More

    ಆಯುಷ್ಮಾನ್ ಅಲೆದಾಟ: ಜಾರಿಯಾಗಿ 3 ವರ್ಷವಾದರೂ ಸಿಕ್ತಿಲ್ಲ ಸೇವೆ; ತುರ್ತು ಚಿಕಿತ್ಸೆ ಸೇರಿ ಹಲವು ಸೇವೆಗೆ ಸಮಸ್ಯೆ..

    | ಪಂಕಜ ಕೆ.ಎಂ ಬೆಂಗಳೂರು

    ಬಡವರಿಗೆ ಉಚಿತ ಆರೋಗ್ಯ ಸೇವೆ ಒದಗಿಸುವ ಸದುದ್ದೇಶದೊಂದಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ (ಎಬಿ-ಎಆರ್​ಕೆ) ಯೋಜನೆ ಜಾರಿಗೆ ಬಂದು 3 ವರ್ಷವಾದರೂ ತುರ್ತು ಚಿಕಿತ್ಸೆ ಸೇರಿ ಅಗತ್ಯ ಸೇವೆ ಪಡೆಯಲು ಫಲಾನುಭವಿಗಳು ಪರದಾಡುತ್ತಿದ್ದಾರೆ.

    ಕಳೆದ ಮೂರು ವರ್ಷಗಳಲ್ಲಿ ಯೋಜನೆಯಡಿ 1.47 ಕೋಟಿಗೂ ಅಧಿಕ ಮಂದಿಗೆ ಆರೋಗ್ಯ ಕಾರ್ಡ್ ವಿತರಿಸಲಾಗಿದೆ. ಆದರೆ, ತುರ್ತು ಸಂದರ್ಭದಲ್ಲಿ ಚಿಕಿತ್ಸೆ ಪಡೆಯಲು ಅನುವಾಗುವಂತೆ ಯೋಜನೆಯಡಿ ನೋಂದಣಿ ಮಾಡಿಸಿಕೊಳ್ಳಲು ಖಾಸಗಿ ಆಸ್ಪತ್ರೆಗಳ ಮನವೊಲಿಸುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿದೆ. ಹೀಗಾಗಿ ತುರ್ತಚಿಕಿತ್ಸೆಗಾಗಿ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವಂತಾಗಿದೆ. ಇದನ್ನು ಗಮನಿಸಿದರೆ 1,47,36,918 ಕೋಟಿ ಆರೋಗ್ಯ ಕಾರ್ಡ್ ವಿತರಣೆ ಮಾತ್ರ ಯೋಜನೆಯ ಸಾಧನೆ ಎಂಬಂತಾಗಿದೆ.

    ತೊಡಕುಗಳೇನು?: ಅಪಘಾತಕ್ಕೆ ಒಳಗಾದ ವ್ಯಕ್ತಿಯನ್ನು ಹತ್ತಿರದ ಆಸ್ಪತ್ರೆಗೆ ಗೋಲ್ಡನ್ ಅವರ್ ಮೀರುವ ಮುನ್ನ ಸೇರಿಸಬೇಕು. ಆದರೆ ಆ ಆಸ್ಪತ್ರೆಯು ಯೋಜನೆಯಡಿ ನೋಂದಣಿ ಆಗದಿದ್ದಲ್ಲಿ, ವ್ಯಕ್ತಿಗೆ ತುರ್ತು ಚಿಕಿತ್ಸೆ ದೊರೆತರೂ ಯೋಜನೆಯ ಲಾಭ ಪಡೆಯಲಾಗದು. ಏಕೆಂದರೆ ಅಂತಹ ಆಸ್ಪತ್ರೆಗಳು ರೋಗಿಗಳಿಂದ ಹಣ ಪಾವತಿಸಿಕೊಂಡೆ ಚಿಕಿತ್ಸೆ ನೀಡುತ್ತವೆ. ಇನ್ನು ರೋಗಿ ವೆಂಟಿಲೇಟರ್​ನಲ್ಲಿದ್ದರೆ ಅವರು ಯೋಜನೆಯಡಿ ಚಿಕಿತ್ಸೆ ಪಡೆಯಲು ಅರ್ಹರಿದ್ದರೂ, ಅಂತಹ ಪ್ರಕರಣಗಳನ್ನು ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಿಸಿಕೊಳ್ಳುವುದಿಲ್ಲ. ಇದರಿಂದ ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳಲ್ಲೇ ಚಿಕಿತ್ಸೆ ಕೊಡಿಸಬೇಕಾಗುತ್ತದೆ. ಇವೆಲ್ಲವೂ ಯೋಜನೆಯ ಸಫಲತೆಗೆ ತೊಡಕಾಗಿ ಪರಿಣಮಿಸಿದೆ.

