

ಮಂಗಳೂರು: ರಾಜ್ಯದ ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಸ್ಯಾಟಲೈಟ್ ಫೋನ್ ಮತ್ತೊಮ್ಮೆ ರಿಂಗಣಿಸಿದ್ದು, ರಾಜ್ಯ ಆಂತರಿಕ ಭದ್ರತಾ ವಿಭಾಗ(ಐಎಸ್ಡಿ) ಸ್ಥಳಕ್ಕೆ ತೆರಳಿ ತನಿಖೆ ಕೈಗೆತ್ತಿಕೊಂಡಿದೆ.
ಚಿಕ್ಕಮಗಳೂರಿನ ದಟ್ಟಾರಣ್ಯ, ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ-ಶಿರಸಿ ನಡುವಿನ ದಟ್ಟಾರಣ್ಯ, ಮಂಗಳೂರು ನಗರದ ಹೊರ ವಲಯದ ನಾಟೆಕಲ್ ಮತ್ತು ಕುಳಾಯಿ ಬಳಿ ಮೇ 23ರಿಂದ 29ರ ನಡುವೆ ಸ್ಯಾಟಲೈಟ್ ಫೋನ್ ಸಿಗ್ನಲ್ ಸಿಗ್ನಲ್ ಪತ್ತೆ ಆಗಿರುವುದನ್ನು ಕೇಂದ್ರ ಗುಪ್ತಚರ ಇಲಾಖೆ ಪತ್ತೆ ಮಾಡಿದೆ.
ಕರಾವಳಿ ಹಾಗೂ ಮಲೆನಾಡಿನಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ ಮೂರು ಬಾರಿ ಸ್ಯಾಟಲೈಟ್ ಫೋನ್ ಸಿಗ್ನಲ್ ಪತ್ತೆಯಾಗಿ ಆತಂಕ ಮೂಡಿಸಿದೆ. ಈ ಹಿಂದೆ ಸಿಗ್ನಲ್ ಪತ್ತೆಯಾದ ಸಂದರ್ಭ ಗುಪ್ತಚರ ಇಲಾಖೆ ತನಿಖೆ ನಡೆಸಿತ್ತು. ನಿಷೇಧಿತ ಸ್ಯಾಟಲೈಟ್ ಫೋನ್ ಬಳಕೆ ಮಾಡಿರುವವರು ಯಾರು? ಎಂಬುದು ನಿಗೂಢವಾಗಿದೆ. ಈ ಕರೆಯ ಮೂಲ? ಯಾಕಾಗಿ ಕರೆ ಮಾಡುತ್ತಾರೆ? ಯಾರು ಕರೆ ಮಾಡುತ್ತಾರೆ? ಎಂಬುದು ಇದುವರೆಗೆ ಪತ್ತೆಯಾಗಿಲ್ಲ. ಭಾರತದಲ್ಲಿ ತುರಾಯ ಸ್ಯಾಟಲೈಟ್ ಫೋನ್ ನಿಷೇಧವಿದೆ.
2021ರ ಅಕ್ಟೋಬರನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2 ಕಡೆ, ಚಿಕ್ಕಮಗಳೂರು ಜಿಲ್ಲೆಯಲ್ಲಿ 2 ಹಾಗೂ ಉತ್ತರ ಕನ್ನಡ ಜಿಲ್ಲೆಯ ದಟ್ಟ ಅರಣ್ಯ ಪ್ರದೇಶದ ಒಂದು ಕಡೆ ಸ್ಯಾಟಲೈಟ್ ಫೋನ್ ಆ್ಯಕ್ಟಿವ್ ಆಗಿತ್ತು. ರಾಜ್ಯದ ಕರಾವಳಿಯಲ್ಲಿ ಕೇಂದ್ರ ಗುಪ್ತಚರ ಸಂಸ್ಥೆಯ ಹೈ ಅಲರ್ಟ್ ಸೂಚನೆ ನಡುವೆಯೂ ಸ್ಯಾಟಲೈಟ್ ಫೋನ್ ಆ್ಯಕ್ಟಿವ್ ಆಗಿತ್ತು. ಇದೀಗ ಮತ್ತೆ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ನಾಲ್ಕು ಕಡೆಗಳಲ್ಲಿ ಸ್ಯಾಟಲೈಟ್ ಫೋನ್ ಸಿಗ್ನಲ್ಗಳು ಪತ್ತೆಯಾಗಿವೆ.