ಟ್ರಾಫಿಕ್​ನಿಂದ 10 ನಿಮಿಷ ತಡವಾಗಿದ್ದಕ್ಕೆ ಸಾವಿನಿಂದ ಬಚಾವ್: ನಡೆದ ಘಟನೆ ಬಿಚ್ಚಿಟ್ಟು ಕಣ್ಣೀರಿಟ್ಟ ಭೂಮಿ! Ahmedabad Plane Crash

Ahmedabad Plane Crash

Ahmedabad Plane Crash : ನಿನ್ನೆ (ಜೂನ್​ 12) ಗುಜರಾತ್‌ನ ಅಹಮದಾಬಾದ್​ನಲ್ಲಿ ನಡೆದ ವಿಮಾನ ಪತನವು ಅನೇಕ ಕುಟುಂಬಗಳನ್ನು ಶೋಕ ಸಾಗರದಲ್ಲಿ ಮುಳುಗಿಸಿದೆ. ಇದು ಭಾರತೀಯ ವಾಯುಯಾನ ಇತಿಹಾಸದಲ್ಲೇ ಅತ್ಯಂತ ಭೀಕರ ಅಪಘಾತವಾಗಿದೆ. ಕೇವಲ ಓರ್ವ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಬದುಕಿದರೆ, ಉಳಿದ ಎಲ್ಲ 241 ಪ್ರಯಾಣಿಕರು ಮತ್ತು ಸಿಬ್ಬಂದಿ ದುರಂತ ಸಾವಿಗೀಡಾಗಿದ್ದಾರೆ. ಅಲ್ಲದೆ, ಏರ್​ ಇಂಡಿಯಾ ವಿಮಾನ, ಮೇಘನಿ ನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡ ಪರಿಣಾಮ ಊಟಕ್ಕೆ ಕುಳಿತಿದ್ದ 24 ವೈದ್ಯಕೀಯ ವಿದ್ಯಾರ್ಥಿಗಳು ಕೂಡ ಸಾವಿಗೀಡಾಗಿದ್ದಾರೆ. ಈ ಅವಘಡದಲ್ಲಿ ಒಟ್ಟು 265 ಮಂದಿ ಅಸುನೀಗಿದ್ದಾರೆ. ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಸತ್ತವರಲ್ಲಿ ಒಬ್ಬರು. ಆದಾಗ್ಯೂ, ನಿನ್ನೆ ಹತ್ತು ನಿಮಿಷಗಳ ವಿಳಂಬವು ಓರ್ವ ಯುವತಿಯ ಜೀವವನ್ನೇ ಉಳಿಸಿದೆ. ದೇವರು ತನ್ನನ್ನು ವಿಮಾನ ಅಪಘಾತದಿಂದ ರಕ್ಷಿಸಿದನು ಎಂದು ಆ ಯುವತಿ ನಿಟ್ಟುಸಿರು ಬಿಟ್ಟಿದ್ದಾಳೆ.

ಭೂಮಿ ಚೌಹಾಣ್ ಹೆಸರಿನ ಯುವತಿ ಅಹಮದಾಬಾದ್‌ನಿಂದ ಲಂಡನ್‌ಗೆ ಹೋಗುವ ಏರ್ ಇಂಡಿಯಾ ವಿಮಾನ AI171 ಅನ್ನು ಬುಕ್ ಮಾಡಿದ್ದಳು. ವಿಮಾನ ನಿಲ್ದಾಣ ತಲುಪುವಾಗ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡ ಪರಿಣಾಮ ಹತ್ತು ನಿಮಿಷ ವಿಳಂಬವಾಯಿತು. ಆದರೆ, ಅಷ್ಟರಲ್ಲಾಗಲೇ ವಿಮಾನ ಟೇಕ್ ಆಫ್ ಆಗಿ ಕೆಲವೇ ಕ್ಷಣಗಳಲ್ಲಿ ಪತನವಾಯಿತು. ಈ ಸುದ್ದಿ ಕೇಳಿ ಆಘಾತಗೊಂಡ ಭೂಮಿ, ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದಾರೆ.

