

ಗದಗ: ಹರ್ತಿ ಗ್ರಾಮದ ಹಳಿ ಇಂದು(ಬುಧವಾರ) ಮಧ್ಯಾಹ್ನ ಭೀಕರ ಅಪಘಾತ ಸಂಭವಿಸಿದ್ದು, ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ. ಒಬ್ಬನ ಸ್ಥಿತಿ ಗಂಭೀರವಾಗಿದ್ದು, ಗ್ರಾಮಸ್ಥರು ಜಿಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಇವರೆಲ್ಲರೂ ಗದಗ ತಾಲೂಕಿನ ಲಿಂಗದಾಳದಿಂದ ಲಕ್ಷ್ಮೇಶ್ವರಕ್ಕೆ ಸಂಬಂಧಿಕರ ಅಂತ್ಯಕ್ರಿಯೆಗೆಂದು ಕಾರಿನಲ್ಲಿ ಹೋಗುತ್ತಿದ್ದರು. ಮಾರ್ಗಮಧ್ಯೆ ಗದಗ ತಾಲೂಕಿನ ಹರ್ತಿ ಗ್ರಾಮದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ರಭಸಕ್ಕೆ ಕಾರು ನಜ್ಜುಗುಜ್ಜಾಗಿದ್ದು, ಓರ್ವ ಮಹಿಳೆ ಸೇರಿ ಮೂವರು ದುರಂತ ಅಂತ್ಯಕಂಡಿದ್ದಾರೆ.
ಮೃತದೇಹಗಳು ರಸ್ತೆ ಬದಿಯ ಜಮೀನಿನಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಅಪಘಾತದ ಭೀಕರತೆಗೆ ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಗದಗ ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.