

ಮೈಸೂರು: ನಗರದ ಅವಧೂತ ದತ್ತ ಪೀಠಾಧಿಪತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 83ನೇ ಜನ್ಮ ದಿನಾಚರಣೆ ವಿಶೇಷವಾಗಿ ನೆರವೇರಿತು.
ಶ್ರೀಗಳ ಜನ್ಮದಿನಾಚರಣೆ ಪ್ರಯುಕ್ತ ಸೋಮವಾರ ಬೆಳಗ್ಗೆ ಶ್ರೀ ದತ್ತ ವೆಂಕಟೇಶ್ವರ ದೇವಸ್ಥಾನದಲ್ಲಿ ಸ್ವಾಮಿಗೆ ರುದ್ರ ಹೋಮ, ಆಯುಷ್ಯ ಹೋಮ, ರುದ್ರ ಅಭಿಷೇಕ ನಡೆಯಿತು.
ನಂತರ ಗಣಪತಿ ಶ್ರೀಗಳನ್ನು ಅಲಂಕೃತ ಸಾರೋಟ್‌ನಲ್ಲಿ ಪ್ರಾರ್ಥನಾ ಮಂದಿರದಿಂದ ನಾದಮಂಟಪದವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಬಳಿಕ ಶ್ರೀ ಚಕ್ರ ಪೂಜೆ ನೆರವೇರಿಸಿ, ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರಿಗೆ ಪ್ರತ್ಯಕ್ಷ ಪಾದ ಪೂಜೆಯನ್ನು ಅವಧೂತ ದತ್ತಪೀಠದ ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ನೆರವೇರಿಸಿ, ಪುಷ್ಪ ನಮನ ಸಲ್ಲಿಸಿದರು.
ಗಣಪತಿ ಸಚ್ಚಿದಾನಂದ ಸ್ವಾಮೀಜಿ ಜನ್ಮದಿನದ ಸಂದರ್ಭಕ್ಕಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊರತಂದಿರುವ ವಿಶೇಷ ನಾಣ್ಯಗಳನ್ನು ಬಿಡುಗಡೆ ಮಾಡಿ ಗೌರವ ಸಮರ್ಪಿಸಿದ್ದು ವಿಶೇಷವಾಗಿತ್ತು. ಆರ್‌ಬಿಐನ ಹೈದರಾಬಾದ್ ಶಾಖೆಯ ವ್ಯವಸ್ಥಾಪಕಿ ಪಿ.ವಿಜಯಲಕ್ಷ್ಮೀ ನಾಣ್ಯಗಳನ್ನು ಸ್ವಾಮೀಜಿಗೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದ ಗಣಪತಿ ಶ್ರೀಗಳು, ಹರಿ ಓಂ ನಮಃ ಶಿವಾಯ ಮಂತ್ರ ಪಠಣ ಮಾಡಿದರೆ ಎಲ್ಲರಿಗೂ ಒಳಿತಾಗಲಿದೆ. ನಾವೆಲ್ಲ ಸನಾತನ ಧರ್ಮವನ್ನು ರಕ್ಷಿಸಬೇಕು. ಧರ್ಮ ಮಾರ್ಗದಲ್ಲಿ ನಡೆಯುವವರನ್ನು ಭಗವಂತ ರಕ್ಷಿಸುತ್ತಾನೆ. ಅಧರ್ಮ ಮಾಡುವವರನ್ನು ಶಿಕ್ಷಿಸುತ್ತಾನೆ ಎಂದರು.
ಭಾನುವಾರವಷ್ಟೇ ಭಾರತ ಸೇನೆಗೆ 25 ಲಕ್ಷ ರೂ. ಕಾಣಿಕೆ ಸಮರ್ಪಿಸಿದ್ದೇವೆ. ಕಷ್ಟಗಳು ಬರುತ್ತವೆ ಹಾಗೇ ಹೋಗುತ್ತದೆ. ಆ ಭಗವಂತನನ್ನು ನಂಬಿ ಪ್ರಾರ್ಥಿಸಿದರೆ ಎಲ್ಲವೂ ಪರಿಹಾರವಾಗುತ್ತದೆ ಎಂದು ತಿಳಿಸಿದರು.
ಬಿರುದು ಪ್ರದಾನ
ಪಾದಪೂಜೆ ನಂತರ ಹಲವು ದಿಗ್ಗಜರಿಗೆ ಚೈತನ್ಯ ಅರ್ಚನ-ದತ್ತ ಪೀಠದ ಬಿರುದು ಪ್ರದಾನ ಮಾಡಲಾಯಿತು.
ವೇದ ನಿಧಿ-ವಿಷ್ಣುಭಟ್ಲ ಲಕ್ಷ್ಮೀ ನಾರಾಯಣ ಘನಪಾಠಿ, ಶಾಸ್ತ್ರ ನಿಧಿ-ಕುಪ್ಪ ವಿಶ್ವನಾಥ ಶಾಸ್ತ್ರಿ, ನಾದ ನಿಧಿ-ಪಂ.ವಿನಾಯಕ ತೊರವಿ, ನಾದ ನಿಧಿ- ವಿದ್ವಾನ್ ಶಶಾಂಕ್ ಸುಬ್ರಮಣ್ಯಂ, ನಾಟ್ಯ ನಿಧಿ- ಭರತನಾಟ್ಯ ವಿದುಷಿ ಟಿ.ಎಸ್.ಲಕ್ಷ್ಮೀ, ಆಸ್ಥಾನ ಶಿಲ್ಪಿ- ಕಲಾವಿದ ಕೃಷ್ಣಮೂರ್ತಿ, ಜಯಲಕ್ಷ್ಮೀ ಪುರಸ್ಕಾರ- ಗಂಗಾವರಂ ವೇದಾವತಿ ಮತ್ತು ಗೀತಾ ಪುಂಜಾಲ, ದತ್ತ ಪೀಠ ಬಂಧು- ಕಮಲ್‌ಕಪೂರ್, ಸಂಪತ್‌ಕುಮಾರ್ ಆಚಾರ್, ಕಂಟೇಟಿ ಶ್ರೀನಿವಾಸ್ ಹಾಗೂ ಮೈಸೂರಿನ ಎಸ್.ನಾಗರಾಜ್, ಸಸ್ಯ ಬಂಧು- ಸುಚಿತಾ ರೆಡ್ಡಿ ಅವರಿಗೆ ಬಿರುದು ಪ್ರದಾನ ಮಾಡಿ ಶ್ರೀಗಳು ಆಶೀರ್ವದಿಸಿದರು.
ಇದೇ ಪ್ರಥಮ ಬಾರಿಗೆ ಶ್ರೀಗಳು ನಾಟ್ಯನಿಧಿ ಪ್ರಶಸ್ತಿಯನ್ನು ಪ್ರಾರಂಭಿಸುವ ಮೂಲಕ ಪೀಠವು ಕಲಾ ಪೋಷಣೆಗೂ ಮನ್ನಣೆ ನೀಡಿದೆ ಎಂಬುದನ್ನು ತೋರಿದ್ದಾರೆ.