ಪ್ರೇಮಿಗಳ ಮಧ್ಯೆ ಹುಳಿ ಹಿಂಡಿದ್ಲಾ ಆಕೆ? ಆತ್ಮಹತ್ಯೆ ಯತ್ನಕ್ಕೂ ಮುನ್ನ ಮನದ ನೋವನ್ನು ಅಕ್ಷರಕ್ಕಿಳಿಸಿದ ಚೈತ್ರಾ ಕೋಟೂರ್​

chaitra kottur
Published on

ಕೋಲಾರ: ಬಿಗ್​ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಗುರುವಾರ ಬೆಳಗಿನಜಾವ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದು, ಸಾವು-ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋಡಾಡುತ್ತಿದ್ದಾರೆ. ಸಾವಿನ ಮನೆಯ ಕದ ತಟ್ಟಲು ಸಿದ್ಧವಾದ ಚೈತ್ರಾ, ತನ್ನ ಮನದಾಳದ ನೋವನ್ನ ಭಾವನಾತ್ಮಕವಾಗಿ ಅಕ್ಷರಕ್ಕಿಳಿಸಿದ್ದಾರೆ. ಅದರ ಪೂರ್ಣ ವಿವರ ಇಲ್ಲಿದೆ.

ನಾನು ತಪ್ಪು ಮಾಡಿದ್ದೇನೆ. ಏನೆಂದರೆ ನಾಗಾರ್ಜುನ್​ನನ್ನು ನಂಬಿದ್ದು. ಆತ ಮಾಡಿದ ನಂಬಿಕೆ ದ್ರೊಹಕ್ಕೆ ಒಳಗಾಗಿದ್ದು. ನಾನು ಅತೀವವಾಗಿ ಪ್ರೀತಿಸಿದ ನನ್ನ ಹುಡುಗನಿಗೆ ಹಿಂಸಿಸುವ, ನೋಯಿಸುವ ಯಾವ ಉದ್ದೇಶವೂ ನನಗೆ ಇರಲಿಲ್ಲ. ಆ ದಿನ ಮದುವೆಯಾಗುತ್ತೇನೆ ಎಂದು ಬಂದವನು, ಮತ್ತೆ ಚಕಾರವೆತ್ತಿ ನಾನು ನಡತೆಗೆಟ್ಟವಳು ಎಂದಾಗ ಅಲ್ಲಿನ ಸಾಮಾನ್ಯರೇ ನೋಡುತ್ತಿದ್ದವರು ಬಂದು ಪ್ರಶ್ನಿಸಿದರು. ಇವನು ಕೆಟ್ಟ ಉತ್ತರಗಳನ್ನು ಕೊಡುತ್ತಿದ್ದ ಕಾರಣಕ್ಕೆ ಕೋಪಗೊಂಡು, ಗಲಭೆ ಸೃಷ್ಠಿಯಾಯಿತು. ಅನ್ಯಾಯಕ್ಕೊಳಗಾದ ಹೆಣ್ಣಿಗೆ ನ್ಯಾಯ ದೊರಕಿಸಿಕೊಡುವ ನೆಪದಲ್ಲಿ ಮುನ್ನುಗ್ಗಿದರು. ಮದುವೆ ಮಾಡಿಸಿದರು. ಯಾವ ಕಿಡ್ನ್ಯಾಪೂ ಅಲ್ಲ! ಅವನ ಫೋನ್ ಅವನ ಬಳಿಯೇ ಇತ್ತು. ಜತೆಗೆ ಕಾಲ್ಸ್ ಕೂಡ ಬರುತ್ತಿತ್ತು ಹೋಗುತ್ತಿತ್ತು. ಇದನ್ನೂ ಓದಿರಿ ಬಿಗ್​ ಬಾಸ್​ ಖ್ಯಾತಿಯ ಚೈತ್ರಾ ಕೋಟೂರ್​ ಆತ್ಮಹತ್ಯೆ ಯತ್ನ! ಆಕೆಯ ತಂದೆ ಬಿಚ್ಚಿಟ್ಟ ಕಾರಣ ಇಲ್ಲಿದೆ

