

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್ ಹಾಗೂ ಸಹಚರರು ಪರಪ್ಪನ ಅಗ್ರಹಾರ ಸೇರಿದ್ದು, ಪೊಲೀಸರು ಪ್ರಕರಣದ ತನಿಖೆಯನ್ನು ಮುಂದುವರೆಸಿದ್ದಾರೆ. ನಿಜಜೀವನದಲ್ಲಿ ಮಾದರಿಯಾಗಬೇಕಿದ್ದ ಸ್ಟಾರ್ನಟನೊಬ್ಬನ ಈ ಕೃತ್ಯ ಪರ-ವಿರೋಧದ ಚರ್ಚೆಗೆ ಎಡೆ ಮಾಡಿಕೊಟ್ಟಿದ್ದು, ಈ ಬಗ್ಗೆ ನಟಿ, ರಾಜಕಾರಣಿ ಭಾವನಾ ರಾಮಣ್ಣ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಮಾತನಾಡಿದ ನಟಿ ಭಾವನಾ, ದರ್ಶನ್ ಮತ್ತು ನಾನು ಎಲ್ಲರ ಮನೆ ದೋಸೆನೂ ತೂತು, ಭಗವಾನ್ ಹಾಗೂ ಚಿಂಗಾರಿ ಸಿನಿಮದಲ್ಲಿ ಜೊತೆಯಾಗಿ ನಟಿಸಿದ್ದೇವೆ. ನಾನು ದರ್ಶನ್ ಪರವಾಗಿ ನಿಂತಿದ್ದೇನೆ. ಇದನ್ನ ಹೇಳೋಕೆ ನನಗೆ ಯಾವುದೇ ಹಿಂಜರಿಕೆ ಇಲ್ಲ. ಅವರು ಹೀರೋ ಆಗೋಕ್ಕಿಂತ ಮುಂಚೆನೆ ನನಗೆ ಗೊತ್ತು. ಅವರು ನನಗೆ ಗೊತ್ತಿರುವವರು ಸಾಕಷ್ಟು ವರ್ಷದಿಂದ ಜೊತೆಯಲಿ ಇರೋರು ನಾವು ಎಂದು ಹೇಳಿದ್ದಾರೆ.
ದರ್ಶನ್ ಜೈಲುಪಾಲಾಗಿದ್ದಾರೆ ಎಂದು ಹೇಳಲು ಬೇಜಾರ್ ಆಗುತ್ತದೆ. ಇದೆಂಥಾ ಸ್ಥಿತಿಯಲ್ಲಿದ್ದಾರೆ. ಈ ಸತ್ಯ ಅರಗಿಸಿಕೊಳ್ಳೋದ್ದಕ್ಕೆ ನಮಗೆ ಸಮಯಬೇಕಾಗಿದೆ. ಈ ರೀತಿ ನಡೆಯಬಾರದಿತ್ತು. ನಮ್ಮ ಕುಟುಂಬದವರನ್ನು ಬಿಟ್ಟು ಕೊಡಲು ಆಗಲ್ಲ. ಸಿಹಿ ಅಥವಾ ಕಹಿ ಏನೇ ಬರಲಿ ಜೊತೆಯಾಗಿ ಇರಬೇಕು. ಕೆಟ್ಟವರಾ, ಒಳ್ಳೆವರಾ ಎಂದು ನಾನು ಯಾವುದನ್ನು ನಿರ್ಣಾಯ ಮಾಡುತ್ತಿಲ್ಲ. ನನ್ನ ಜೊತೆಯಲ್ಲಿರುವವರ ಪರ ನಾನು ನಿಲ್ಲುತ್ತೇನೆ. ನನಗೆ ಮನುಷ್ಯತ್ವ ಇಲ್ಲ ಅಂತ ಅಲ್ಲ, ನಾನು ರೇಣುಕಾಸ್ವಾಮಿ ಕುಟುಂಬದವರನ್ನು ಭೇಟಿ ಮಾಡಿ ಸಾಂತ್ವಾನ ಹೇಳುತ್ತೇನೆ.
ಯಾರದೋ ಮನೆ ಹೆಣ್ಣು ಮಕ್ಕಳಿಗೆ ನೀವು ಯಾಕೆ ಮೆಸೇಜ್ ಮಾಡ್ತೀರಾ? ಏನ್ ಮೆಸೇಜ್ ಬಂದಿದೆ ಅಂತ ಹೇಳ್ಬೇಕು? ಯಾವುದು ಸರಿ-ತಪ್ಪು ಅನ್ನೋದನ್ನು ನಾನು ಇಲ್ಲಿ ಹೇಳೋದಿಲ್ಲ. ಆದ್ರೆ ನಾನು ನನ್ನ ಕಲಾವಿದರ ಜೊತೆ ನಿಲ್ಲುತ್ತಿದ್ದೇನೆ ಅಷ್ಟೇ, ಕಾನೂನು ಇದನ್ನೆಲ್ಲಾ ನೋಡಿಕೊಳ್ಳುತ್ತದೆ. ನಾನು ದರ್ಶನ್ ಪರ ನಿಲ್ಲುತ್ತೇನೆ. ಸಂತೋಷದಲ್ಲಿ ಜೊತೆಗಿದ್ದು ದುಖದಲ್ಲಿ ಇಲ್ಲ ಅನ್ನೋ ರೀತಿ ಅಲ್ಲ. ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿರುವ ಸುದ್ದಿ ಬಗ್ಗೆ ನನಗೂ ಬೇಸರ ಇದೆ.
ನೀವೇ ತಪ್ಪು-ಸರಿ ನಿರ್ಧಾರ ಮಾಡ್ಬೇಡಿ. ಕಾನೂನು ನೋಡಿಕೊಳ್ಳುತ್ತದೆ. ಆದ್ರೆ ವೈಯಕ್ತಿವಾಗಿ ಹೇಳುವುದಾದ್ರೆ ನಾನು ದರ್ಶನ್ ಪರ ನಿಲ್ಲುತ್ತೇನೆ. ಕೊಲೆ ಹೇಗೆ ಮಾಡಿದ್ದಾರೆ ಅನ್ನೋದು ನನಗೆ ಗೊತ್ತಿಲ್ಲ. ಯಾರು ಅದನ್ನು ನೋಡಿಲ್ಲ. ದರ್ಶನ್ ಅಪರಾಧಿ ಸ್ಥಾನದಲ್ಲಿದ್ದಾರೆ ಎಂದು ದೂರ ಹೋguವುದಿಲ್ಲ. ಹೇಡಿತನದಿಂದ ಹಿಂದೆ ಸರಿಯಲ್ಲ, ಐ ಸ್ಟ್ಯಾಂಡ್ ವಿತ್ ದರ್ಶನ್ ಎಂದು ನಟಿ, ರಾಜಕಾರಣಿ ಭಾವನಾ ರಾಮಣ್ಣ ಹೇಳಿದ್ದಾರೆ.