    ನಿಯಮ ಸರಳಗೊಳಿಸಲು ಆಗ್ರಹ: ತುರ್ತು ಚಿಕಿತ್ಸೆ ಪಡೆಯುವ ರೋಗಿಗಳನ್ನು ಬಹುತೇಕ ಸಂದರ್ಭದಲ್ಲಿ (ರೋಗಿ ಗಂಭೀರ ಸ್ಥಿತಿಯಲ್ಲಿದ್ದಾಗ) ಸ್ಥಳಾಂತರ ಮಾಡುವುದು ಸಾಧ್ಯವಾಗುವುದಿಲ್ಲ. ಅದಕ್ಕೆ ಆಸ್ಪತ್ರೆಯವರೂ ಸಮ್ಮತಿ ನೀಡುವುದಿಲ್ಲ. ಆಗ ರೋಗಿಗಳು ಅನಿವಾರ್ಯವಾಗಿ ಹಣ ಪಾವತಿ ಮಾಡಬೇಕಾಗುತ್ತದೆ. ಈ ಸಮಸ್ಯೆಯನ್ನು ಅರಿತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೋಗಿಗಳಿಗೆ ಅನುಕೂಲ ಆಗುವಂತಹ ಸರಳ ನಿಯಮ ರೂಪಿಸುವ ಅಗತ್ಯವಿದೆ. ಯೋಜನೆಯಡಿ ಎಲ್ಲ ಆಸ್ಪತ್ರೆಗಳು ನೋಂದಣಿ ಆಗದಿರುವುದು ಈ ಸಮಸ್ಯೆಗೆ ಕಾರಣ ಎನ್ನುತ್ತಾರೆ ಖಾಸಗಿ ಆಸ್ಪತ್ರೆಗಳ ವೈದ್ಯರು.

    ತುರ್ತು ಸಂದರ್ಭದಲ್ಲಿ ರೋಗಿಯನ್ನು ಯಾವ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕು ಎಂದು ಯೋಚಿಸುತ್ತಾ ಸಮಯ ವ್ಯರ್ಥ ಮಾಡಿದರೆ ರೋಗಿಯ ಜೀವಕ್ಕೆ ಆಪತ್ತು. ಆ ಸಂದರ್ಭದಲ್ಲಿ ರೋಗಿಗೆ ತುರ್ತು ಚಿಕಿತ್ಸೆಯಷ್ಟೇ ಮುಖ್ಯವಾಗಿರುತ್ತದೆ. ಹೀಗಾಗಿ ತುರ್ತು ಚಿಕಿತ್ಸೆಯನ್ನು ಯಾವುದೇ ಆಸ್ಪತ್ರೆಯಲ್ಲಿ (ನೋಂದಾಯಿತ ಅಥವಾ ನೋಂದಾಯಿತವಲ್ಲದ)ಪಡೆದರೂ ಹಣ ಪಾವತಿ ಆಗುವಂತೆ ವ್ಯವಸ್ಥೆ ಜಾರಿಗೊಂಡರೆ ಒಳಿತು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.

    ಸರ್ಕಾರವೇ ಹೊಣೆ ಹೊರಲಿ: ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯಡಿ ರೋಗಿಗೆ ಸೂಕ್ತ ಸೇವೆ ದೊರೆಯುವಂತಾಗಲು ಯೋಜನೆಯ ಹೊಣೆಗಾರಿಕೆಯನ್ನು ಸರ್ಕಾರವೇ ಹೊರಬೇಕು ಎಂಬುದು ಖಾಸಗಿ ಆಸ್ಪತ್ರೆಗಳ ಬೇಡಿಕೆಯಾಗಿದೆ. ರೋಗಿಯ ಸ್ಥಿತಿ ಗಂಭೀರವಾಗಿದ್ದಲ್ಲಿ ಸ್ಥಳಾಂತರಕ್ಕೆ ಕುಟುಂಬದವರು ವಿರೋಧ ವ್ಯಕ್ತಪಡಿಸಬಹುದು. ಸ್ಥಳಾಂತರದ ನಿರ್ಧಾರದಿಂದ ರೋಗಿಗೆ ಅಪಾಯವಾದರೆ ಅದಕ್ಕೆ ಆಸ್ಪತ್ರೆಯವರನ್ನು ಹೊಣೆ ಮಾಡಲಾಗುತ್ತದೆ. ಹೀಗಾಗಿ ನೋಂದಣಿ ಅಲ್ಲದ ಆಸ್ಪತ್ರೆಗಳಿಗೆ ತುರ್ತು ಪರಿಸ್ಥಿತಿಯಲ್ಲಿ ರೋಗಿ ಚಿಕಿತ್ಸೆಗೆ ದಾಖಲಾದರೆ ಅವರನ್ನು ನೋಂದಾಯಿತ ಇತರೆ ಆಸ್ಪತ್ರೆಗೆ ಸ್ಥಳಾಂತರಿಸುವ ಹೊಣೆಯನ್ನು ಸರ್ಕಾರವೇ ಹೊರಬೇಕು ಎಂದು ಬೇಡಿಕೆ ಇಡಲಾಗಿದೆ ಎನ್ನುತ್ತಾರೆ ಖಾಸಗಿ ಆಸ್ಪತ್ರೆಗಳ ವೈದ್ಯರು.

