

ಮುಂಬೈ: ಬಾಲಿವುಡ್ ನಟಿ ಕುಬ್ರಾ ಸೇಠ್ 17ನೇ ವಯಸ್ಸಿನಲ್ಲೇ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರಂತೆ. ಅದೂ ಬೆಂಗಳೂರಲ್ಲಿ ಎಂಬ ಆಘಾತಕಾರಿ ಸಂಗತಿ ಇದೀಗ ಬಯಲಾಗಿದೆ. ಆ ವಯಸ್ಸಲ್ಲಿ ಅನುಭವಿಸಿದ ನರಕಯಾತನೆಯನ್ನ ಇದೀಗ ಅವರೇ ಬಹಿರಂಗಪಡಿಸಿದ್ದಾರೆ. 'ಕಾರಿನಲ್ಲಿ ಹೋಗುವಾಗ ಬಟ್ಟೆಯನ್ನು ಸರಿಸಿ ನನ್ನ ತೊಡೆಯನ್ನು ಸವರುತ್ತಿದ್ದ... ನಮ್ಮ ಮನೆಗೆ ಬಂದು ನನ್ನ ಕೆನ್ನೆಗೆ ಮುತ್ತಿಟ್ಟು ನೀನಂದ್ರೆ ನನಗಿಷ್ಟ ಎನ್ನುತ್ತಿದ್ದ... ಹೋಟೆಲ್ನಲ್ಲಿ ತುಟಿಗೆ ಚುಂಬಿಸಿ ಪ್ಯಾಂಟ್ ಬಿಚ್ಚಿದ್ದ... ನಾನಾಗ ಅಸಹಾಯಕಳಾಗಿದ್ದೆ...' ಎಂದು ಬರೆದುಕೊಂಡಿದ್ದಾರೆ.
ಕುಬ್ರಾ ಸೇಠ್ ನಟಿ ಮಾತ್ರವಲ್ಲ, ಉತ್ತಮ ಬರಹಗಾರ್ತಿಯೂ ಹೌದು. ಇವರು ಬರೆದ 'ಓಪನ್ ಬುಕ್'(Open Book: Not quite a Memoir) ಇತ್ತೀಚಿಗೆ ಬಿಡುಗಡೆಯಾಗಿದೆ. ಈ ಪುಸ್ತಕಲ್ಲಿ ತಾನು ಬಾಲ್ಯದಲ್ಲಿ ಅನುಭವಿಸಿದ ಲೈಂಗಿಕ ಕಿರುಕುಳದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
'ನನಗೆ ಆಗ 17 ವರ್ಷ ವಯಸ್ಸು. ನಮ್ಮ ಕುಟುಂಬ ಆರ್ಥಿಕವಾಗಿ ತುಂಬಾ ಸಮಸ್ಯೆ ಎದುರಿಸುತ್ತಿತ್ತು. ನಮ್ಮ ಅಮ್ಮನಿಗೆ ಬೆಂಗಳೂರಿನ ರೆಸ್ಟೋರೆಂಟ್ ಮಾಲೀಕನೊಬ್ಬ (X ಅಂಕಲ್) ಸಹಾಯ ಮಾಡುತ್ತಿದ್ದ. ನಮ್ಮ ಮನೆಯಲ್ಲಿ ಈತನನ್ನು ದೇವರು ಎಂದೇ ಭಾವಿಸಿದ್ದರು. ನಾನು ಮತ್ತು ನನ್ನ ಅಣ್ಣ ಈತನನ್ನು ಅಂಕಲ್ ಎಂದೇ ಕರೆಯುತ್ತಿದ್ದೆವು. ನಾನು ಮತ್ತು ನನ್ನ ಅಣ್ಣ ಡ್ಯಾನಿಷ್ ಇಬ್ಬರೂ ಈ ರೆಸ್ಟೋರೆಂಟ್ಗೆ ಆಗಾಗ್ಗೆ ಹೋಗುತ್ತಿದ್ದವು. ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು. ದಿನಕಳೆದಂತೆ X ಅಂಕಲ್ ತನ್ನ ವರಸೆ ಬದಲಿಸಿದ. 'ನನ್ನನ್ನು ಅಂಕಲ್ ಎನ್ನಬೇಡ' ಎನ್ನುತ್ತಿದ್ದ. ಒಮ್ಮೆ ಕಾರಿನಲ್ಲಿ ಹೋಗುವಾಗ ಆತ ನನ್ನ ಬಟ್ಟೆ ಸರಿಸಿ ತೊಡೆಯನ್ನು ಕೈಯಿಂದ ಉಜ್ಜುತ್ತಾ ನಗುತ್ತಿದ್ದ... ಆ ಕ್ಷಣ ನಾನ್ ಶಾಕ್ ಆದೆ. ನಮ್ಮ ಮನೆಗೆ ಪದೇಪದೆ ಬರುತ್ತಿದ್ದ. ಆಗ ನನ್ನಮ್ಮ ಆತನಿಗೆ ಅಡುಗೆ ಮಾಡಿ ಬಡಿಸುತ್ತಿದ್ದಳು. ಅಮ್ಮನ ಮುಂದೆಯೇ ಆತ ನನ್ನ ಕೆನ್ನೆಗೆ ಮುತ್ತಿಡುತ್ತಿದ್ದ...'
