ಆತ್ಮವಿಶ್ವಾಸ ತುಂಬುವುದು ಶಿಕ್ಷಣದ ಉದ್ದೇಶ: ಚಿಕ್ಕಮಗಳೂರು ಗಣೇಶ

mysore
Published on

ಮೈಸೂರು: ಶಿಕ್ಷಣದ ಮೂಲ ಉದ್ದೇಶ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬುವುದು. ಆ ಮೂಲಕ ಸಮಾಜದಲ್ಲಿ ಘನತೆ-ಗೌರವದಿಂದ ಬದುಕಲು ಪ್ರೇರಣೆ ನೀಡುವುದಾಗಿದೆ. ಪ್ರಾಮಾಣಿಕತೆ ಹಾಗೂ ನೈತಿಕ ಸ್ವಚ್ಛತೆಯಿಂದ ಮನುಷ್ಯರ ವ್ಯಕ್ತಿ ಚೈತನ್ಯ ಅರಳಿ ಪರಿಮಳಿಸುವ ಪ್ರಕ್ರಿಯೆಗೆ ಶಿಕ್ಷಣವು ಮುಖ್ಯ ಮಾಧ್ಯಮವಾಗಬೇಕಿದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಚಿಕ್ಕಮಗಳೂರು ಗಣೇಶ ತಿಳಿಸಿದರು.

ಹುಣಸೂರು ತಾಲೂಕಿನ ಬಿಳಿಕೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕ್ರೀಡೆ, ಎನ್‌ಎಸ್‌ಎಸ್, ರೆಡ್‌ಕ್ರಾಸ್, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಘಟಕಗಳ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷಣ ಎನ್ನುವುದು ಹೃದಯ, ಮಿದುಳು, ಕೈ-ಕಾಲು, ಬೆರಳುಗಳು -ಹೀಗೆ ಮನುಷ್ಯರ ಸಮಗ್ರ ಬೆಳವಣಿಗೆಗೆ ಪೂರಕವಾಗಿರಬೇಕು. ಆಗ ಮಾತ್ರವೇ ಸಮತೋಲಿತ ನೆಲೆಯ ಪರಿಪೂರ್ಣ ವ್ಯಕ್ತಿತ್ವ ರೂಪುಗೊಳ್ಳಲು ಸಾಧ್ಯ ಎಂದರು.

ಪ್ರಸ್ತುತ ಕೇವಲ ಮಿದುಳನ್ನು ಬೆಳೆಸುವ ಬುದ್ಧಿಚಾತುರ್ಯವನ್ನು ಮಾತ್ರ ಶಿಕ್ಷಣದ ಹೆಸರಲ್ಲಿ ಕಲಿಸಲಾಗುತ್ತಿದೆ. ಅಂಕ ಗಳಿಕೆಯಷ್ಟನ್ನೇ ಮೆರಿಟ್, ಪ್ರತಿಭೆ ಎಂದು ಗುರುತಿಸಲಾಗುತ್ತಿದೆ. ಹಾಗಾಗಿಯೇ ಸ್ವಂತ ಕೌಶಲ ನಂಬಿ ಉದ್ಯೋಗವಂತರಾಗಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ನುಡಿದರು.

ರೈತರು, ಸೈನಿಕರು, ಮೇಷ್ಟ್ರುಗಳು ಸಂಸ್ಕೃತಿಯ ಪ್ರಗತಿಗೆ ಬಹುಮುಖ್ಯ ಶಕ್ತಿಯಾಗಿದ್ದಾರೆ. ಅವರೆಲ್ಲ ವಿಶ್ವಾಸಘಾತುಕರಾದರೆ, ಜಾತಿವಾದಿ-ಕೋಮುವಾದಿಗಳಾಗಿ ವಿಷ ಉಣಿಸತೊಡಗಿದರೆ ಸಮಾಜ ಅಧಃಪತನಕ್ಕೆ ಇಳಿಯುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು

ಮೇಷ್ಟ್ರುಗಳಂತೂ ತಲೆಮಾರುಗಳನ್ನು ನಿರ್ಮಿಸುವವರು. ಭವಿಷ್ಯ ಭಾರತದ ಚೈತನ್ಯಗಳನ್ನು ರೂಪಿಸುವವರು. ಅವರು ಕರ್ತವ್ಯ ಮರೆತು ಲೋಪ ಎಸಗುತ್ತಿರುವುದಂತೂ ಅಕ್ಷಮ್ಯ ಎಂದು ಬೇಸರ ವ್ಯಕ್ತಪಡಿಸಿದರು.