ಟ್ರಾಫಿಕ್ ಕಾರಣದಿಂದಾಗಿ ನಾನು ವಿಮಾನವನ್ನು ತಪ್ಪಿಸಿಕೊಂಡೆ. ನಾನು ಪ್ರಯಾಣಿಸಬೇಕಿದ್ದ ವಿಮಾನವು ಅದೇ ಸಮಯದಲ್ಲಿ ಅಪಘಾತಕ್ಕೀಡಾಗಿದೆ ಎಂದು ತಿಳಿದಾಗ ನನಗೆ ತುಂಬಾ ಆಘಾತವಾಯಿತು. ನಡೆದ ಘಟನೆಯ ಬಗ್ಗೆ ಯೋಚಿಸಿದಾಗಲೆಲ್ಲ ನನ್ನ ದೇಹ ಗಢಗಢ ನಡುಗುತ್ತಿದೆ. ಈ ಅಪಘಾತದ ಬಗ್ಗೆ ನನಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ನನ್ನ ಮನಸ್ಸು ಖಾಲಿಯಾಗಿದೆ. ಆ ದೇವರಿಗೆ ಧನ್ಯವಾದಗಳು. ಗಣಪತಿ ಬಪ್ಪಾ ನನ್ನನ್ನು ರಕ್ಷಿಸಿದರು. ಹತ್ತು ನಿಮಿಷಗಳ ವಿಳಂಬದಿಂದಾಗಿ, ನಾನು ವಿಮಾನ ಹತ್ತಲು ಸಾಧ್ಯವಾಗಲಿಲ್ಲ. ವಿಮಾನ ಅಪಘಾತವನ್ನು ಹೇಗೆ ವಿವರಿಸಬೇಕೆಂದು ನನಗೆ ತಿಳಿದಿಲ್ಲ ಎಂದು ಭೂಮಿ ಹೇಳಿದ್ದಾರೆ.

ಹತ್ತು ನಿಮಿಷಗಳ ವಿಳಂಬದೊಂದಿಗೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಚೌಹಾಣ್, ಮಧ್ಯಾಹ್ನ 1.30ಕ್ಕೆ ವಿಮಾನ ನಿಲ್ದಾಣದಿಂದ ವಾಪಾಸಾದರು. ಇತ್ತ ಮಧ್ಯಾಹ್ನ 1.38ಕ್ಕೆ ಹೊರಟ ವಿಮಾನವು ಕೆಲವೇ ಕ್ಷಣಗಳಲ್ಲಿ ವಿಮಾನ ನಿಲ್ದಾಣದ ಬಳಿಯ ವಸತಿ ಪ್ರದೇಶದಲ್ಲಿ ಪತನಗೊಂಡಿತು. ಲಂಡನ್‌ನಲ್ಲಿ ಪತಿಯೊಂದಿಗೆ ವಾಸಿಸುತ್ತಿರುವ ಭೂಮಿ ಚೌಹಾಣ್ ಎರಡು ವರ್ಷಗಳ ನಂತರ ರಜೆಯ ಮೇಲೆ ಭಾರತಕ್ಕೆ ಬಂದಿದ್ದರು.

ಇದನ್ನೂ ಓದಿ: ಗಂಡ, ಮೂವರು ಮಕ್ಕಳ ಜತೆ ಒಟ್ಟಿಗಿರಲು ವೈದ್ಯೆ ವೃತ್ತಿ ತೊರೆದು ಹೊರಟವಳು ಕುಟುಂಬ ಸಮೇತ ದುರ್ಮರಣ! Ahmedabad Plane Crash

ಘಟನೆ ನಡೆದ ದಿನ ಬೆಳಗ್ಗೆ, ಭೂಮಿ ಅವರು ವಿಮಾನ ನಿಲ್ದಾಣಕ್ಕೆ ಹೋಗುವ ಮೊದಲು ಆಸ್ಪತ್ರೆಗೆ ಭೇಟಿ ನೀಡಿದ್ದರು. ಇದರ ನಡುವೆ ಟ್ರಾಫಿಕ್ ಜಾಮ್ ಕೂಡ ಅವರ ವಿಮಾನ ಪ್ರಯಾಣದ ಯೋಜನೆಗಳನ್ನು ಹಳಿತಪ್ಪಿಸುವಷ್ಟು ನಿಧಾನಗೊಳಿಸಿತು. ಭೂಮಿ ಅವರು ಮಧ್ಯಾಹ್ನ 12.30ರ ಸುಮಾರಿಗೆ ವಿಮಾನ ನಿಲ್ದಾಣ ತಲುಪುವ ಹೊತ್ತಿಗೆ, ವಿಮಾನಯಾನ ಸಂಸ್ಥೆಯು ಅಷ್ಟರಲ್ಲಾಗಲೇ ಚೆಕ್-ಇನ್ ಅನ್ನು ಮುಚ್ಚಿತ್ತು ಎಂದು ಭೂಮಿ ಹೇಳಿದ್ದಾರೆ.

