

ವಿಜಯಪುರ: ಭೀಮಾತೀರದ ಜನಮೆಚ್ಚಿದ ನಾಯಕ, ಮಾಜಿ ಶಾಸಕ, ಬೆಳ್ಳಿ ಪಂಪ್ಸೆಟ್ ಖ್ಯಾತಿಯ ಆರ್.ಆರ್. ಕಲ್ಲೂರ(81) ಅವರು ವಯೋಸಹಜ ಕಾಯಿಲೆಯಿಂದ ಗುರುವಾರ ನಿಧನರಾದರು.
ಮೂಲತಃ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದ ಕ್ಲಲೂರ ಅವರು 1930ರ ಮಾ.18 ರಂದು ರಾಮಗೊಂಡಪ್ಪ ಭೀಮವ್ವ ದಂಪತಿ ಪುತ್ರನಾಗಿ ಜನರಿಸಿದರು. 1978ರಲ್ಲಿ ಪ್ರಥಮ ಬಾರಿಗೆ ಇಂಡಿ ವಿಧಾನಸಭೆ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾದರು. 1981 ಹಾಗೂ 1989ರ ವಿಧಾನಸಭೆ ಚುನಾವಣೆಯಲ್ಲೂ ಗೆದ್ದಿದ್ದರು.
ಗುಂಡುರಾವ್ ಸಿಎಂ ಆಗಿದ್ದ ವೇಳೆ ನೀರಾವರಿ ಇಲಾಖೆಯಲ್ಲಿ ಕಲ್ಲೂರ ಅವರ ಸಾಧನೆ ಮೆಚ್ಚಿ 'ಬೆಳ್ಳಿ ಪಂಪ್ಸೆಟ್' ಅನ್ನು ಉಡುಗೊರೆ ನೀಡಲಾಗಿತ್ತು. ಅಂದಿನಿಂದ ಕಲ್ಲೂರ ಅವರು 'ಬೆಳ್ಳಿ ಪಂಪ್ಸೆಟ್ ಕಲ್ಲೂರ' ಎಂದೇ ರಾಜ್ಯಾದ್ಯಂತ ಜನಪ್ರಿಯತೆ ಗಳಿಸಿದ್ದರು. ಭೂಸೇನಾ ನೀಗಮದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು.
ಕಲ್ಲೂರ ಅವರ ನಿಧನಕ್ಕೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ, ದಯಾಸಾಗರ ಪಾಟೀಲ, ಮುಖಂಡ ಬಿ.ಡಿ. ಪಾಟೀಲ, ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಮತ್ತಿತರರು ಸಂತಾಪ ಸೂಚಿಸಿದ್ದಾರೆ.