PSI ಜತೆ ಅನುಚಿತ ವರ್ತನೆ: 6 ಪೇದೆಗಳ ಸಸ್ಪೆಂಡ್​​

PSi
Published on

ಕೊಟ್ಟೂರು (ವಿಜಯನಗರ): ಇತ್ತೀಚೆಗೆ ಸ್ಥಳೀಯ ಠಾಣೆ ಪಿಎಸ್​ಐ ವಿಜಯಕೃಷ್ಣ ಜತೆ ಪೇದೆಯೊಬ್ಬರು ಅನುಚಿತವಾಗಿ ವರ್ತಿಸಿ ಅಮಾನತುಗೊಂಡ ಪ್ರಕರಣಕ್ಕೆ ಸಂಬಂಧಿಸಿ ಮತ್ತೆ ಐವರು ಪೇದೆಗಳ ತಲೆ ದಂಡವಾಗಿದೆ.

ಮೇ 14ರಂದು ಠಾಣೆಯಲ್ಲಿ ಠಾಣಾಧಿಕಾರಿ ಬ್ರೀಫಿಂಗ್​ ಸಭೆ ನಡೆಸಿದ ಬಳಿಕ ಸಿಬ್ಬಂದಿಗೆ ಬೀಟ್​ ಹಂಚಿಕೆ ಮಾಡಿದ್ದರು. ಇದನ್ನು ಆಕ್ಷೇಪಿಸಿದ್ದ ಪೇದೆ ಕೊಟ್ರಗೌಡ ಪಿಎಸ್​ಐ ಜತೆ ಏರು ಧ್ವನಿಯಲ್ಲಿ ವಾಗ್ವಾದ ನಡೆಸಿದ್ದಲ್ಲದೆ ಬೆದರಿಕೆ ಹಾಕಿದ್ದರು. ಹಾಗಾಗಿ ಕೊಟ್ರಗೌಡರನ್ನು ಕೆಲಸದಿಂದ ಅಮಾನತು ಮಾಡಲಾಗಿತ್ತು. ಇದೀಗ ಇದೇ ಪ್ರಕರಣ ಸಂಬಂಧ ಕೊಟ್ಟೂರು ಪೊಲೀಸ್​ ಠಾಣೆ ಪೇದೆಗಳಾದ ಕುಮಾರ ಪತ್ರಿ, ಬಸವರಾಜು, ಕವಿತಾಬಾಯಿ, ತಿಪ್ಪಣ್ಣ ಹಾಗೂ ಹ್ಯಾಟಿ ಬಸವರಾಜ ಅವರನ್ನೂ ಅಮಾನತು ಮಾಡಲಾಗಿದೆ.

ಪಿಎಸ್​ಐ ಜತೆ ಕೊಟ್ರಗೌಡ ಏರು ಧ್ವನಿಯಲ್ಲಿ ವಾಗ್ವಾದ ನಡೆಸಿದ್ದ ಪ್ರಕರಣ ಸಂಬಂಧ ನಡೆದ ಇಲಾಖಾ ವಿಚಾರಣೆಯಲ್ಲಿ ಘಟನೆ ವೇಳೆ ಹಾಜರಿದ್ದ ಪೇದೆಗಳು ಇಲಾಖೆಗೆ ತಪ್ಪು ಮಾಹಿತಿ ನೀಡಿದ್ದರು ಎಂಬುದು ಠಾಣೆಯ ಸಿಸಿಟಿವಿ ದೃಶ್ಯಾವಳಿಯಿಂದ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಇಲಾಖೆ ವಿಚಾರಣೆಯಲ್ಲಿ ಸುಳ್ಳು ಸಾಕ್ಷಿ ನುಡಿದು, ಅಶಿಸ್ತು ತೋರಿದ್ದಾರೆ ಎಂದು ಪರಿಗಣಿಸಿ ಐವರನ್ನು ಅಮಾನತುಗೊಳಿಸಿ ಎಸ್ಪಿ ಡಾ.ಅರುಣ್​ ಕೆ. ಆದೇಶ ಹೊರಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net