More

    ಚಿಕಿತ್ಸೆಗೆ ಟೆಲಿ ರೊಬಾಟಿಕ್ ಅಲ್ಟ್ರಾಸೌಂಡ್: ಕನ್ನಡಿಗನ ವಿನೂತನ ಸಂಶೋಧನೆ

    | ರಾಘವ ಶರ್ಮ ನಿಡ್ಲೆ ನವದೆಹಲಿ

    ಕರೊನಾ ರೋಗಿಗಳ ನಿರ್ವಹಣೆ ವೇಳೆ ನೂರಾರು ಆರೋಗ್ಯ ಸಿಬ್ಬಂದಿ ಸೋಂಕಿಗೆ ತುತ್ತಾಗಿದ್ದಲ್ಲದೆ, ಕೆಲವರು ಪ್ರಾಣವನ್ನೂ ಕಳೆದುಕೊಂಡಿದ್ದಾರೆ. ಪಿಪಿಇ ಕಿಟ್ ಬಳಕೆ ನಂತರ ಸೋಂಕಿಗೀಡಾಗುವ ಆರೋಗ್ಯ ಸಿಬ್ಬಂದಿ ಸಂಖ್ಯೆ ಕಡಿಮೆಯಾಗಿದ್ದರೂ, ಕಿಟ್ ಧರಿಸಿ ಕಾರ್ಯನಿರ್ವಹಿಸುವುದು ಅತ್ಯಂತ ಸವಾಲಿನದ್ದಾಗಿದೆ. ಈ ಹಿನ್ನೆಲೆಯಲ್ಲಿ ದೆಹಲಿಯ ‘ಏಮ್ಸ್’ ಆಸ್ಪತ್ರೆ ಮತ್ತು ಐಐಟಿ ದೆಹಲಿಯ ತಜ್ಞರು ಸಿದ್ಧಪಡಿಸಿರುವ ‘ಟೆಲಿ ರೊಬಾಟಿಕ್ ಅಲ್ಟ್ರಾಸೌಂಡ್’ ಎಂಬ ಹೊಸ ಸಂಶೋಧನೆ ಈಗ ಗಮನಸೆಳೆದಿದೆ.

    ಏಮ್ಸ್ ಆಸ್ಪತ್ರೆಯಲ್ಲಿ ಇಂಟರ್​ವೆನ್ಷನಲ್ ರೇಡಿಯಾಲಜಿಸ್ಟ್ (ವಿಕಿರಣ ಚಿಕಿತ್ಸಕ) ಮತ್ತು ರೇಡಿಯಾಲಜಿ ವಿಭಾಗದ ಡಾ. ಎಸ್.ಎಚ್. ಚಂದ್ರಶೇಖರ್ ಈ ವಿನೂತನ ತಂತ್ರಜ್ಞಾನ ಕಂಡುಹಿಡಿದ ಸಂಶೋಧನಾ ತಂಡದ ಪ್ರಮುಖರು. ಚಂದ್ರಶೇಖರ್ ಕನ್ನಡಿಗರೆನ್ನು ವುದು ರಾಜ್ಯಕ್ಕೆ ಹೆಮ್ಮೆಯ ವಿಷಯ.

