

ನವದೆಹಲಿ: ಕರೊನಾ ಸೋಂಕಿನ ಪ್ರಮಾಣದಲ್ಲಿ ಇಳಿಕೆ ಕಂಡುಬರುತ್ತಿದ್ದು, ಇದೀಗ ಅಂತರರಾಷ್ಟ್ರೀಯ ಪ್ರಯಾಣಕ್ಕೆ ಪುನಃ ಅವಕಾಶಗಳು ತೆರೆದುಕೊಳ್ಳುತ್ತಿವೆ. ಈ ಸಂದರ್ಭದಲ್ಲಿ ಕರೊನಾ ಲಸಿಕೆಯ ಎರಡೂ ಡೋಸ್ಗಳನ್ನು ಪಡೆದುಕೊಂಡಿದ್ದು, ವಿದೇಶ ಪ್ರಯಾಣ ಮಾಡಲಿಚ್ಛಿಸುವ ಭಾರತೀಯರು ಅಂತರರಾಷ್ಟ್ರೀಯ ಸ್ಟ್ಯಾಂಡರ್ಡ್ನಂತೆ ತಮ್ಮ ಕೋವಿನ್ ಮೂಲಕ ಲಸಿಕೆ ಸರ್ಟಿಫಿಕೇಟ್ ಪಡೆಯಬಹುದಾಗಿದೆ.
ಡಬ್ಲ್ಯೂಎಚ್ಒ ಮಾನದಂಡದಂತೆ ಜನ್ಮದಿನಾಂಕವನ್ನು ತೋರಿಸುವ ವ್ಯಾಕ್ಸಿನ್ ಸರ್ಟಿಫಿಕೇಟ್ಗಳನ್ನು ಕೋ-ವಿನ್ ಪೋರ್ಟಲ್ನಲ್ಲಿ ಪಡೆದುಕೊಳ್ಳುವ ಅವಕಾಶ ಕಲ್ಪಿಸಲಾಗಿದೆ ಎಂದು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ(ಎನ್ಎಚ್ಎ) ಮುಖ್ಯಸ್ಥ ಆರ್.ಎಸ್.ಶರ್ಮ ತಿಳಿಸಿದ್ದಾರೆ. ಹಾಲಿ, ಜನಿಸಿದ ವರ್ಷದ ಮಾಹಿತಿಯ ಆಧಾರದ ಮೇಲೆ ವಯಸ್ಸನ್ನು ಮಾತ್ರ ಸರ್ಟಿಫಿಕೇಟಿನಲ್ಲಿ ಬಿಂಬಿಸಲಾಗುತ್ತಿತ್ತು ಎನ್ನಲಾಗಿದೆ.
ಇದೀಗ ಲಸಿಕೆ ಫಲಾನುಭವಿಗಳು ಕೋವಿನ್ ಪೋರ್ಟಲ್ಗೆ ಹೋಗಿ ತಮ್ಮ ಪಾಸ್ಪೋರ್ಟ್ನಲ್ಲಿರುವಂತೆ ಜನ್ಮದಿನಾಂಕವನ್ನು 'yyyy-mm-dd' ಫಾರ್ಮಾಟ್ನಲ್ಲಿ ಅಪ್ಡೇಟ್ ಮಾಡಬಹುದು. ತದನಂತರ ಅಂತರರಾಷ್ಟ್ರೀಯ ಯಾತ್ರಿಕರಿಗೆ ಅವಶ್ಯಕವಾಗಿರುವ ರೀತಿಯಲ್ಲಿ ಜನ್ಮದಿನಾಂಕದ ವಿವರದೊಂದಿಗೆ ವ್ಯಾಕ್ಸಿನ್ ಸರ್ಟಿಫಿಕೇಟನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಶರ್ಮ ತಿಳಿಸಿದ್ದಾರೆಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. (ಏಜೆನ್ಸೀಸ್)