ನಾನು ಹತ್ತು ನಿಮಿಷ ತಡವಾಗಿ ವಿಮಾನ ನಿಲ್ದಾಣವನ್ನು ತಲುಪಿದೆ. ಅಲ್ಲಿ ಬೇರೆ ಯಾರೂ ಉಳಿದಿರಲಿಲ್ಲ ಮತ್ತು ನನ್ನನ್ನು ಒಳಗೆ ಬಿಡುವಂತೆ ಮನವಿ ಮಾಡುತ್ತಿದ್ದೆ. ಆದರೆ ಈಗಾಗಲೇ ಬೋರ್ಡಿಂಗ್ ಪಟ್ಟಿಯನ್ನು ಮುದ್ರಿಸಿರುವುದಾಗಿ ತಿಳಿಸಿದರು. ಆದ್ದರಿಂದ ನಾನು ಹಿಂತಿರುಗಬೇಕಾಯಿತು. ಏನೇ ನಡೆದರೂ ಅದು ಒಂದು ಕಾರಣಕ್ಕಾಗಿ ನಡೆಯಿತು ಎಂದು ನನಗೀಗ ಅನಿಸುತ್ತಿದೆ ಎಂದು ಭೂಮಿ ಹೇಳಿದರು. ಈ ಮಾತುಗಳನ್ನು ಹೇಳುವಾಗ ಭೂಮಿ ಅವರ ಧ್ವನಿ ನಡುಗುತ್ತಿತ್ತು.

ಟರ್ಮಿನಲ್ ಹೊರಗೆ, ಸೈರನ್‌ಗಳು ಕೂಗುತ್ತಿರುವುದನ್ನು ಮತ್ತು ಪೊಲೀಸ್ ಕಾರುಗಳು ರನ್‌ವೇ ಕಡೆಗೆ ವೇಗವಾಗಿ ಬರುತ್ತಿರುವುದನ್ನು ಭೂಮಿ ಗಮನಿಸಿದರು. ಆ ಸಮಯದಲ್ಲಿ, ಏನು ನಡೆಯುತ್ತಿದೆ ಎಂದು ನನಗೆ ಅರ್ಥವಾಗಲಿಲ್ಲ. ನಂತರ ನಾನು ನನ್ನ ಫೋನ್‌ ನೋಡಿದಾಗ ನಾನು ಹೋಗಬೇಕಿದ್ದ ಅದೇ ವಿಮಾನ ಅಪಘಾತಕ್ಕೀಡಾಗಿದೆ ಎಂದು ಗೊತ್ತಾಯಿತು. ಮೊದಲ ಕೆಲವು ಕ್ಷಣಗಳು, ಅದನ್ನು ನಂಬಲಾರದೇ ಸ್ತಬ್ಧಳಾದೆ. ನನ್ನ ದೇಹವು ನಡುಗಲು ಪ್ರಾರಂಭಿಸಿತು. ನನಗೆ ಅಳಬೇಕೋ ಅಥವಾ ಸುಮ್ಮನಿರಬೇಕೋ ತಿಳಿಯಲಿಲ್ಲ. ನಾನು ವಿಮಾನವನ್ನು ತಪ್ಪಿಸಿಕೊಂಡಿದ್ದೆ. ನಾನು ಊಹಿಸಲಾಗದ ಯಾವುದೋ ಘಟನೆಯಿಂದ ಬದುಕುಳಿದಿದ್ದೇನೆ ಎಂದು ನನಗೆ ಅರಿವಾಯಿತು ಎಂದು ಭೂಮಿ ಹೇಳಿದರು.

ಮಾತು ಮುಂದುವರಿಸಿದ ಭೂಮಿ, ವಿಮಾನ ತಪ್ಪಿಸಿಕೊಂಡಿದ್ದಕ್ಕೆ ನನಗೆ ಹೆಮ್ಮೆ ಅನಿಸುತ್ತಿಲ್ಲ ಎಂದು ವಿಷಾದದಿಂದ ಹೇಳಿದರು. ನಾನು ಸುರಕ್ಷಿತವಾಗಿದ್ದೇನೆ, ಆದರೆ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿವೆ. ಹಾಗಾಗಿ ನಾನು ಸಂತೋಷವಾಗಿದ್ದೇನೆ ಎಂದು ಹೇಳಲು ಸಾಧ್ಯವಿಲ್ಲ. ದೇವರಿಗೆ ಧನ್ಯವಾದಗಳು ಎಂದು ಭೂಮಿ ಹೇಳಿದರು.