    ಏನಿದು ಟೆಲಿ ರೊಬಾಟಿಕ್ ಅಲ್ಟ್ರಾ ಸೌಂಡ್?: ಮಾನವನ ಸ್ಪರ್ಶವಿಲ್ಲದೆ, ದೂರದಲ್ಲಿ ಕುಳಿತು ಕಂಪ್ಯೂಟರ್ ಬಳಸಿಕೊಂಡು ರೋಬಾಟ್ ನಿರ್ವ ಹಣೆಯಲ್ಲೇ ವ್ಯಕ್ತಿಯ ವೈದ್ಯಕೀಯ ಪರೀಕ್ಷೆ (ಅಲ್ಟ್ರಾಸೌಂಡ್, ಸ್ಕ್ಯಾನಿಂಗ್ ಇತ್ಯಾದಿ) ನಡೆಸುವ ಅತ್ಯಾಧುನಿಕ ತಂತ್ರಜ್ಞಾನವೇ ಟೆಲಿ ರೊಬಾಟಿಕ್ ಅಲ್ಟ್ರಾಸೌಂಡ್. ಇದರಿಂದ ರೋಗಿ ದಾಖಲಾಗಿರುವ ಆಸ್ಪತ್ರೆಯಲ್ಲ, ಮತ್ತೊಂದು ಊರಿನಲ್ಲಿ ಕುಳಿತೂ ವೈದ್ಯರು ರೋಗಿಯನ್ನು ಪರೀಕ್ಷೆಗೆ ಒಳಪಡಿಸಬಹುದು. ಅಂದರೆ, ಯಾವುದೋ ಹಳ್ಳಿಯೊಂದರ ಆಸ್ಪತ್ರೆಗೆ ರೇಡಿಯಾಲಜಿಸ್ಟ್ ಅಥವಾ ಸಂಬಂಧಪಟ್ಟ ವೈದ್ಯರು ಭೇಟಿ ನೀಡಲು ಅಸಾಧ್ಯವಾದ ಸಂದರ್ಭದಲ್ಲಿ ವೈದ್ಯರು ತಾವಿರುವ ಸ್ಥಳದಿಂದಲೇ ಕಂಪ್ಯೂಟರ್ ಇಂಟರ್ನೆಟ್ ಮೂಲಕ ರೊಬಾಟನ್ನು ನಿರ್ವಹಿಸಿ ರೋಗಿಯನ್ನು ಪರೀಕ್ಷಿಸಬಹುದು. ಏಮ್ಸ್ ಆಸ್ಪತ್ರೆಯ ರೇಡಿಯಾಲಜಿ ವಿಭಾಗ, ಐಐಟಿ ದೆಹಲಿಯ ರೊಬಾಟಿಕ್ ವಿಭಾಗ ಮತ್ತು ಆಡ್ವರ್ಬ್ ರೊಬಾಟಿಕ್ ಕಂಪನಿಯ ತಜ್ಞರು ಇಂಥದ್ದೊಂದು ತಂತ್ರಜ್ಞಾನವನ್ನು ಸಂಶೋಧಿಸಿದ್ದಾರೆ. ಈ ತಂತ್ರಜ್ಞಾನದ ಪ್ರಯೋಗವೂ ಯಶಸ್ವಿಯಾಗಿದ್ದು, ಕೇಂದ್ರ ಆರೋಗ್ಯ ಇಲಾಖೆಯೂ ಮೆಚ್ಚುಗೆ ವ್ಯಕ್ತಪಡಿಸಿದೆ. ಪ್ರಪಂಚದಲ್ಲೇ ಮೊದಲ ಬಾರಿಗೆ ಈ ಅನ್ವೇಷಣೆ ನಡೆದಿದೆ ಎಂದು ಡಾ. ಚಂದ್ರಶೇಖರ್ ವಿಜಯವಾಣಿ ಜತೆ ಸಂತಸ ಹಂಚಿಕೊಂಡಿದ್ದಾರೆ.