ಯಾವ ಹೆಣ್ಣಿಗೇ ಆಗಲಿ ಜತೆಯಲ್ಲಿ ಎಲ್ಲಾ ರೀತಿ ಇದ್ದು ಸಮಯ ಕಳೆದವನು, ಎಲ್ಲವೂ ಆಗಿದ್ದವನು ಕೊನೆಗೆ 'ನಮ್ಮ ಮಧ್ಯೆ ಏನೂ ಆಗೇ ಇಲ್ಲ, ಅದೇನ್ ಮಾಡ್ಕೊತ್ತೀಯೋ ಮಾಟ್ಕೋ.. ಅದೇನ್ ಕಿತ್ಕೊತ್ತೀಯೋ ಕಿತ್ಕೋ' ಎಂದಾಗ ಹೊಟ್ಟೆಯಲ್ಲಿ ಬೆಂಕಿ ಹಚ್ಚಿದಂತೆ ಆಗುವುದಿಲ್ಲ? ಆವೇಶ, ದುಃಖ, ದುಗುಡ ಎಲ್ಲವೂ ಮೂಡುತ್ತೆ. ನನಗೆ ಆಗಿದ್ದೂ ಅದೇ... ಆತನಿಗೆ ನಾನು ಹೇಳಿದೆ, “ಏನು ಆಗಿಲ್ಲ; ಏನು ಇಲ್ಲ ನಮ್ಮ ಮಧ್ಯೆ ಅಂತ ಹೇಳಬೇಡ. ಆಗ ನನಗೆ ಬೇಕಾಗಿತ್ತು, ಆದರೀಗ ಬೇಕಾಗಿಲ್ಲ ಅಂತ ನೇರವಾಗಿ ಹೇಳಿಬಿಡು. ನಾನು ಸುಮ್ಮನಾಗುತ್ತೇನೆ” ಎಂದು. ಆದರೆ ಪಾಪ ಯಾವ ಕಾರಣದಿಂದಲೋ ಏನೋ ಆತ ಒಪ್ಪಿಕೊಳ್ಳಲಿಲ್ಲ.

ನಾನು ಸುಮಾರು ತಿಂಗಳಿನಿಂದ ಡಿಫ್ರೆಷನ್​ನಲ್ಲಿದ್ದೆ. ಟ್ರೀಟ್​ಮೆಂಟ್​ ಕೂಡ ತಗೆದುಕೊಳ್ಳುತ್ತಿದ್ದೆ. ಅವರ ಮನೆಯ ಎಲ್ಲರಿಗೂ ವಿಷಯ ಮುಟ್ಟಿದರು ಯಾರೊಬ್ಬರೂ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಲಿಲ್ಲ. ಪಾಪ ಅವರವರ ಚಿಂತೆ ಅವರಿಗೆ. ನನ್ನ ನೋವು ಹೇಗೆ ತಾನೇ ಯಾರಿಗಾದರು ಮುಟ್ಟಲು ಸಾಧ್ಯ? ಗಂಡು ಹೆಣ್ಣನ್ನು ಬಳಸಿಕೊಳ್ಳೋ ಅಷ್ಟು ಬಳಸಿಕೊಂಡು ಬೇಡವೆಂದರೆ ಮುಗಿಯಿತು. ಪಾಪ ಆತ, ಅವನನ್ನು ಯಾರೂ ಏನೂ ಕೇಳುವಂತಿಲ್ಲ. ಅವನೂ ಒಂದು ಜೀವಿ ಅವನಿಗೂ ಮನಸ್ಸಿರುತ್ತದೆ. ಅವನಿಗೂ ಒಂದು ಜೀವನ ಇರುತ್ತದೆ. ಆದರೆ ಹೆಣ್ಣಾದವಳು ಆತನು ಮಾಡಿದ ಮೋಸದಿಂದ ನೊಂದು ಎಲ್ಲವನ್ನು ಕಳೆದುಕೊಂಡು ಏನಾದರೂ ಸರಿ ಅದು ಯಾರಿಗೂ ಬೇಡ!