ಭಾರತದ ಇತಿಹಾಸದಲ್ಲೇ ಕಂಡು ಕೇಳರಿಯದ ಮಹಾ ದುರಂತ

ಭಾರತದ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಗುಜರಾತ್​ನ ಅಹಮದಾಬಾದ್​ನಲ್ಲಿ ಸಂಭವಿಸಿದೆ. ಗುರುವಾರ (ಜೂನ್​ 12) ಮಧ್ಯಾಹ್ನ ಟೇಕ್ ಆಫ್ ಆದ ಏರ್ ಇಂಡಿಯಾ ಎ1-171 ವಿಮಾನ 32 ಸೆಕೆಂಡ್​ಗಳಲ್ಲಿ ಮೇಘಾನಿ ನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿತು. ವಿದೇಶಿಯರೂ ಸೇರಿ 230 ಪ್ರಯಾಣಿಕರು, 12 ಸಿಬ್ಬಂದಿ ಇದ್ದ ವಿಮಾನದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಬದುಕುಳಿದರೆ ಉಳಿದವರೆಲ್ಲ ಸಜೀವ ದಹನವಾಗಿದ್ದಾರೆ. ವಿಮಾನ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದ ಪರಿಣಾಮ ಊಟಕ್ಕೆ ಕುಳಿತಿದ್ದ 24 ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಹಲವು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಮೇಲ್ನೋಟಕ್ಕೆ ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು ತನಿಖೆ ಬಳಿಕ ನಿಖರ ಕಾರಣ ಗೊತ್ತಾಗಬೇಕಿದೆ. ಈ ಹಿಂದೆ ಭಾರತದಲ್ಲಿ ಹಲವು ನಾಗರಿಕ ವಿಮಾನ ಪತನ ದುರಂತ ನಡೆದಿದ್ದವಾದರೂ ಈ ಪ್ರಮಾಣದ ಭೀಕರ ಅಪಘಾತ ಇದೇ ಮೊದಲು.

* ಎಲ್ಲಿ ದುರಂತ?: ಅಹಮದಾಬಾದ್​ನ ಮೇಘಾನಿ ನಗರ
* ಎಷ್ಟೊತ್ತಿಗೆ?: ಗುರುವಾರ ಮಧ್ಯಾಹ್ನ 1.38
* ಯಾವ ವಿಮಾನ?: ಏರ್ ಇಂಡಿಯಾ ಎ1-171
* ಎಲ್ಲಿಗೆ ಹೊರಟಿತ್ತು?: ಲಂಡನ್​ನ ಗ್ಯಾಟ್ವಿಕ್ ವಿಮಾನ ನಿಲ್ದಾಣ
* ಪತನಕ್ಕೆ ಕಾರಣ?: ಪ್ರಾಥಮಿಕ ತನಿಖೆ ಪ್ರಕಾರ ಇಂಜಿನ್​ನಲ್ಲಿ ತಾಂತ್ರಿಕ ದೋಷ
* 32 ಸೆಕೆಂಡ್: ಟೇಕ್ ಆಫ್ ಆದ 32 ಸೆಕೆಂಡ್​ನಲ್ಲಿ ಪತನ

ವಿಮಾನದಲ್ಲಿದ್ದವರು ಯಾರು?

* 230 ಪ್ರಯಾಣಿಕರು, 12 ಸಿಬ್ಬಂದಿ
* 169-ಭಾರತೀಯರು
* 52 -ಬ್ರಿಟಿಷ್ ಪ್ರಜೆಗಳು
* 7- ಪೋರ್ಚುಗಲ್ ಪ್ರಜೆಗಳು
* 1-ಓರ್ವ ಕೆನಡಾ ನಾಗರಿಕ

ನನ್ನ ಕಣ್ಣುಗಳನ್ನು ತೆರೆದಾಗ… ವಿಮಾನ ಪತನದ ಭೀಕರತೆ ಬಿಚ್ಚಿಟ್ಟ ಬದುಕುಳಿದ ಏಕೈಕ ಪ್ರಯಾಣಿಕ ವಿಶ್ವಾಸ್​! Ahmedabad Plane Crash

ಅಂದು ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ 10 ಪ್ರಮುಖ ವಿಮಾನ ದುರಂತಗಳಿವು! ಇಲ್ಲಿದೆ ನೋಡಿ ಪಟ್ಟಿ | Plane Crash

ವಿಮಾನ ಪತನದಲ್ಲಿ ಮೃತಪಟ್ಟಾಗ ಪರಿಹಾರ ಕೊಡೋದ್ಯಾರು? ಏರ್​ಲೈನ್ಸ್​ ಅಥವಾ ವಿಮೆ ಸಂಸ್ಥೆನಾ? ಸಿಗುವ ಹಣವೆಷ್ಟು? Ahmedabad Plane Crash

Share This Article

ಒಂದು ತಿಂಗಳು ಸಕ್ಕರೆ ಮತ್ತು ಉಪ್ಪು ಬಿಟ್ಟರೆ ದೇಹದಲ್ಲಾಗುವ ಬದಲಾವಣೆ ಏನು ಗೊತ್ತಾ? | Sugar

Sugar: ಸಾಮಾನ್ಯವಾಗಿ ಮನುಷ್ಯನ ದೇಹ ಅನಾರೋಗ್ಯಕ್ಕೊಳಗಾದಾಗ ಆಹಾರದಲ್ಲಿ ಸಕ್ಕೆರೆ ಮತ್ತು ಉಪ್ಪುನಂತಹ ಅಂಶಗಳನ್ನು ತ್ಯಜಿಸಬೇಕಾಗುತ್ತದೆ. ಇದರಿಂದ…

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…