More

  ವಿಜಯ್​ ರಾಜಕೀಯ ಪ್ರವೇಶದ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ ನಟಿ ನಮಿತಾ! ಮೋದಿ ಬಗ್ಗೆಯೂ ಮಾತು

  ಚೆನ್ನೈ: ರಾಜಕೀಯ ಪ್ರವೇಶದ ಬಗ್ಗೆ ಬಹಳ ವರ್ಷಗಳಿಂದ ಕೇಳಿಬರುತ್ತಿದ್ದ ವದಂತಿಗಳಿಗೆ ಇಳಯದಳಪತಿ ವಿಜಯ್ ಫೆಬ್ರವರಿ 02ರಂದು ಅಧಿಕೃತ ಮುದ್ರೆ ಒತ್ತಿದ ಸಂಗತಿ ಎಲ್ಲರಿಗು ತಿಳಿದಿದೆ. ತಮ್ಮ ನೂತನ ಹೊಸ ಪಕ್ಷಕ್ಕೆ “ತಮಿಳಗಾ ವೆಟ್ರಿ ಕಳಗಂ”​ ಎಂದು ಹೆಸರಿಟ್ಟಿದ್ದಾರೆ. ವಿಜಯ್​ ರಾಜಕೀಯ ಪ್ರವೇಶದ ಬಗ್ಗೆ ಸೂಪರ್​ ಸ್ಟಾರ್​ ರಜಿನಿಕಾಂತ್​ ಹಾಗೂ ಕಮಲ್​ ಹಾಸನ್​ ಸೇರಿದಂತೆ ಈಗಾಗಲೇ ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ಇದೀಗ ಈ ಸಾಲಿಗೆ ನಟಿ ಹಾಗೂ ಬಿಜೆಪಿ ನಾಯಕಿ ನಮಿತಾ ಕೂಡ ಸೇರಿಕೊಂಡಿದೆ.

  ವಿಜಯ್​ ಮತ್ತು ನಮಿತಾ, ಅಳಗಿಯ ತಮಿಳ್‌ ಮಗನ್​ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ. ಇದೀಗ ವಿಜಯ್​ ರಾಜಕೀಯ ಪ್ರವೇಶದ ಬಗ್ಗೆ ಮಾತನಾಡಿರುವ ನಮಿತಾ, ವಿಜಯ್​ ಓರ್ವ ಸ್ಮಾರ್ಟ್​ ವ್ಯಕ್ತಿ ಎಂದು ಹೊಗಳಿದ್ದಾರೆ.

  ನೀಲಗಿರಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಪರವಾಗಿ ಎಲ್.ಮುರುಗನ್ ಎಂಬುವರು ಕಣಕ್ಕಿಳಿದಿದ್ದಾರೆ. ಅವರನ್ನು ಬೆಂಬಲಿಸಿ ನಮಿತಾ ಅವರು ತಿರುಪುರ ಜಿಲ್ಲೆಯ ತಿರುಮುರುಗನ್ ಬಂಡಿ ಪ್ರದೇಶದಲ್ಲಿ ಮತಯಾಚನೆ ಮಾಡಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಳಿತಾರೂಢ ಡಿಎಂಕೆ 243 ಕ್ಷೇತ್ರಗಳಲ್ಲಿ ಜನರನ್ನು ಭೇಟಿ ಮಾಡಿ ಅವರ ಅಗತ್ಯಗಳನ್ನು ಕೇಳಿದೆಯೇ? ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ನೇರವಾಗಿ ಎಲ್ಲ ಕ್ಷೇತ್ರದ ಜನರನ್ನು ಭೇಟಿ ಮಾಡಿ ಅವರ ಮೂಲಭೂತ ಅವಶ್ಯಕತೆಗಳನ್ನು ಕೇಳಿದ್ದಾರೆ ಎಂದರು.

