

Amandeep Kaur: ಇತ್ತೀಚೆಗಷ್ಟೇ ಪೊಲೀಸ್ ಸೇವೆಯಿಂದ ಅಮಾನತುಗೊಂಡಿದ್ದ ಮಹಿಳಾ ಕಾನ್‌ಸ್ಟೆಬಲ್ ಅಮನ್‌ದೀಪ್ ಕೌರ್ ಇದೀಗ ದುಬಾರಿ ವಸ್ತುಗಳ ಅಧಿಪತಿಯಾಗಿರುವುದು ತನಿಖೆಯಲ್ಲಿ ಬಟಾ ಬಯಲಾಗಿದೆ.
ಈ ವರ್ಷದ ಏಪ್ರಿಲ್‌ನಲ್ಲಿ ಮಾದಕ ವಸ್ತುಗಳನ್ನು ಹೊಂದಿದ್ದಕ್ಕಾಗಿ ಕರ್ತವ್ಯದಿಂದ ವಜಾಗೊಂಡ ಅಮನ್‌ದೀಪ್ ಕೌರ್, ಈಗ ಭ್ರಷ್ಟಾಚಾರ ಪ್ರಕರಣವನ್ನೂ ಎದುರಿಸುತ್ತಿರುವುದು ಅಚ್ಚರಿಯ ಸಂಗತಿ. 'ಇನ್ಸ್ಟಾಗ್ರಾಮ್ ರಾಣಿ'ಯಾಗಿ ಮಿಂಚಿರುವ ಮಾಜಿ ಕಾನ್‌ಸ್ಟೆಬಲ್ ಬಳಿ ಆದಾಯಕ್ಕಿಂತ ಹೆಚ್ಚಿನ ಹಣವಿರುವುದು ಪತ್ತೆಯಾಗಿದೆ. ಇದಕ್ಕೆ ಜ್ವಲಂತ ಸಾಕ್ಷಿ ಆಕೆಯ ಬಳಿಯಿದ್ದ ದುಬಾರಿ ಮೌಲ್ಯದ ವಸ್ತುಗಳು.
ಮಹೀಂದ್ರ ಥಾರ್ ಕಾರು, ರಾಯಲ್ ಎನ್‌ಫೀಲ್ಡ್ ಬುಲೆಟ್ ಬೈಕ್, ಒಂದು ಕೋಟಿ ರೂ.ಗೂ ಹೆಚ್ಚು ಮೌಲ್ಯದ ಎರಡು ಫ್ಲಾಟ್, ಎರಡು ಐಫೋನ್ ಮತ್ತು ರೋಲೆಕ್ಸ್ ವಾಚ್ ಸೇರಿದಂತೆ ಹಲವು ದುಬಾರಿ ವಸ್ತುಗಳು ಈಕೆಯ ಹೆಸರಿನಲ್ಲಿವೆ. ಆದಾಯದ ಮೂಲಕ್ಕಿಂತ ಹೆಚ್ಚಿನ ಆಸ್ತಿಗಳನ್ನು ಹೊಂದಿರುವ ಆರೋಪದ ಮೇರೆಗೆ ಪಂಜಾಬ್ ವಿಜಿಲೆನ್ಸ್ ಬ್ಯೂರೋ ಸೋಮವಾರ (ಮೇ.26) ಆಕೆಯನ್ನು ಬಂಧಿಸಿದೆ. ವಿಚಾರಣೆಯ ಬಳಿಕ ಬಟಿಂಡಾದಲ್ಲಿ ಕೌರ್ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸಲಾಗಿದೆ.
ಏಪ್ರಿಲ್‌ನಲ್ಲಿ, 17.71 ಗ್ರಾಂ ಡ್ರಗ್ಸ್ ಸಾಗಿಸಿದ ಆರೋಪದಲ್ಲಿ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆ (ANTF) ಆಕೆಯನ್ನು ಬಂಧಿಸಿತು. ಈ ಘಟನೆ ಬೆನ್ನಲ್ಲೇ ಇನ್ಸ್ಟಾ ಸುಂದರಿಯನ್ನು ಸೇವೆಯಿಂದ ವಜಾಗೊಳಿಸಲಾಯಿತು. ಆದಾಗ್ಯೂ, ಮೇ.2ರಂದು ಬಟಿಂಡಾದ ನ್ಯಾಯಾಲಯವು ಅಮನ್ದೀಪ್ಗೆ ಜಾಮೀನಿನ ಮೇಲೆ ಬಿಡುಗಡೆ ಭಾಗ್ಯ ನೀಡಿತು. ಇದಾದ ಕೆಲವೇ ದಿನಗಳಲ್ಲಿ ಪಂಜಾಬ್ ಪೊಲೀಸರು ಆಕೆಯ ಮೇಲೆ 1.35 ಕೋಟಿ ರೂ. ಮೌಲ್ಯದ ಆಸ್ತಿಯನ್ನು NDPS ಕಾಯ್ದೆಯಡಿಯಲ್ಲಿ ಮುಟ್ಟುಗೋಲು ಹಾಕಿದ್ದಾರೆ. ಇದರಲ್ಲಿ ಎರಡು ಪ್ಲಾಟ್‌ಗಳು, ಒಂದು ಮಹೀಂದ್ರಾ ಥಾರ್, ಒಂದು ರೋಲೆಕ್ಸ್ ವಾಚ್ ಮತ್ತು 2 ಐಫೋನ್‌ಗಳು ಸೇರಿವೆ.
ತನಿಖೆಯ ವೇಳೆ ಅಮನ್‌ದೀಪ್ ಕೌರ್ 2018 ಮತ್ತು 2025ರ ನಡುವೆ ಸಂಪಾದಿಸಿದ ಹಣ ಹಾಗೂ ಒಟ್ಟು ಚರಾಸ್ತಿ ಮತ್ತು ಸ್ಥಿರಾಸ್ತಿಯನ್ನು ಪರಿಶೀಲಿಸಲಾಯಿತು. ಆಕೆಗೆ ಬರುತ್ತಿದ್ದ ಸಂಬಳ, ಬ್ಯಾಂಕ್ ಖಾತೆಗಳು ಮತ್ತು ಸಾಲದ ದಾಖಲೆಗಳನ್ನೂ ಪರಿಶೀಲಿಸಲಾಗಿದೆ. 2018 ಮತ್ತು 2024ರ ನಡುವೆ ಅಮನ್‌ದೀಪ್ ಕೌರ್ ಒಟ್ಟು 1.08,37,550 ರೂ. ಆದಾಯವನ್ನು ಹೊಂದಿರುವುದು ತಿಳಿದುಬಂದಿದೆ,(ಏಜೆನ್ಸೀಸ್).