

ಹೈದರಾಬಾದ್: ಸದ್ಯ ದೇಶದೆಲ್ಲಡೆ ರಣ ಬಿಸಿಲು ಸುಡುತ್ತಿದೆ. ಮಳೆಯಿಲ್ಲದೆ, ಬಿಸಿಲಿನ ಶಾಖಕ್ಕೆ ಜನರು ಬಳಲಿ ಬೆಂಡಾಗಿದ್ದಾರೆ. ಹಲವೆಡೆ ಬೆಳಗ್ಗೆ 8 ಗಂಟೆಯಿಂದಲೇ ಪ್ರಖರ ಬಿಸಿಲಿನ ತಾಪವಿದೆ. ಹೀಗಾಗಿ ಜನ ಮನೆಯಿಂದ ಹೊರ ಬರಲು ಸಹ ಹೆದರುತ್ತಿದ್ದಾರೆ. ಇದರ ಜತೆಗೆ ಮುಂದಿನ ದಿನಗಳಲ್ಲಿ ಬಿಸಿಲಿನ ಝಳ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ನೀಡಿದೆ. ಈ ಬಿಸಿ ವಾತಾವರಣದಲ್ಲಿ ಜನರು ಜಾಗೃತರಾಗಿರಬೇಕು. ವಯಸ್ಸಾದ ಜನರು ಅನಿವಾರ್ಯವಲ್ಲದಿದ್ದರೆ ಅನಗತ್ಯವಾಗಿ ಹೊರಗೆ ಹೋಗಬಾರದು. ಇದಲ್ಲದೇ ಕೆಲಸ ನಿಮಿತ್ತ ಹೊರಗೆ ಹೋಗಬೇಕಾದಾಗ ಕೊಡೆ, ಟೋಪಿ ಹಾಕಿಕೊಂಡು ಹೋಗಬೇಕು ಎಂದು ಸಲಹೆ ನೀಡಲಾಗಿದೆ.
ಈ ಬೇಸಿಗೆಯಲ್ಲಿ ಹೆಚ್ಚಿನ ನೀರಿನ ಅಂಶವಿರುವ ಹಣ್ಣುಗಳನ್ನು ತಿನ್ನಲು ಮತ್ತು ಸಾಕಷ್ಟು ನೀರನ್ನು ಕುಡಿಯಲು ವೈದ್ಯರು ಸಲಹೆ ನೀಡುತ್ತಾರೆ. ಈಗಾಗಲೇ ಕೆಲಸದ ನಿಮಿತ್ತ ಹೊರ ಹೋಗುತ್ತಿರುವ ಹಲವರು ಬಿಸಿಲಿನ ತಾಪ ತಾಳಲಾರದೆ ಎಲ್ಲೆಂದರಲ್ಲಿ ಹಣ್ಣಿನ ಜ್ಯೂಸ್ ಕುಡಿಯುವುದು ಕೂಡ ಸರ್ವೇ ಸಾಮಾನ್ಯವಾಗಿದೆ. ಆದರೆ, ಹೀಗೆ ಹೊರಗಡೆ ಜ್ಯೂಸ್ ಕುಡಿಯುವಾಗ ತುಂಬಾ ಎಚ್ಚರಿಕೆ ವಹಿಸುವುದು ತುಂಬಾ ಅಗತ್ಯ. ಇಲ್ಲವಾದಲ್ಲಿ ಆರೋಗ್ಯ ಸಮಸ್ಯೆಗಳ ಜೊತೆಗೆ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎನ್ನುತ್ತಾರೆ ತಜ್ಞರು.
ಈಗಾಗಲೇ ಎಲ್ಲೆಡೆ ಬಿಸಿಲು ಜೋರಾಗಿದ್ದು, ಜ್ಯೂಸ್ ಸೆಂಟರ್ಗಳಿಗೆ ಭಾರಿ ಬೇಡಿಕೆ ಹೆಚ್ಚಿದೆ. ಕೆಲಸದ ನಿಮಿತ್ತ ಹೊರಗೆ ಹೋಗುವ ಅನೇಕರು ಈ ಬಿಸಿಲಿನ ತಾಪ ತಾಳಲಾರದೆ ತಣ್ಣನೆಯ ಜ್ಯೂಸ್ ಕುಡಿಯಲು ಹೆಚ್ಚು ಆಸಕ್ತಿ ತೋರುತ್ತಾರೆ. ಆದರೆ, ಎಚ್ಚರ! ಬಿಸಿಲಿನ ಲಾಭ ಪಡೆದ ಜ್ಯೂಸ್ ಸೆಂಟರ್ಗಳ ಕೆಲ ವ್ಯವಸ್ಥಾಪಕರು ಕೊಳೆತ ಹಣ್ಣು ಹಾಗೂ ಅಶುದ್ಧ ಐಸ್ ಬಳಸಿ ಜ್ಯೂಸ್ ತಯಾರಿಸುತ್ತಾರೆ.
ಇದಲ್ಲದೆ, ಹಣ್ಣುಗಳ ಮೇಲೆ ಧೂಳು ಮತ್ತು ಕೊಳಕು ಇರುತ್ತದೆ. ಇಂತಹ ಹಣ್ಣುಗಳನ್ನು ಜ್ಯೂಸ್ ಸೆಂಟರ್ ಜನರು ಸ್ವಚ್ಛಗೊಳಿಸುವುದಿಲ್ಲ. ಬಿಸಿಲಿನಿಂದ ರಿಲೀಫ್ ಪಡೆಯಲು ಗ್ರಾಹಕರು ಕೂಡ ತಂಪು ಹಣ್ಣಿನ ರಸವನ್ನು ಅಮೃತದಂತೆ ಕುಡಿಯುತ್ತಾರೆ. ಆದರೆ, ಅಶುಚಿಯಾದ ಮತ್ತು ಕೊಳೆತ ಹಣ್ಣುಗಳಿಂದ ತಯಾರಿಸಿದ ಜ್ಯೂಸ್ ಕುಡಿಯುವುದರಿಂದ ಗಂಟಲು ಬೇನೆ, ನೆಗಡಿ, ಕೆಮ್ಮು ಮುಂತಾದ ನಾನಾ ಸೋಂಕುಗಳು ತಗಲುತ್ತವೆ. ಇದರಿಂದ ಆಸ್ಪತ್ರೆಗೆ ಭೇಟಿ ನೀಡಿ ಸಾವಿರಾರು ಖರ್ಚು ಮಾಡಬೇಕಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.
ಇನ್ಮುಂದೆ ಹೊರಗಿನ ಜ್ಯೂಸ್ ಸೆಂಟರ್ಗಳಲ್ಲಿ ಜ್ಯೂಸ್ ಗಳನ್ನು ಕುಡಿಯುವಾಗ ಯಾವ ರೀತಿಯ ಹಣ್ಣುಗಳನ್ನು ಬಳಸುತ್ತಾರೆ ಎಂಬುದರ ಬಗ್ಗೆ ಗಮನ ಹರಿಸುವುದು ಉತ್ತಮ. ಆದರೆ ಆದಷ್ಟು ಹೊರಗಿನ ಜ್ಯೂಸ್ಗಳನ್ನು ಸಂಪೂರ್ಣವಾಗಿ ತ್ಯಜಿಸಿ, ಮನೆಯಲ್ಲಿಯೇ ಫ್ರೆಶ್ ಆಗಿ ಕುಡಿಯುವುದು ಉತ್ತಮ ಎಂದು ತಜ್ಞರು ಸಲಹೆ ನೀಡುತ್ತಾರೆ. (ಏಜೆನ್ಸೀಸ್)