    ಪಿಪಿಇ ಕಿಟ್ ಅಗತ್ಯವಿಲ್ಲ: ಸದ್ಯ ಕರೊನಾ ರೋಗಿಗಳ ಅಲ್ಟ್ರಾಸೌಂಡ್ ಅನ್ನು ವೈದ್ಯಾಧಿಕಾರಿಗಳು ಪಿಪಿಇ ಕಿಟ್ ಧರಿಸಿಯೇ ಮಾಡುತ್ತಾರೆ. ಹಾಗಿದ್ದರೂ, ಅನೇಕ ಸಂದರ್ಭಗಳಲ್ಲಿ ಕರೊನಾ ಸೋಂಕು ಸಿಬ್ಬಂದಿಗೆ ತಗುಲಿದ್ದುಂಟು. ಆದರೆ, ರೊಬಾಟಿಕ್ ಅಲ್ಟ್ರಾಸೌಂಡ್ ಸಿಸ್ಟಂನಿಂದಾಗಿ ರೇಡಿಯಾಲಜಿಸ್ಟ್​ಗಳು ಕರೊನಾ ರೋಗಿಗಳ ಬಳಿಗೆ ತೆರಳುವ ಅಗತ್ಯವೇ ಇರುವುದಿಲ್ಲ ಮತ್ತು ಪಿಪಿಇ ಕಿಟ್​ಗಳು ಅನಗತ್ಯವಾಗಿ ವ್ಯರ್ಥವಾಗುವುದನ್ನು ತಡೆಯುವ ಜತೆಗೆ ಮಾನವ ಸಂಪನ್ಮೂಲವನ್ನೂ ಉಳಿಸಿದಂತಾಗುತ್ತದೆ. ಪ್ರಯೋಗ ಹಂತದಲ್ಲಿ 20 ಸ್ವಯಂಸೇವಕರ ಮೇಲೆ ಮಾನವ ಸ್ಪರ್ಶದಿಂದ ಮತ್ತು ರೊಬಾಟಿಕ್ ಸಾಧನದ ಮೂಲಕ ಪರೀಕ್ಷೆ ನಡೆಸಲಾಯಿತು. ಎರಡೂ ಪರೀಕ್ಷೆಗಳ ಫಲಿತಾಂಶದಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ ಎನ್ನುತ್ತಾರೆ ಏಮ್ಸ್ ವೈದ್ಯರು.

    ಈ ತಂತ್ರಜ್ಞಾನ ಮತ್ತಷ್ಟು ಅಭಿವೃದ್ಧಿಗೊಂಡಲ್ಲಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲೇ ಕುಳಿತುಕೊಂಡು ದೇಶದ ಯಾವುದೋ ಮೂಲೆಯಲ್ಲಿರುವ ಆಸ್ಪತ್ರೆಯ ರೋಗಿಯ ಪರೀಕ್ಷೆೆ ನಡೆಸಬಹುದು. ಎಷ್ಟೋ ಆಸ್ಪತ್ರೆಗಳಲ್ಲಿ ಮೂಲಸೌಕರ್ಯಗಳಿದ್ದರೂ, ತಜ್ಞ ವೈದ್ಯರ ಕೊರತೆಯಿರುತ್ತದೆ. ಹೀಗಿದ್ದಾಗ, ಟೆಲಿ ರೊಬಾಟಿಕ್ ತಂತ್ರಜ್ಞಾನ ಅತ್ಯಂತ ಅನುಕೂಲ ಎನಿಸಿಕೊಳ್ಳಲಿದೆ’
    | ಡಾ.ಎಸ್.ಎಚ್. ಚಂದ್ರಶೇಖರ್ ಏಮ್ಸ್ ಆಸ್ಪತ್ರೆಯ ರೇಡಿಯಾಲಜಿ ವಿಭಾಗದ ಹೆಚ್ಚುವರಿ ಪ್ರಾಧ್ಯಾಪಕ, ದೆಹಲಿ

    ಓಡಾಟ ತಪ್ಪಲಿದೆ

    ಟಿಲಿ ರೊಬಾಟಿಕ್ ಮಷಿನ್ ಅಳವಡಿಕೆಗೆ ಖರ್ಚು ಮಾಡಬೇಕಾಗಬಹುದು. ಆದರೆ, ಸರ್ಕಾರಗಳು ಇದನ್ನು ಅಧಿಕೃತವಾಗಿ ಒಪ್ಪಿಕೊಂಡು ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಅಳವಡಿಸಿದಲ್ಲಿ ಹಳ್ಳಿಗರು ತಜ್ಞ ವೈದ್ಯರಿರುವ, ದೂರ ದೂರಿನ ಆಸ್ಪತ್ರೆಗೆ ತೆರಳುವುದನ್ನು ತಪ್ಪಿಸ ಬಹುದು. ವೈದ್ಯರು ತಾವಿರುವ ಸ್ಥಳಕ್ಕೇ ಅಲ್ಟ್ರಾಸೌಂಡ್ ಚಿತ್ರ ತರಿಸಿ ವಿಶ್ಲೇಷಣೆ ಮಾಡಬಹುದು.

