

ಸಕಲೇಶಪುರ: ತಾಲೂಕಿನ ಹುರುಡಿ ಗ್ರಾಮ ಹೊರವಲಯದಲ್ಲಿ ಪೈಪ್ಲೈನ್ಗೆ ಕನ್ನ ಹಾಕಿ ಪೆಟ್ರೋಲ್ ಕದಿಯಲು ಯತ್ನಿಸಿದ ಘಟನೆ ಸಂಭವಿಸಿದೆ. ಪೊಲೀಸರೊಂದಿಗೆ ಎಂಎಚ್ಬಿ ಕಂಪನಿ ಅಧಿಕಾರಿಗಳು ಚುರುಕಿನ ಕಾರ್ಯಾಚರಣೆ ನಡೆಸಿದ್ದರಿಂದ ಖದೀಮರ ಸಂಚು ವಿಫಲವಾಗಿದೆ.
ಎಂಎಚ್ಬಿ ಕಂಪನಿ ಮಂಗಳೂರಿನಿಂದ ಬೆಂಗಳೂರಿಗೆ ಪೈಪ್ಲೈನ್ ಮೂಲಕ ಪೆಟ್ರೋಲ್ ಸಾಗಿಸುತ್ತಿದೆ. ಎರಡು ದಿನಗಳ ಹಿಂದೆ ಕಳ್ಳರು ಗ್ರಾಮ ಹೊರವಲಯದಲ್ಲಿ ಜೆಸಿಬಿ ಮೂಲಕ ಪೈಪ್ಲೈನ್ ಮೇಲಿನ ಮಣ್ಣನ್ನು ತೆರವುಗೊಳಿಸಿ, ಪೈಪ್ಗೆ ವಾಲ್ವ್ ಫಿಟ್ ಮಾಡಿ, ಪೈಪ್ ಅಳವಡಿಸಿ ಅದಕ್ಕೆ ರಂದ್ರ ಕೊರೆಯುತ್ತಿದ್ದರು. ಈ ವೇಳೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಸಮೀಪದ ನೆರಿಯ ಎಂಬ ಪ್ರದೇಶದ ಸ್ಟೇಷನ್ ಸಿಗ್ನಲ್ನಲ್ಲಿ ಸೆನ್ಸಾರ್ ಮೂಲಕ ರಂದ್ರ ಕೊರೆಯುತ್ತಿರುವುದು ಪತ್ತೆಯಾಯಿತು. ಎಚ್ಚೆತ್ತ ಅಧಿಕಾರಿಗಳು ರಾತ್ರೋರಾತ್ರಿ ಪೊಲೀಸರೊಂದಿಗೆ ಸ್ಥಳಕ್ಕೆ ದೌಡಾಯಿಸಿದ್ದರಿಂದ ಕಳ್ಳರು ಪರಾರಿಯಾಗಿದ್ದಾರೆ. ಸ್ಥಳದಲ್ಲಿದ್ದ ಜೆಸಿಬಿ ಯಂತ್ರವನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳ ಪತ್ತೆಗೆ ಗ್ರಾಮಾಂತರ ಠಾಣೆ ಪೊಲೀಸರು ಬಲೆ ಬೀಸಿದ್ದಾರೆ.