ಒಮ್ಮೆ ಆತ ನನ್ನನ್ನು ಹೋಟೆಲ್ಗೆ ಕರೆದೊಯ್ದು ನನ್ನ ತಲೆ ಹಿಡಿದು ತುಟಿಗೆ ಚುಂಬಿಸಿದ. ಆಗ ನಾನು ಗೊಂದಲಕ್ಕೆ ಒಳಗಾದೆ. ಒಂದು ಮಾತನ್ನೂ ಆಡಲಿಲ್ಲ, ನಾನು ಕೂಗಬೇಕಿತ್ತು ಕೂಗಲಿಲ್ಲ. ಅಲ್ಲಿಂದ ಓಡಬೇಕಿತ್ತು.. ಓಡಲಿಲ್ಲ. ಶಾಕ್ನಲ್ಲಿದ್ದೆ. ಅವನು ತನ್ನ ಪ್ಯಾಂಟ್ ಬಿಚ್ಚಿದ... ನನ್ನ ಕನ್ಯತ್ವ ಕಳೆದುಹೋಗುತ್ತಿದೆ... ಎಂದು ಅನ್ನಿಸುತ್ತಿತ್ತು' ಎಂದು ತಾನು ಅನುಭಸಿದ ಕಿರುಕುಳದ ಬಗ್ಗೆ ನಟಿ ಕುಬ್ರಾಸೇಠ್ ಪುಸ್ತಕದಲ್ಲಿ ವಿವರಿಸಿದ್ದಾರೆ.
'ಈ ಘಟನೆಯ ನಂತರ X ಅಂಕಲ್ ಬೇರೊಬ್ಬಳ ಜೊತೆ ಮದುವೆಯಾದ. ಎರಡು ಮಕ್ಕಳ ತಂದೆಯೂ ಆದ. ನನ್ನ ಮೇಲೆ ಆತ ಎಸಗಿದ ಕೃತ್ಯವನ್ನು ಹೊರಗಡೆ ಬಾಯಿಬಿಟ್ಟರೆ ಎಂಬ ಭಯವೂ ಆತನಿಗೆ ಇತ್ತು. ನನಗೆ ಜೀವ ಬೆದರಿಕೆಯನ್ನೂ ಹಾಕಿದ್ದ. ನಾನು ಆಗ ಈ ಬಗ್ಗೆ ಯಾರ ಬಳಿಯೂ ಹೇಳಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ' ಎಂದು ಕುಬ್ರಾ ಸೇಠ್ ತನ್ನ ಬಾಲ್ಯದಲ್ಲಿ ಹಾಗೂ ಯೌವ್ವನದಲ್ಲಿ ಅನುಭವಿಸಿದ ನೋವುಗಳು ಆತ್ಮಚರಿತ್ರೆ 'ಓಪನ್ ಬುಕ್' ಬಹಿರಂಗ ಮಾಡಿದ್ದಾರೆ.