    ತಂಡದಲ್ಲಿ ಯಾರ್ಯಾರಿದ್ದರು?
    ಸಂಶೋಧನಾ ತಂಡದ ಮುಂದಾಳತ್ವ ವಹಿಸಿದ್ದು ಕನ್ನಡಿಗ ಡಾ. ಚಂದ್ರಶೇಖರ್. ಐಐಟಿ ದೆಹಲಿಯಿಂದ ಪೊ›. ಚೇತನ್ ಅರೋರಾ ಮತ್ತು ಪೊ›. ಸುಬೀರ್ ಕುಮಾರ್ ಸಾಹಾ ಹಾಗೂ ಆಡ್ವರ್ಬ್ ಟೆಕ್ನಾಲಜೀಸ್​ನಿಂದ ಸುವಯನ್ ನಂದಿ ಲೀಡ್ ಕಾಂಟ್ರಿಬ್ಯೂಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಐಐಟಿ ದೆಹಲಿಯ ದೀಪಕ್ ರೈನಾ, ಡಾ. ಕೃತಿಕಾ ರಂಗರಾಜನ್, ಡಾ. ಆಯುಷಿ ಅಗರ್ವಾಲ್ (ಏಮ್ಸ್), ಹರ್ದೀಪ್ ಸಿಂಗ್ (ಆಡ್ವರ್ಬ್) ತಂಡದಲ್ಲಿದ್ದರು.

    ಅಂತಾರಾಷ್ಟ್ರೀಯ ಗೌರವಗಳಿಗೆ ಪಾತ್ರ

    ವಿಜಯನಗರ ಜಿಲ್ಲೆಯ ಹಗರಿಬೊಮ್ಮಮನ ಹಳ್ಳಿ ಮೂಲದ ಡಾ. ಚಂದ್ರಶೇಖರ್, ಕಳೆದ 17 ವರ್ಷಗಳಿಂದ ‘ಏಮ್ಸ್’ ಆಸ್ಪತ್ರೆಯ ರೇಡಿಯಾಲಜಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸದ್ಯ ಹೆಚ್ಚುವರಿ ಪ್ರಾಧ್ಯಾಪಕರಾಗಿದ್ದಾರೆ. ಚಿಕ್ಕಜೋಗಿಹಳ್ಳಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಚಂದ್ರಶೇಖರ್, ಮೈಸೂರಿನ ಸರ್ಕಾರಿ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ, ನಂತರ ದೆಹಲಿಯ ಏಮ್ಸ್​ನಲ್ಲಿ ರೇಡಿಯೋ ಡಯಾಗ್ನಸಿಸ್ ವಿಷಯದಲ್ಲಿ ಎಂಡಿ ಹಾಗೂ ಕಾರ್ಡಿಯೋವಾಸ್ಕು್ಯಲಾರ್ ರೇಡಿಯಾಲಜಿ ಮತ್ತು ಎಂಡೋಯೋವಾಸ್ಕು್ಯಲಾರ್ ರೇಡಿಯಾಲಜಿ ವಿಷಯದ ಡಿ.ಎಂ. ಪದವಿ ಪಡೆದರು. ಅನೇಕ ರಾಷ್ಟ್ರೀಯ, ಅಂತಾರಾಷ್ಟ್ರೀಯ ಗೌರವಗಳಿಗೂ ಪಾತ್ರರಾಗಿದ್ದಾರೆ.

