ಪ್ರವಾದಿ ಮುಹಮ್ಮದ್ ಬಗ್ಗೆ ವಿವಾದಾತ್ಮಕ ಹೇಳಿಕೆ; ವಕ್ತಾರರಿಬ್ಬರನ್ನು ಅಮಾನತುಗೊಳಿಸಿದ ಬಿಜೆಪಿ...

BJP
Published on

ನವದೆಹಲಿ: ಪ್ರವಾದಿ ಮುಹಮ್ಮದ್ ವಿರುದ್ಧ ವಿವಾದಿತ ಹೇಳಿಕೆ ನೀಡಿದ ಇಬ್ಬರು ವಕ್ತಾರರನ್ನು ಬಿಜೆಪಿ ಅಮಾನತುಗೊಳಿಸಿದೆ. ಪಕ್ಷದ ವಕ್ತಾರರಾದ ನೂಪುರ ಶರ್ಮಾ ಮತ್ತು ನವೀನ್​ ಜಿಂದಾಲ್ ಅವರ ಪ್ರಾಥಮಿಕ ಸದಸ್ಯತ್ವವನ್ನು ಅಮಾನತಿನಲ್ಲಿ ಇರಿಸಿದೆ.

ಪಕ್ಷದ ಸ್ಥಾನಕ್ಕೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಅವರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ಪಕ್ಷದ ಕೇಂದ್ರೀಯ ಶಿಸ್ತು ಸಮಿತಿ ತಿಳಿಸಿದೆ.

ಬಿಜೆಪಿ ಎಲ್ಲ ಧರ್ಮಗಳನ್ನು ಗೌರವಿಸುತ್ತಿದ್ದು, ಯಾವುದೇ ಧರ್ಮದ ಅವಹೇಳನವನ್ನು ಖಂಡಿಸುತ್ತದೆ ಎಂದು ಪಕ್ಷವು ಪ್ರಕಟಣೆ ಹೊರಡಿಸಿದ ಬೆನ್ನಿಗೆ ಈ ಕ್ರಮವನ್ನು ಕೈಗೊಂಡಿದೆ. ಯಾವುದೇ ಧರ್ಮವನ್ನು ಅವಹೇಳನ ಮಾಡುವಂತಹ ಹೇಳಿಕೆಯನ್ನು ಪಕ್ಷವು ವಿರೋಧಿಸುತ್ತದೆ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ತಿಳಿಸಿದ್ದಾರೆ. ಅದಾಗ್ಯೂ ಪಕ್ಷವು ಯಾವ ಕಾರಣಕ್ಕೆ ಈ ನಿರ್ಧಾರವನ್ನು ಕೈಗೊಂಡಿದೆ ಎಂಬುದವನ್ನು ಸ್ಪಷ್ಟವಾಗಿ ಉಲ್ಲೇಖಿಸಿಲ್ಲ.

ನೂಪುರ ಶರ್ಮಾ ಅವರು ಟಿವಿ ಕಾರ್ಯಕ್ರಮದಲ್ಲಿ ಪ್ರವಾದಿ ಮುಹಮದ್ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದು, ಭಾರಿ ಆಕ್ಷೇಪಕ್ಕೆ ಗುರಿಯಾಗಿತ್ತು. ಹಾಗೆಯೇ ನವೀನ್ ಜಿಂದಾಲ್ ಟ್ವಿಟರ್​ನಲ್ಲಿ ಇಸ್ಲಾಂ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ ಹಾಕಿದ್ದರು. ನೂಪುರ ಶರ್ಮಾ ಹೇಳಿಕೆ ಹಿನ್ನೆಲೆಯಲ್ಲಿ ಈ ವಾರ ಕಾನ್ಪುರದಲ್ಲಿ ಗಲಭೆ ಉಂಟಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net