿಕೊಂಡು ದಾಳಿ ಮಾಡಿದ್ದು, ಪರಿಸ್ಥಿತಿ ಉಲ್ಬಣಗೊಂಡಿದೆ. ಎರಡು ಮಧ್ಯಪ್ರಾಚ್ಯ ವಿರೋಧಿ ದೇಶಗಳ ನಡುವೆ ಯುದ್ಧ ಭೀತಿ ಆವರಿಸಿದೆ. 1980ರ ದಶಕದಲ್ಲಿ ಇರಾಕ್ ಜೊತೆಗಿನ ಯುದ್ಧದ ನಂತರ ಇರಾನ್ ಎದುರಿಸಿದ ಅತ್ಯಂತ ಭೀಕರ ದಾಳಿ ಇದಾಗಿದ್ದು, ಇರಾನ್‌ನ ಪ್ರಮುಖ ಪರಮಾಣು ಸೌಲಭ್ಯ ಸೇರಿದಂತೆ ದೇಶಾದ್ಯಂತದ ಅನೇಕ ಸ್ಥಳಗಳು ಹಾನಿಗೊಳಗಾಗಿವೆ.
ಇರಾನ್‌ನ ಅರೆಸೈನಿಕ ಕ್ರಾಂತಿಕಾರಿ ಗಾರ್ಡ್‌ನ ನಾಯಕ ಜನರಲ್ ಹೊಸೈನ್ ಸಲಾಮಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ರಾಜ್ಯ ದೂರದರ್ಶನ ವರದಿ ಮಾಡಿದೆ. ಉನ್ನತ ಮಿಲಿಟರಿ ಅಧಿಕಾರಿಗಳು ಮತ್ತು ವಿಜ್ಞಾನಿಗಳು ಸಹ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ಈ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳಲಾಗುವುದು ಎಂದು ಇರಾನ್‌ನ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಎಚ್ಚರಿಸಿದ್ದಾರೆ. (ಏಜೆನ್ಸೀಸ್)