  ಡಿಎಂಕೆ ಪಕ್ಷವು ಜನರನ್ನು ವಿಭಜಿಸಲು ಪ್ರಯತ್ನಿಸುತ್ತಿದೆ. ಅವರ ಸೋಲು ಖಚಿತ. ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ವಿಜಯ್ ಅವರನ್ನು ನಾನು ಅಭಿನಂದಿಸುತ್ತೇನೆ ಮತ್ತು ಸ್ವಾಗತಿಸುತ್ತೇನೆ. ಅವರೊಬ್ಬ ಬುದ್ಧಿವಂತ ಮನುಷ್ಯ. ಸಮರ್ಥ ಪ್ರತಿಸ್ಪರ್ಧಿ ಹೊರಹೊಮ್ಮುತ್ತಿದ್ದಾರೆ ಎಂದು ನಾವು ಭಾವಿಸುತ್ತೇವೆ. ಪ್ರಧಾನಿ ಮೋದಿ ಮತ್ತೊಮ್ಮೆ ಗೆದ್ದು ಕಚ್ಚತೀವು ವಿಚಾರದಲ್ಲಿ ಉತ್ತಮ ಹೆಜ್ಜೆ ಇಡಲಿದ್ದಾರೆ ಎಂದು ನಮಿತಾ ಹೇಳಿದರು.

  ನಮಿತಾ ಕನ್ನಡಿಗರಿಗೂ ಪರಿಚಿತ
  ಅಂದಹಾಗೆ ನಟಿ ನಮಿತಾ ಅವರನ್ನು ಕನ್ನಡಿಗರಿಗೆ ಹೆಚ್ಚು ಪರಿಚಯಿಸುವ ಅಗತ್ಯವಿಲ್ಲ. ಏಕೆಂದರೆ, ಕ್ರೇಜಿಸ್ಟಾರ್​ ರವಿಚಂದ್ರನ್​ ನಟನೆಯ ನೀಲಕಂಠ ಸಿನಿಮಾ ಮೂಲಕ ನಮಿತಾ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಮೊದಲ ಕನ್ನಡ ಸಿನಿಮಾದಲ್ಲೇ ತಮ್ಮ ಬೋಲ್ಡ್​ ಅವತಾರ ಮೂಲಕ ಸದ್ದು ಮಾಡಿದರು. “ಅಮ್ಮಮ್ಮಮ್ಮೋ ವಯ್ಯಾರಮ್ಮಮ್ಮಮ್ಮೋ” ಹಾಡು ಇಂದಿಗೂ ಸಂಗೀತ ಪ್ರಿಯರ ಮನದಲ್ಲಿ ಮನೆ ಮಾಡಿದೆ. ನೀಲಕಂಠ ಬಳಿಕ ನಮಿತಾ, ಸ್ಟಾರ್​ ನಟ ದರ್ಶನ್​ ಜತೆಗೆ ಇಂದ್ರ ಸಿನಿಮಾದಲ್ಲಿ ಅಭಿನಯಿಸಿದರು. ಈ ಸಿನಿಮಾ ಗುಮ್​ ಗುಮ್​ ಗುಮ್ತಾನೆ ಮತ್ತು ನಿನ್ನಾಣೆ ನಿನ್ನಾಣೆ ಪ್ರೀತಿ ದೇವತೆ ನಿನ್ನಾಣೆ ಹಾಡು ಸಿಕ್ಕಾಪಟ್ಟೆ ಹಿಟ್​ ಆಯಿತು. ಇದಿಷ್ಟೇ ಅಲ್ಲದೆ, ‘ಹೂ’ ಸಿನಿಮಾದಲ್ಲಿ ಮತ್ತೆ ರವಿಚಂದ್ರನ್​ ಜತೆಯಾದರು. ಬೆಂಕಿ ಬಿರುಗಾಳಿ ನಮಿತಾ ನಟನೆಯ ಕೊನೆಯ ಕನ್ನಡ ಸಿನಿಮಾ ಆಗಿದೆ. ನಟಿಸಿದ್ದು ನಾಲ್ಕೇ ಸಿನಿಮಾವಾದರೂ ಕನ್ನಡಿಗರ ಮನದಲ್ಲೂ ನಮಿತಾ ಮನೆ ಮಾಡಿದ್ದಾರೆ. ತಮ್ಮ ಬೋಲ್ಡ್​ ಪಾತ್ರಗಳಿಂದಲೇ ಹೆಚ್ಚು ಸುದ್ದಿ ಮಾಡಿದ ನಮಿತಾ ಒಂದು ಕಾಲದಲ್ಲಿ ಪಡ್ಡೆ ಹುಡುಗರ ಫೇವರಿಟ್​ ಆಗಿದ್ದರು.

