ಮಹಿಳೆ ಮೃತಪಟ್ಟ ಸಿಟ್ಟಿಂದ ಹಾವು ಕೊಂದ ಕುಟುಂಬಸ್ಥರಿಗೆ ಶಾಕ್​! ತಾಯಿ ಸಾವಿಗೆ ಸೇಡು ತೀರಿಸಿಕೊಂಡ ಹಾವಿನ ಮರಿಗಳು

snake
Published on

ಕೊಪ್ಪಳ: ಹಾವು ಕಚ್ಚಿ ಮಹಿಳೆ ಮೃತಪಟ್ಟಿದ್ದು, ಸಿಟ್ಟಿಗೆದ್ದ ಮೃತಳ ಕುಟುಂಬಸ್ಥರು ಆ ಹಾವನ್ನ ಕೊಂದು ಹಾಕಿದ್ದಾರೆ. ಇದಾದ ಬೆನ್ನಲ್ಲೇ ಹಾವಿನ ಮರಿಗಳು ಅದೇ ಮನೆಯ ಮೂವರಿಗೆ ಕಚ್ಚಿ ತಾಯಿಹಾವಿನ ಸಾವಿಗೆ ಸೇಡು ತೀರಿಸಿಕೊಂಡ ಘಟನೆ ನಿನ್ನೆ ರಾತ್ರಿ(ಮಂಗಳವಾರ) ಸೇಬಿನಕಟ್ಟಿ ಗ್ರಾಮದಲ್ಲಿ ಸಂಭವಿಸಿದೆ.

ಸೇಬಿನಕಟ್ಟಿ ಗ್ರಾಮದದಲ್ಲಿ ಮೊನ್ನೆ(ಸೋಮವಾರ) ರಾತ್ರಿ ಮನೆಯಲ್ಲಿ ನಿರ್ಮಲಾ ಪರಶುರಾಮ ಮಡಿಕ್ಕೇರಿ ಎಂಬುವರಿಗೆ ಹಾವು ಕಚ್ಚಿತ್ತು. ಕೂಡಲೇ ಅವರನ್ನ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟರು. ಮಹಿಳೆಯ ಸಾವಿಗೆ ಕಾರಣವಾದ ಆ ಹಾವನ್ನ ಕುಟುಂಬಸ್ಥರು ಕೊಂದು ಹಾಕಿದ್ದರು. ದುರಂತ ಅಂದ್ರೆ ಮರುದಿನ ರಾತ್ರಿ ಅದೇ ಮನೆಯ ಮೂವರಿಗೆ ಹಾವಿನ ಮರಿಗಳು ಕಚ್ಚಿವೆ!

ನಿರ್ಮಾಲಾರ ಮನೆಯಲ್ಲಿ ಮಂಗಳವಾರ ರಾತ್ರಿ ಮೃತಳ ಮೈದುನ ಬಸವರಾಜ ಬೀರಪ್ಪ ಮಡಿಕ್ಕೇರಿ, ಮೃತಳ ಸಂಬಂಧಿ ಮುತ್ತು ಶರಣಪ್ಪ ಮೇಟಿ ಮಲಗಿದ್ದರು. ಈ ಬೇಳೆ ಈ ಮೂವರಿಗೂ ಹಾವಿನ ಮರಿಗಳು ಕಚ್ಚಿವೆ. ಮುತ್ತು ಮತ್ತು ಬೀರಪ್ಪ ಅಸ್ವಸ್ಥಗೊಂಡಿದ್ದು, ಹನಮಸಾಗರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಸಿಪಿಐ ನಿಂಗಪ್ಲ ರುದ್ರಪ್ಪಗೋಳ, ಪಿಎಸ್‌ಐ ಅಶೋಕ್ ಬೇವೂರು ಅವರು ಆ ಮನೆಯ ಉಳಿದ ಸದಸ್ಯರನ್ನು ಬೇರೆ ಮನೆಗೆ ಸ್ಥಳಾಂತರಿಸಿದ್ದಾರೆ. ಮನೆಯಲ್ಲಿ ಹಾವಿನ ಮರಿಗಳಿರುವ ಬಗ್ಗೆ ಶಂಕಿಸಲಾಗಿದ್ದು, ಹಾವಾಡಿಗರನ್ನು ಕರೆಸಿ ಹಾವು ಹಿಡಿಯುವ ಕಾರ್ಯಾಚರಣೆ ನಡೆದಿದೆ. ಹನುಮಸಾಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಘಟನೆಯಿಂದಾಗಿ ಸೇಬಿನಕಟ್ಟಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.

ಹಾವಿನ ದ್ವೇಷವೋ ಅಥವಾ ಯಾವುದೋ ಶಾಪವೋ, ಆಕಸ್ಮಿಕ ಘಟನೆಯೋ ಗೊತ್ತಿಲ್ಲ. ಆದರೆ, ಗ್ರಾಮಸ್ಥರು ಮಾತ್ರ ತಾಯಿಹಾವಿನ ಸಾವಿಗೆ ಅದರ ಮರಿಗಳು ಸೇಡು ತೀರಿಸಿಕೊಳ್ಳುತ್ತಿವೆ ಎಂದೇ ಮಾತನಾಡಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net