    ನೋಂದಾಯಿತ ಆಸ್ಪತ್ರೆ ಗಳಲ್ಲಿ ಮಾತ್ರ ಚಿಕಿತ್ಸೆ: ಹೃದಯಾಘಾತ, ರಸ್ತೆ ಅಪಘಾತ ಸೇರಿ 169 ತುರ್ತು ಚಿಕಿತ್ಸೆಗಳನ್ನು ಗುರುತಿಸಲಾಗಿದ್ದು, ಅಂತಹ ಸಂದರ್ಭಗಳಲ್ಲಿ ನೇರವಾಗಿ ಖಾಸಗಿ ಆಸ್ಪತ್ರೆಗೆ (ಯೋಜನೆಯಡಿ ನೋಂದಣಿ ಯಾದ) ದಾಖಲಾಗಬಹುದು. ಸುಮಾರು 450 ಖಾಸಗಿ ಆಸ್ಪತ್ರೆಗಳು ಹೆಸರು ನೋಂದಾಯಿಸಿದ್ದು, ಅಲ್ಲಿಯೇ ಚಿಕಿತ್ಸೆ ಪಡೆಯಬೇಕು. ಒಂದು ವೇಳೆ ತುರ್ತು ಚಿಕಿತ್ಸೆಗೆ ದಾಖಲಾದ ಆಸ್ಪತ್ರೆ ನೋಂದಣಿ ಆಗದಿದ್ದಲ್ಲಿ, ಪ್ರಾಥಮಿಕ ಹಂತದ ಚಿಕಿತ್ಸೆ ಪಡೆದು ನಂತರ ನೋಂದಾಯಿತ ಆಸ್ಪತ್ರೆಗೆ ಸ್ಥಳಾಂತರಗೊಂಡು ಚಿಕಿತ್ಸೆ ಪಡೆಯಬೇಕು. ಇಲ್ಲವಾದರೆ ರೋಗಿ ಕೈಯಿಂದ ಹಣ ಪಾವತಿಸಬೇಕಾಗುತ್ತದೆ ಎನ್ನುತ್ತಾರೆ ಆರೋಗ್ಯ ಇಲಾಖೆ ಅಧಿಕಾರಿಗಳು.

    ತುರ್ತು ಸಂದರ್ಭದಲ್ಲಿ ಬಡ ರೋಗಿಗಳಿಗೆ ಚಿಕಿತ್ಸೆ ನೀಡುವ ಯಾವುದೇ ಖಾಸಗಿ ಆಸ್ಪತ್ರೆಗೆ ನೋಂದಣಿ ಕಡ್ಡಾಯಗೊಳಿಸದೆ ಸರ್ಕಾರ ನಿಗದಿತ ಶುಲ್ಕ ನೀಡಬೇಕು. ಆಯುಷ್ಮಾನ್ ಯೋಜನೆಯಡಿ ನೋಂದಣಿಯಾಗಿರುವ ಆಸ್ಪತ್ರೆಗಳು ಸಹ ಎಲ್ಲಾ ಆರೋಗ್ಯ ಸಮಸ್ಯೆಗಳಿಗೂ ನೋಂದಣಿ ಆಗಿರುವುದಿಲ್ಲ. ಹಾಗಾಗಿ ಯೋಜನೆಯಡಿ ಯಾವ ಆಸ್ಪತ್ರೆಯಲ್ಲಿ ಯಾವ ಚಿಕಿತ್ಸೆ ದೊರೆಯುತ್ತದೆ ಎಂಬ ಬಗ್ಗೆ 108 ಆಂಬುಲೆನ್ಸ್ ಚಾಲಕರಿಗೆ ಮಾಹಿತಿ ನೀಡಬೇಕು. ಇದರಿಂದ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆಯುವುದು ತಪ್ಪುತ್ತದೆ.

    | ಡಾ. ಆರ್. ರವೀಂದ್ರ ಮಾಜಿ ಅಧ್ಯಕ್ಷ, ಖಾಸಗಿ ಆಸ್ಪತ್ರೆಗಳು ನರ್ಸಿಂಗ್ ಹೋಂಗಳ ಅಸೋಸಿಯೇಷನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts