

ವಾಷಿಂಗ್ಟನ್: ಗಡಿಯಾಚೆಗಿನ ಭಯೋತ್ಪಾದನೆಯನ್ನು ಖಂಡಿಸಿರುವ ಭಾರತ ಮತ್ತು ಅಮೆರಿಕ ಸರ್ಕಾರಗಳು, ಆತಂಕವಾದಿ ದಾಳಿಗಳನ್ನು ನಡೆಸಲು ಅಥವಾ ಯೋಜಿಸಲು ಕಾರಣವಾಗಬಲ್ಲಂಥ ಯಾವುದೇ ಗುಂಪುಗಳಿಗೆ ಆರ್ಥಿಕ ಅಥವಾ ಮಿಲಿಟರಿ ಸಹಾಯವನ್ನು ನಿರಾಕರಿಸುವ ಮಹತ್ವವನ್ನು ಸಾರಿವೆ. ಇದು ಪಾಕಿಸ್ತಾನಕ್ಕೆ ಪರೋಕ್ಷವಾಗಿ ನೀಡುತ್ತಿರುವ ಎಚ್ಚರಿಕೆಯ ಸಂದೇಶವಾಗಿದೆ ಎಂದು ರಾಜತಾಂತ್ರಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇಂದು ಅಮೆರಿಕದ ವಾಷಿಂಗ್ಟನ್ನಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್ರೊಂದಿಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನಡೆಸಿದ ದ್ವಿಪಕ್ಷೀಯ ಮಾತುಕತೆಯ ನಂತರ ಈ ನಿಟ್ಟಿನಲ್ಲಿ ಜಂಟಿ ಹೇಳಿಕೆ ನೀಡಲಾಗಿದೆ. ಜಾಗತಿಕ ಭಯೋತ್ಪಾದನೆಯ ವಿರುದ್ಧದ ಸಂಯುಕ್ತ ಹೋರಾಟದಲ್ಲಿ ಭಾರತ ಮತ್ತು ಅಮೆರಿಕ ಜೊತೆಯಾಗಿ ನಿಲ್ಲುತ್ತವೆ ಎಂದು ಹೇಳಿಕೆ ತಿಳಿಸಿದೆ.
ಈರ್ವರೂ ನಾಯಕರು ಭಯೋತ್ಪಾದಕ ಪ್ರಾಕ್ಸಿಗಳ ಬಳಕೆಯನ್ನು ಖಂಡಿಸಿದ್ದಾರಲ್ಲದೆ, ಆತಂಕವಾದಿ ಗುಂಪುಗಳಿಗೆ ಯಾವುದೇ ರೀತಿಯ ಲಾಜಿಸ್ಟಿಕ್, ಮಿಲಿಟರಿ ಅಥವಾ ಆರ್ಥಿಕ ಬೆಂಬಲವನ್ನು ನಿರಾಕರಿಸುವ ಮಹತ್ವವನ್ನು ಒತ್ತಿಹೇಳಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದೇ ಸಂದರ್ಭದಲ್ಲಿ 2008ರ 26/11 ರ ಮುಂಬೈ ದಾಳಿಗೆ ಕಾರಣರಾದವರನ್ನು ಶೀಘ್ರವೇ ಶಿಕ್ಷೆಗೆ ಗುರಿಪಡಿಸಬೇಕು ಎಂದು ಉಭಯ ನಾಯಕರು ಅಭಿಪ್ರಾಯಪಟ್ಟಿದ್ದಾರೆ. ಈ ಭಯೋತ್ಪಾದಕ ದಾಳಿಯಲ್ಲಿ 6 ಅಮೇರಿಕನ್ನರು ಸೇರಿದಂತೆ 166 ಜನರು ಮೃತಪಟ್ಟಿದ್ದರು. ಪಾಕಿಸ್ತಾನ ಮೂಲದ ಹಫೀಜ್ ಸಯೀದ್ನ ಜಮಾತ್-ಉದ್-ದವ ನೇತೃತ್ವದಲ್ಲಿ ಲಷ್ಕರ್ ಏ ತೈಬಾ ಈ ದಾಳಿಯನ್ನು ನಡೆಸಿತ್ತು ಎನ್ನಲಾಗಿದೆ. (ಏಜೆನ್ಸೀಸ್)