ನಾಗಾರ್ಜುನ್ ಒಬ್ಬ ಉದ್ಯಮಿ, ದುಡ್ಡಿಗಾಗಿ ಈಕೆ ಹೀಗೆ ಮಾಡುತ್ತಿದ್ದಾಳೆ ಎಂಬುದು ಸುಳ್ಳು. ಆತ ಒಬ್ಬ ತೀರಾ ಸಾಮಾನ್ಯ ನನ್ನಂತೆ ಮಧ್ಯಮ ವರ್ಗದ ಹುಡುಗ. ನಾನೇ ಸ್ವತಃ ಅವನು ಮಾಡಿಕೊಂಡಿರುವ ಸಾಲ ಮತ್ತು ಸಮಸ್ಯೆಗಳನ್ನ ತಿಳಿದು ಸಹಾಯ ಮಾಡಲು ಹೋಗಿದ್ದೆ. ನನ್ನನ್ನು ಮದುವೆ ಆಗಲು ಅವನ ಸಾಲದ ಸಮಸ್ಯೆ ಅಡ್ಡ ಇರಬಹುದೇನೋ ಎಂದು ಭಾವಿಸಿ “ನಿನ್ನ ಸಾಲಗಳನ್ನು ಕ್ಲಿಯರ್​ ಮಾಡಿಕೋ, ನಾನು ಕಷ್ಟಪಟ್ಟು ಹಣ ಹೊಂದಿಸಿಕೊಡುತ್ತೇನೆ. ನಂತರ ಮದುವೆ ಆಗೋಣ” ಎಂದೂ ಹೇಳಿದ್ದೆ. ನನ್ನ ಸ್ವಲ್ಪ ಹಣವನ್ನು ಟ್ರಾನ್ಸಫರ್​ ಮಾಡಿರುವ ದಾಖಲೆಗಳೂ ಸಿಗುತ್ತವೆ.

ನಾನು ಈಗ ನನ್ನ ಗಂಡ ನಾಗಾರ್ಜುನನ ಮೇಲೆ ಕೇಸ್ ಹಾಕಿ ಪರೀಕ್ಷೆಗಳ ಮೂಲಕ ನಮ್ಮ ಮಧ್ಯೆ ಎಲ್ಲಾ ರೀತಿಯ ಸಂಬಂಧ ಇತ್ತು ಎಂದು ಸಾಬೀತು ಪಡಿಸಬಹುದು, ಆತನಿಗೆ ಶಿಕ್ಷೆಯನ್ನೂ ಮಾಡಿಸಬಹುದು. ಆದರೆ ಅದರಿಂದ ನನಗೆ ದೊರೆಯುವುದಾದರು ಏನು? ನಾನು ಅತೀವವಾಗಿ ನಂಬಿ ಪ್ರೀತಿಸಿದ ಹುಡುಗನಿಗೆ ನೋವು, ಶಿಕ್ಷೆ ನೀಡಿ ನಾ ಗಳಿಸುವುದಾದರೂ ಏನು? ಅವನು ಎಲ್ಲಿದ್ದರೂ ಹೇಗಿದ್ದರೂ ಚನ್ನಾಗಿರಲಿ... ನನ್ನ ಜೀವ, ನನ್ನ ಪ್ರಾಣ, ನನ್ನ ಕನಸ್ಸು, ನನ್ನ ಉಸಿರು ಅವನು ಎಂದು ಬದುಕಿದ್ದೆ.