  ಗುಜರಾತ್​ ಮೂಲದ ನಮಿತಾ ಆರಂಭದಲ್ಲಿ ಮಾಡೆಲ್​ ಆಗಿ ವೃತ್ತಿ ಜೀವನ ಆರಂಭಿಸಿದರು. ಬಳಿಕ ಸಿನಿಮಾ ಕ್ಷೇತ್ರಕ್ಕೆ ಕಾಲಿಟ್ಟ ನಮಿತಾ ಸೊಂಟಂ ಹೆಸರಿನ ತೆಲುಗು ಸಿನಿಮಾಕ್ಕೆ ಮೊದಲು ಬಣ್ಣ ಹಚ್ಚಿದರು. ಸಾಕಷ್ಟು ತಮಿಳು ಸಿನಿಮಾಗಳಲ್ಲಿ ನಟಿಸಿರುವ ನಮಿತಾ, ಮಲಯಾಳಂ, ತೆಲುಗು ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿದರು. ಆದರೆ, ಸಿನಿಮಾ ಅವಕಾಶಗಳು ಕಡಿಮೆಯಾದಾಗ ದಿಢೀರನೇ ತೂಕ ಹೆಚ್ಚಿಸಿಕೊಂಡ ನಮಿತಾ ಕೆಲವು ಐಟಂ ಸಾಂಗ್​ಗಳಿಯೂ ಕಾಣಿಸಿಕೊಂಡರು.

  ಸಿನಿಮಾ ಅವಕಾಶ ಸಂಪೂರ್ಣ ನಿಂತಾಗ ಕಿರುತೆರೆ ಕಡೆ ಮುಖ ಮಾಡಿದ ನಮಿತಾ, ಕಾವಂದೆ ಮಯಿಲಾಡ ಕಾರ್ಯಕ್ರಮದ ಜಡ್ಜ್​ ಆಗಿ ಅನೇಕ ವರ್ಷಗಳವರೆಗೆ ಶೋ ನಡೆಸಿಕೊಟ್ಟರು. ತಮಿಳು ಬಿಗ್​ಬಾಸ್​ ಸೀಸನ್​ 1ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ ನಮಿತಾ 28 ದಿನಕ್ಕೆ ಮನೆಯಿಂದ ಹೊರಬಂದರು. ಹೀಗೆ ಬಣ್ಣದ ಜಗತ್ತಿನೊಂದಿಗೆ ನಂಟು ಬೆಳೆಸಿಕೊಂಡಿದ್ದ ನಮಿತಾ, ನಿರ್ಮಾಪಕ ವೀರೇಂದ್ರ ಚೌಧರಿ ಎಂಬುವರನ್ನು ಪ್ರೀತಿಸಿ 2017ರಲ್ಲಿ ಮದುವೆ ಮಾಡಿಕೊಂಡರು. ದಂಪತಿಗೆ ಅವಳಿ ಮಕ್ಕಳಿದ್ದಾರೆ. (ಏಜೆನ್ಸೀಸ್​)

  ಅಧಿಕೃತವಾಗಿ ರಾಜಕೀಯಕ್ಕೆ ಧುಮುಕಿದ ನಟ ವಿಜಯ್​: ಹೊಸ ಪಕ್ಷದ ಹೆಸರು ಘೋಷಣೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts