ದೇಹದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಳ! ಜೈಲಿನಲ್ಲೇ ಅರವಿಂದ್ ಕೇಜ್ರಿವಾಲ್‌ಗೆ ಇನ್ಸುಲಿನ್ ನೀಡಲಾಗಿದೆ: ಎಎಪಿ

WhatsApp Image 2024-04-23 at 10.03.57 AM
Published on

ನವದೆಹಲಿ: ಸದ್ಯ ತಿಹಾರ್ ಜೈಲಿನಲ್ಲಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಇಡಿ ಸಮನ್ಸ್​ ಹಾಗೂ ಬಂಧನ ಪ್ರಶ್ನಿಸಿ ಸಲ್ಲಿಸಿದ್ದ ಮನವಿಯನ್ನು ದೆಹಲಿ ನ್ಯಾಯಾಲಯ ಆಲಿಸಲಿತು. ಈ ಮಧ್ಯೆ ಜೈಲಿನಲ್ಲಿದ್ದು ಮಾವಿನಹಣ್ಣು, ಸ್ವೀಟ್ಸ್​ ಸೇವಿಸಿದ ಆರೋಪದಡಿ ಕೇಜ್ರಿವಾಲ್​ರನ್ನು ಇಡಿ ನೇರವಾಗಿ ಪ್ರಶ್ನಿಸಿತ್ತು. ಸಕ್ಕರೆ ಖಾಯಿಲೆ ಇದ್ದರೂ ಸಹ ಅಷ್ಟೊಂದು ಸಿಹಿ ತಿನಿಸುಗಳನ್ನು ಸೇವಿಸುವಂತದ್ದೇನಿತ್ತು? ಇದು ತಮ್ಮ ದೇಹದಲ್ಲಿನ ಸಕ್ಕರೆ ಪ್ರಮಾಣವನ್ನು ಹೆಚ್ಚಿಸಿಕೊಂಡು, ಮೆಡಿಕಲ್ ಕಾರಣಗಳಿಂದ ಬೈಲ್ ಪಡೆಯುವ ಹುನ್ನಾರ ಎಂದು ಅಧಿಕಾರಿಗಳು ಕೋರ್ಟ್​ಗೆ ತಿಳಿಸಿದ್ದರು.

ಇನ್ನು ಈ ಬಗ್ಗೆ ಮಾತನಾಡಿದ ದೆಹಲಿ ಸಚಿವ ಅತಿಶಿ, ಸಿಎಂ ಕೇಜ್ರಿವಾಲ್​ರ ಡಯಟ್ ಚಾರ್ಟ್ ಅನ್ನು ಅವರ ಮಧುಮೇಹಶಾಸ್ತ್ರಜ್ಞರು ಸಿದ್ಧಪಡಿಸಿಲ್ಲ ಎಂದು ಶಾಕಿಂಗ್ ಹೇಳಿಕೆ ನೀಡಿದರು. ಇದೆಲ್ಲದರ ಬೆನ್ನಲ್ಲೇ ಈಗ ಮತ್ತೊಂದು ಸಂಗತಿ ಹೊರಬಿದ್ದಿದ್ದು, ಟೈಪ್-2 ಡಯಾಬಿಟಿಸ್ ರೋಗ ಹೊಂದಿರುವ ಅರವಿಂದ್ ಕೇಜ್ರಿವಾಲ್ ಅವರ ಸಕ್ಕರೆ ಮಟ್ಟವು 320ಕ್ಕೆ ಏರಿಕೆ ಕಂಡ ತಕ್ಷಣವೇ ತಿಹಾರ್​ ಜೈಲಿನ ಅಧಿಕಾರಿಗಳು ಅವರಿಗೆ ಇನ್ಸುಲಿನ್ ನೀಡಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮೂಲಗಳು ಮಾಹಿತಿ ಹಂಚಿಕೊಂಡಿವೆ.

ಸೋಮವಾರ (ಏ.22) ತಿಹಾರ್‌ ಜೈಲಿನ ಸೂಪರಿಂಟೆಂಡೆಂಟ್‌ಗೆ ಬರೆದ ಪತ್ರದಲ್ಲಿ ಸಿಎಂ, "ನನ್ನ ಗ್ಲೂಕೋಸ್ ಮೀಟರ್ ರೀಡಿಂಗ್ 250 ಮತ್ತು 320ರ ನಡುವೆ ಇದ್ದು, ಅಪಾಯಕಾರಿ ಮಟ್ಟವನ್ನು ತಲುಪುತ್ತಿದೆ. ಹೀಗಿರುವಾಗ ನನಗೆ ಇನ್ಸುಲಿನ್ ನೀಡಿ ಎಂದು ವಿನಂತಿಸುತ್ತಿದ್ದೇನೆ" ಎಂದು ಮನವಿ ಮಾಡಿರುವುದಾಗಿ ತಿಳಿಸಿದ್ದಾರೆ. ಇನ್ನು ತನ್ನ ಆರೋಗ್ಯದಲ್ಲಿ ಯಾವುದೇ ತೊಂದರೆಯಿಲ್ಲ ಎಂದು ಜೈಲು ಆಡಳಿತ ಹೇಳುತ್ತಿರುವುದು ಕೇವಲ 'ರಾಜಕೀಯ ಒತ್ತಡ’ದಿಂದ. ಇದಕ್ಕಾಗಿ ನನ್ನ ಆರೋಗ್ಯದ ಬಗ್ಗೆ ಸುಳ್ಳು ಹೇಳುತ್ತಿದೆ ಎಂದು ಪ್ರತಿಪಾದಿಸಿದ್ದಾರೆ.

ಇದಕ್ಕೂ ಮೊದಲು ತಿಹಾರ್ ಜೈಲಿನ ಮೂಲಗಳು ಸಹ ಮಾಹಿತಿ ಹಂಚಿಕೊಂಡಿದ್ದು, ಏಮ್ಸ್‌ನ ವೈದ್ಯರು ಶನಿವಾರ (ಏ.20) ಎಎಪಿ ಮುಖ್ಯಸ್ಥರೊಂದಿಗೆ 40 ನಿಮಿಷಗಳ ಕಾಲ ಸಮಾಲೋಚನೆಯನ್ನು ನಡೆಸಿದ್ದಾರೆ. ಈ ಸಮಯದಲ್ಲಿ ಅವರಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆಗಳಿಲ್ಲ ಎಂದು ಭರವಸೆ ನೀಡಿದ್ದು, ಸೂಚಿಸಲಾದ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ಮುಂದುವರಿಸಲು ಸಲಹೆ ನೀಡಿದರು ಎಂದು ತಿಳಿಸಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net