ವಿದ್ಯಾರ್ಥಿಗಳನ್ನು ಹೃದಯವಂತರಾಗಿ ಬೆಳೆಸುವಲ್ಲಿ ಈ ಹೊತ್ತಿನ ಶಿಕ್ಷಕರು ವಿಫಲರಾಗುತ್ತಿದ್ದಾರೆ. ತರಗತಿಗಳಲ್ಲಿ ಧರ್ಮಗಳ ಸಮನ್ವಯತೆ ಸಾರುವುದು, ಜಾತ್ಯತೀತ ಭಾವ ಮೂಡಿಸುವುದು ಶಿಕ್ಷಕರ ಕರ್ತವ್ಯ.

ಪಠ್ಯಗಳ ಮೂಲಕ ಹೆಣ್ಣುಮಕ್ಕಳನ್ನು ಗೌರವಿಸುವ, ಆಹಾರ ವೈವಿಧ್ಯವನ್ನು ಸಹಿಸುವ, ಧರ್ಮಾತೀತವಾಗಿ ಬದುಕುವ, ಸಂವಿಧಾನವನ್ನು ಧರ್ಮಗ್ರಂಥವಾಗಿ ಪಾಲಿಸುವ, ನಮ್ಮ ಸುತ್ತ ಇರುವ ಎಲ್ಲ ಹಿನ್ನೆಲೆಯ ದೇಶವಾಸಿಗಳನ್ನು ಪ್ರೀತಿಸುತ್ತಾ ದೇಶಪ್ರೇಮಿಯಾಗುವ ಪಾಠಗಳನ್ನು ಹೇಳಿಕೊಡುವುದು ಅವರ ಪ್ರಾಥಮಿಕ ಕರ್ತವ್ಯವಾಗಿದೆ.

ಇವುಗಳನ್ನು ಮರೆತು ಕರ್ತವ್ಯಲೋಪ ಎಸಗುವವರನ್ನು ನಾಗರಿಕ ಚರಿತ್ರೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದರು.

ಶಾಸಕ ಜಿ.ಡಿ. ಹರೀಶಗೌಡ ಮಾತನಾಡಿ, ಕಾಲೇಜು ಅಭಿವೃದ್ಧಿ ಸಂಬಂಧ ಹಲವು ಯೋಜನೆಗಳನ್ನು ಪೂರೈಸುವ ಭರವಸೆ ನೀಡಿದರು. ಪ್ರಾಂಶುಪಾಲ ಎಂ.ಕೆ.ರಮೇಶ, ಸಾಂಸ್ಕೃತಿಕ ವೇದಿಕೆ ಸಂಚಾಲಕಿ ಎಸ್.ವಿ.ಆಶಾರಾಣಿ, ದೈಹಿಕ ಶಿಕ್ಷಣ ನಿರ್ದೇಶಕ ಎಲ್.ಲೋಹಿತ್, ಎನ್‌ಎಸ್‌ಎಸ್ ಅಧಿಕಾರಿ ದೀಪಿಕಾ, ರೆಡ್‌ಕ್ರಾಸ್ ಘಟಕದ ಸಂಚಾಲಕ ಡಾ.ಬಿ.ಎಸ್.ಯೋಗೇಶ್, ಗ್ರಂಥಾಪಾಲಕ ಎಚ್.ಸಿ.ಗಂಗಾಧರ್, ಐಕ್ಯೂಎಸಿ ಘಟಕದ ಸಂಚಾಲಕಿ ಡಾ. ಬಿ.ಜಯಲಕ್ಷ್ಮೀ, ಕಚೇರಿ ಅಧೀಕ್ಷಕ ಕೆ.ಎನ್.ಧರ್ಮಕುಮಾರ್ ಇದ್ದರು.

ನಂತರ ಕಾಲೇಜಿನ ಅಧ್ಯಾಪಕರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net