

ವಾಷಿಂಗ್ಟನ್: ಇತ್ತೀಚೆಗೆ ಕಾಬುಲ್ನಲ್ಲಿ ಪೂರ್ಣ ಕಪ್ಪು ಬಟ್ಟೆಯಲ್ಲಿ ಮುಖ ಮುಚ್ಚಿಕೊಂಡಿದ್ದ ಕೆಲವು ಮಹಿಳೆಯರು ಕಟ್ಟಾವಾದಿ ತಾಲಿಬಾನ್ ಪರ ರಾಲಿಯೊಂದನ್ನು ನಡೆಸಿದ್ದು ವರದಿಯಾಗಿತ್ತು. ಇದರಿಂದ ಅಸಮಾಧಾನಗೊಂಡಿರುವ ಅಫ್ಘನ್-ಅಮೇರಿಕನ್ ಇತಿಹಾಸಕಾರ್ತಿಯೊಬ್ಬರು ತಾಲಿಬಾನ್ ಹೇರುತ್ತಿರುವ ಕಪ್ಪು ಉಡುಗೆಗಳ ಸಂಸ್ಕೃತಿ ನಮ್ಮದಲ್ಲ. ನಮ್ಮದು ರಂಗುರಂಗಿನ ಉಡುಗೆಗಳ ಸಂಸ್ಕೃತಿ ಎಂದು ಕೂಗೆಬ್ಬಿಸಿದ್ದಾರೆ.
ಪ್ರಸ್ತುತ ಅಮೆರಿಕದ ಮೇರಿಲ್ಯಾಂಡಿನ ಗ್ಲೇನ್ವುಡ್ ಮಿಡಲ್ಸ್ಕೂಲ್ನಲ್ಲಿ ಇತಿಹಾಸ ಶಿಕ್ಷಕಿಯಾಗಿರುವ ಅಫ್ಘಾನಿಸ್ತಾನ ಮೂಲದ ಬಹಾರ್ ಜಲಾಲಿ ಅವರು ಸಾಮಾಜಿಕ ಮಾಧ್ಯಮದಲ್ಲಿ ಅಭಿಯಾನವೊಂದನ್ನು ಆರಂಭಿಸಿದ್ದಾರೆ. ಇದಕ್ಕಾಗಿ #DoNotTouchMyClothes ಮತ್ತು #AfghanistanCulture ಎಂಬ ಹ್ಯಾಷ್ಟ್ಯಾಗ್ಗಳನ್ನು ಸೃಷ್ಟಿಸಿ, ನಿಜವಾದ ಅಫ್ಘನ್ ಪರಂಪರೆಯಲ್ಲಿರುವ ಮಹಿಳೆಯರ ಉಡುಗೆತೊಡುಗೆಗಳನ್ನು ಬಿಂಬಿಸುವ ಪ್ರಯತ್ನ ಕೈಗೊಂಡಿದ್ದಾರೆ. ಈ ಹ್ಯಾಶ್ಟ್ಯಾಗ್ಗಳು ಜನಪ್ರಿಯಗೊಂಡಿದ್ದು, ಹಲವು ಅಫ್ಘನ್ ಮಹಿಳೆಯರು ರಂಗುರಂಗಾದ, ಎಂಬ್ರಾಯ್ಡರಿಸಹಿತ ಉಡುಗೆಗಳನ್ನು ತೊಟ್ಟು ಮುಖದಲ್ಲಿ ನಗುವರಳಿಸಿರುವ ಫೋಟೋಗಳನ್ನು ಪೋಸ್ಟ್ ಮಾಡುತ್ತಿದ್ದಾರೆ.
ಪ್ರಗತಿಪರ ಸರ್ಕಾರವಿದ್ದ ಅಫ್ಘಾನಿಸ್ತಾನದಲ್ಲೂ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪಾಠ ಮಾಡಿರುವ ಜಲಾಲಿ, ಜಗತ್ತು ಕಪ್ಪು ಬಟ್ಟೆಗಳನ್ನೇ ಅಫ್ಘನ್ ಪಾರಂಪರಿಕ ಉಡುಗೆ ಎಂದು ತಿಳಿಯಬಾರದು. ನಮ್ಮ ಪರಂಪರೆ ಮತ್ತು ಸಂಸ್ಕೃತಿ ತಪ್ಪಾಗಿ ಬಿಂಬಿತವಾಗಬಾರದು ಎಂದಿದ್ದಾರೆ. "ಅಫ್ಘನ್ ಮಹಿಳೆಯರು ಹಿಜಾಬ್ ತೊಡುವುದಿಲ್ಲ. ನಾವು ಕೂದಲನ್ನು ಹೊರಗೆಬಿಟ್ಟು ಸಡಿಲವಾಗಿ ಕಟ್ಟಿದ ಶಿಫಾನ್ ಹೆಡ್ಸ್ಕಾರ್ಫನ್ನು ತೊಡುತ್ತೇವೆ" ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮತ್ತೆ ಅಫ್ಘಾನಿಸ್ತಾನದ ಚುಕ್ಕಾಣಿ ಹಿಡಿದಿರುವ ತಾಲಿಬಾನಿಗಳ ಆಳ್ವಿಕೆಯಲ್ಲಿ ಮಹಿಳೆಯರಿಗೆ ಹಿಜಾಬ್ ಸೇರಿದಂತೆ ಹಲವು ನಿರ್ಬಂಧಗಳ ಸಂಕೋಲೆ ಎದುರಾಗಿದೆ. ಮಹಿಳೆಯರಿಗೆ ಹೆಚ್ಚಿನ ಅವಕಾಶಗಳನ್ನು ನೀಡುವುದಾಗಿ ಹೇಳಿಕೊಂಡಿರುವ ತಾಲಿಬಾನ್ ನಾಯಕರು, ಮಹಿಳೆಯರು ಯೂನಿವರ್ಸಿಟಿಗಳಲ್ಲಿ ಕಲಿಯಬಹುದು. ಆದರೆ, ತರಗತಿಗಳು ಲಿಂಗದ ಆಧಾರದ ಮೇಲೆ ಪ್ರತ್ಯೇಕವಾಗಿರಬೇಕು ಅಥವಾ ಪರದೆಯಿಂದ ವಿಭಜಿತಗೊಂಡಿರಬೇಕು ಎಂದಿದ್ದಾರೆ. ವಿದ್ಯಾರ್ಥಿನಿಯರು ಇಡೀ ದೇಹ ಮತ್ತು ಮುಖವನ್ನು ಮುಚ್ಚಿ, ಕಣ್ಣುಗಳಿಗೆ ಮಾತ್ರ ತೆರೆದ ಜಾಗ ಇರುವ ಅಬಯಾ ರೋಬ್ ಮತ್ತು ನಿಖಾಬ್ ಧರಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)