    ರೊಬಾಟಿಕ್ ಆಮ್ರ್
    ಜೂನ್ 20ರಿಂದ ಈ ಸಂಶೋಧನೆ ಬಗ್ಗೆ ರ್ಚಚಿಸಲು ಶುರುಮಾಡಿ, ನಂತರದಲ್ಲಿ ರೊಬಾಟಿಕ್ ಆಮ್ರ್ (ಭುಜ) ಸಿದ್ಧಪಡಿಸಿದೆವು. ರೊಬಾಟಿಕ್ ಆಮ್ರ್ ತನ್ನೊಂದಿಗೆ ಅಲ್ಟ್ರಾಸೌಂಡ್ ಪರೀಕ್ಷೆ ಮಾಡುವ ಸಾಧನವನ್ನು ಹಿಡಿದುಕೊಂಡು ರೋಗಿಯ ದೇಹಪರೀಕ್ಷೆ ನಡೆಸುತ್ತದೆ. ನಾವು (ವೈದ್ಯರು) ಮತ್ತೊಂದು ಕೊಠಡಿಯಲ್ಲಿ ಕಂಪ್ಯೂಟರ್ ಎದುರು ಕುಳಿತು ರೊಬಾಟಿಕ್ ಆಮ್ರ್ ನಿರ್ವಹಿಸುತ್ತಿದ್ದೆವು. ರೋಗಿಯ ದೇಹಕ್ಕೆ ಎಷ್ಟು ಒತ್ತಡ ಹಾಕಬೇಕು/ಬಾರದು ಎನ್ನುವುದನ್ನೂ ಕಂಪ್ಯೂಟರ್​ನಿಂದಲೇ ನಿಭಾಯಿಸಬಹುದು. ಬಹಳ ಎಚ್ಚರಿಕೆಯಿಂದ ನಯವಾಗಿ ಪರೀಕ್ಷೆ ನಡೆಸುವುದು ಸಾಧ್ಯವಾಗಿತ್ತು ಎನ್ನುತ್ತಾರೆ ಡಾ. ಚಂದ್ರಶೇಖರ್.

    ಎಮರ್ಜೆನ್ಸಿ ಬಟನ್
    ರೊಬಾಟಿಕ್ ಅಲ್ಟ್ರಾಸೌಂಡ್ ನಡೆಸುವ ಸಂದರ್ಭದಲ್ಲಿ ರೋಗಿಗೆ ಎಮರ್ಜೆನ್ಸಿ ಬಟನ್ ಒಂದನ್ನು ನೀಡಲಾಗುತ್ತದೆ. ಏನೇ ಸಮಸ್ಯೆ ಉಂಟಾದರೂ ರೋಗಿ ಆ ಬಟನ್ ಒತ್ತಿದ ಕೂಡಲೇ ರೊಬಾಟ್ ತಕ್ಷಣವೇ ತನ್ನ ಕೆಲಸ ಸ್ಥಗಿತಗೊಳಿಸಿ ಮೂಲಸ್ಥಿತಿಗೆ ಬಂದು ನಿಲ್ಲುತ್ತದೆ. ಪರೀಕ್ಷೆೆ ವೇಳೆ ವಿದ್ಯುತ್ ಸ್ಥಗಿತಗೊಂಡಾಗ ಅಥವಾ ವಿಪರೀತ ನೋವು, ಅಸಹಜ ಅನಿಸಿದಲ್ಲಿ ರೋಗಿ ಈ ಬಟನ್ ಒತ್ತಬಹುದು. ರೋಗಿಯ ಸುರಕ್ಷತೆ ದೃಷ್ಟಿಯಿಂದ ಇದು ಅನುಕೂಲ.

    ಅಮೆರಿಕಕ್ಕೆ ಮೋದಿ ಭೇಟಿ ಇಂಪ್ಯಾಕ್ಟ್‌- ಭಾರತಕ್ಕೆ ಮರಳಿತು 157 ಪುರಾತನ ಐತಿಹಾಸಿಕ ಕಲಾಕೃತಿಗಳು…

    ಹ್ಯಾಟ್ರಿಕ್ ಜಯದ ನಿರೀಕ್ಷೆಯಲ್ಲಿ ಸೂಪರ್‌ಕಿಂಗ್ಸ್-ನೈಟ್‌ರೈಡರ್ಸ್‌

    ಆಯುಷ್ಮಾನ್ ಅಲೆದಾಟ: ಜಾರಿಯಾಗಿ 3 ವರ್ಷವಾದರೂ ಸಿಕ್ತಿಲ್ಲ ಸೇವೆ; ತುರ್ತು ಚಿಕಿತ್ಸೆ ಸೇರಿ ಹಲವು ಸೇವೆಗೆ ಸಮಸ್ಯೆ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts