ಹಣೆ ಮೇಲೆ ಒಂದೇ ಕಣ್ಣು ಎರಡು ಕಣ್ಣಿನ ಪಾಪೆ: ವಿಚಿತ್ರ ಮೇಕೆ ಮರಿ ದೇವರ ಅವತಾರವಂತೆ!

Eye
Published on

ಲಖನೌ: ನವಜಾತ ಮೇಕೆ ಮರಿಯು ತನ್ನ ವಿಚಿತ್ರ ಹುಟ್ಟಿನಿಂದಾಗಿ ಉತ್ತರ ಪ್ರದೇಶದ ಬಿಜ್ನೋರ್​ ಜಿಲ್ಲೆಯ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದು, ಸುತ್ತಮುತ್ತಲ ಹಳ್ಳಿಗರು ಮೇಕೆ ಮರಿಯನ್ನು ಕಣ್ತುಂಬಿಕೊಳ್ಳಲು ಗುಂಪು ಗುಂಪಾಗಿ ಧಾವಿಸುತ್ತಿದ್ದಾರೆ.

ನವಜಾತ ಮೇಕೆ ಮರಿಯ ಹಣೆಯ ಮೇಲೆ ಒಂದೇ ಒಂದು ದೊಡ್ಡ ಕಣ್ಣಿದ್ದು, ಅದರಲ್ಲಿ ಎರಡು ಕಣ್ಣಿನ ಪಾಪೆಗಳಿವೆ. ಸಾಮಾನ್ಯ ಮುಖದ ರಚನೆಗಿಂತ ಮೇಕೆ ಮರಿಯ ಮುಖ ಸಂಪೂರ್ಣ ವಿಚಿತ್ರವಾಗಿದ್ದು, ನಾಲಿಗೆಯು ಸಹ ತಿರುಚಿಕೊಂಡಂತಿದೆ.

ಬಿಜ್ನೋರ್​ನ ನೂರ್​ಪುರ್​ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಬರುವ ಮೊರಾಹತ್​ ಗ್ರಾಮದ ನಿವಾಸಿ ಮಸಿಯಾ ಮನೆಯಲ್ಲಿ ವಿಚಿತ್ರ ಮೇಕೆ ಹುಟ್ಟಿದೆ. ಮೇಕೆಯು ಎರಡು ದಿನಗಳ ಹಿಂದೆ ಜನ್ಮ ನೀಡಿದ ಎರಡು ಮರಿಗಳಲ್ಲಿ ಒಂದು ಮರಿ ವಿಚಿತ್ರವಾಗಿ ಜನಿಸಿದ್ದು, ಇನ್ನೊಂದು ಮರಿ ಸಾಮಾನ್ಯ ಮರಿಗಳಂತೆ ಜನಿಸಿದೆ.

ವಿಚಿತ್ರ ಮರಿಯ ಬಗ್ಗೆ ಮಾಹಿತಿ ಎಲ್ಲೆಡೆ ಹರಡುತ್ತಿದ್ದಂತೆ ಅದನ್ನು ನೋಡಲು ಭಾರಿ ಜನಸಂಖ್ಯೆ ಮಸಿಯಾ ಮನೆಯತ್ತ ಬರುತ್ತಿದ್ದಾರೆ. ಹಣೆಯಲ್ಲಿ ಮೂರನೇ ಕಣ್ಣು ಇರುವುದರಿಂದ ಶಿವನ ಪ್ರತಿರೂಪ ಎನ್ನುತ್ತಿದ್ದಾರೆ. ಅಲ್ಲದೆ, ಕೆಲವು ಮಂದಿ ಮೇಕೆ ಮರಿಗೆ ಪೂಜೆಯನ್ನು ಸಲ್ಲಿಸಿದ್ದಾರೆ. ಇದು ದೇವರ ಆಶೀರ್ವಾದ ಎಂತಲೂ ಮಾಲೀಕ ಮಸಿಯಾ ನಂಬಿದ್ದಾರೆ.

ಸ್ಥಳೀಯ ಪಶುವೈದ್ಯಾಧಿಕಾರಿ ಪುಷ್ಕರ್​ ರಥಿ ಮಾತನಾಡಿ, ಮೇಕೆ ಮರಿಯ ಜನ್ಮ ಅಸಮಾನ್ಯವಾಗಿದ್ದು, ಇಂತಹ ಮರಿಗಳು ಹೆಚ್ಚು ದಿನ ಬದುಕುವುದಿಲ್ಲ. ಇದೊಂದು ವಿಚಿತ್ರವಷ್ಟೇ, ದೇವರ ಆಶೀರ್ವಾದ ಎಂದು ಭಾವಿಸಬೇಡಿ ಎಂದು ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net