ನನ್ನ ಗಂಡ ನಾಗಾರ್ಜುನ್ ಇಷ್ಟೆಲ್ಲಾ ಈಗ ವಿರೋಧವಾಗಿರುವುದಕ್ಕೆ ಮುಖ್ಯ ಕಾರಣ ಆತನ ಜತೆಯಿರುವವರು ಮತ್ತು ಯಾರೋ ಒಂದು ಹೆಂಗಸು. ಅವರ ಹೆಸರೂ ನನಗೆ ಸರಿಯಾಗಿ ತಿಳಿದಿಲ್ಲ. ಬಹುಶಃ ಜ್ಯೊತಿ ಅಥವಾ ರೇಖಾ ಲಕ್ಷ್ಮೀ ಇರಬಹುದು. ಒಮ್ಮೆ ಅವನೊಂದಿಗೆ ಕೋಲಾರದ ನಮ್ಮ ಮನೆಗೂ ಆಕೆ ಬಂದಿದ್ದರು. ಬಂದವರೇ “ಇಂದಿನ ಕಾಲದಲ್ಲಿ fuck and forget common, ಹುಡುಗ ಕರೆದಾಗ ಹುಡುಗಿ ಹೋಗುವುದು ಅಥವಾ ಹುಡುಗಿ ಕರೆದಾಗ ಹುಡುಗ ಹೋಗುವುದು ಕಾಮನ್” ಎಂದು ಸ್ವತಃ ಹೆಣ್ಣಾಗಿದ್ದರೂ ಹೀನಾಯವಾಗಿ ಮಾತಾಡಿ ಹೋಗಿದ್ದರು. ಆಕೆ ನಮ್ಮ ವಿಷಯದಲ್ಲಿ ಯಾಕೆ ತಲೆದೂರಿಸಿದ್ದಾಳೆ ಗೊತ್ತಿಲ್ಲ! ಆತ ಮತ್ತು ಆಕೆಯ ಸಂಬಂಧವೇನು? ಅದೂ ಗೊತ್ತಿಲ್ಲ! ನಮ್ಮಿಬ್ಬರನ್ನು ದೂರ ಮಾಡುವುದರಿಂದ ಆಕೆಗೆ ಸಿಗುವುದೇನು? ಎಂಬುದೂ ಗೊತ್ತಿಲ್ಲ! ಪಾಪ ಆಕೆಗೆ ಏನು ಹುಚ್ಚೊ... ನಮ್ಮ ಜೀವನದಲ್ಲಿ ಆಟವಾಡಿ ಯಾರಿಗಾದರೂ ಏನಾದರು ಆದರೆ ಹೊಟ್ಟೆಗೆ ಹಾಲು ಕುಡಿದಷ್ಟು ತೃಪ್ತಿಯಾಗುತ್ತದೇನೊ... ಇರಲಿ ಆಕೆ ತಣ್ಣಗಿರಲಿ... ನನ್ನ ಸಾವಿನಿಂದ ಆಕೆಗೆ ಸುಖ ಸಿಗುವುದಾದರೆ ಸಿಗಲಿ...

ಇರಲಿಬಿಡಿ ನನ್ನ ಸಮಯ ನನ್ನ ಬದುಕು, ಭಾವನೆ ಎಲ್ಲವನ್ನೂ ದುರುಪಯೋಗ ಪಡಿಸಿಕೊಳ್ಳುತ್ತಿರುವವರು ಎಲ್ಲರೂ ಚನ್ನಾಗಿರಲಿ. ‘ನೀನು ಅಥವಾ ಸಾವು’ ನನ್ನ ಮುಂದೆ ಎರಡು ಆಯ್ಕೆ ಇದೆ ಎಂದು ಹೇಳಿದಾಗಲೆಲ್ಲಾ ಸತ್ತು ಹೋಗು... ಇಂಥ ಬದುಕು ಬದುಕುವುದಕ್ಕಿಂತ ಸಾಯುವುದು ಮೇಲು ಎಂದು ಸಾರಿ ಸಾರಿ ಹೇಳುತ್ತಿದ್ದ. ಅದರಂತೆ ಸಾಯುತ್ತಿದ್ದೇನೆ...

ನಾನು ಹೊರಡುತ್ತೇನೆ... ಎಲ್ಲವೂ ಸಾಕಾಗಿದೆ... ಪ್ರಪಂಚ, ಜನ, ಜಗತ್ತು... ಈ ಪ್ರಕ್ರಿಯೆಯಲ್ಲಿ ಎಲ್ಲವನ್ನೂ ನೋಡಿಬಿಟ್ಟೆ. ಎಲ್ಲರಿಗೂ ಧನ್ಯವಾದಗಳು. ಅಪ್ಪ ಅಮ್ಮ ನನ್ನ ಕುಟುಂಬದವರು ಮತ್ತು ನನ್ನನ್ನು ಪ್ರೀತಿಸುವ ಜನ ಎಲ್ಲರೂ ನನ್ನನ್ನು ಕ್ಷಮಿಸಿ...

| ಚೈತ್ರಾ ಕೋಟೂರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net