ಪತ್ನಿ ಮಲಗಿದ್ದ ಮನೆಗೆ ಬೆಂಕಿ ಇಟ್ಟು 7 ಜನರನ್ನ ಕೊಂದ ಪತಿ! ಬಳಿಕ ಮಗಳಿಗೆ ಕರೆ ಮಾಡಿ ಮನದಾಳ ಬಿಚ್ಚಿಟ್ಟ ಕ್ರೂರಿ

fire
Published on

ಕೊಡಗು: ಪೊನ್ನಂಪೇಟೆ ತಾಲೂಕಿನ ಮುಗುಟಗೇರಿ ಗ್ರಾಮದಲ್ಲಿ ಮನೆಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪತ್ನಿ ಸೇರಿದಂತೆ 7 ಜನರನ್ನು ಸಜೀವ ದಹನ ಮಾಡಿದ್ದ ಕ್ರೂರಿ, ಆ ರಾತ್ರಿ ತನ್ನ ಮಗಳಿಗೆ ಮೊಬೈಲ್​ ಮೂಲಕ ಮಾತನಾಡಿದ್ದ ಆಡಿಯೋ ‌ಲಭ್ಯವಾಗಿದೆ.

ಮಗಳಿಗೆ ಕರೆ ಮಾಡಿದ ಆರೋಪಿ ಬೋಜ, ನಿನ್ನ ಅಮ್ಮನಿಗೆ ಪೆಟ್ರೋಲ್ ಹಾಕಿ ಬೆಂಕಿ‌ ಹಾಕಿದ್ದೇನೆ. ಎರಡು ವರ್ಷದಿಂದ ಕರೆದರೂ ನಿನ್ನಮ್ಮ ನನ್ನೊಂದಿಗೆ‌ ಬರಲಿಲ್ಲ. ಈಗ ಬಂದು ನೋಡು‌ ನಿನ್ನಮ್ಮನ ಸ್ಥಿತಿಯನ್ನ. ಮನೆಗೆ ಪೆಟ್ರೋಲ್ ಸುರಿದು ‌ಬೆಂಕಿ ಹಚ್ಚಿದ್ದೇನೆ. ಈಗ ನಾನೂ ಸಾಯುತ್ತೇನೆ. ನೀನು ಹೋಗಿ ಅಮ್ಮನ ಗೋಳು ನೋಡು ಎಂದೇಳಿ ಕರೆ ಕಟ್ ಮಾಡಿದ್ದ.

ಮಾ.2ರ ತಡರಾತ್ರಿ ಮನೆಗೆ ಬೆಂಕಿ ಇಟ್ಟಿದ್ದ ಬೋಜನ ಕ್ರೂರತನಕ್ಕೆ ಈತನ ಪತ್ನಿ ಬೇಬಿ (40) ಸೇರಿದಂತೆ ಸೀತೆ (45), ಪ್ರಾರ್ಥನಾ(6), ಪ್ರಕಾಶ್ (6), ವಿಶ್ವಾಸ (3), ವಿಶ್ವಾಸ್ (7) ಎಂಬುವರರು ಸುಟ್ಟುಕರಕಲಾಗಿದ್ದರು. ಇದೇ ಪ್ರಕರಣದಲ್ಲಿ ಗಂಭೀರ ಗಾಯಗೊಂಡಿದ್ದ ಮತ್ತೋರ್ವ ಗಾಯಾಳು ಭಾಗ್ಯ (24) ಮೈಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.

ಇತ್ತ ಮನೆಗೆ ಬೆಂಕಿ ಇಟ್ಟು ಪರಾರಿಯಾಗಿದ್ದ ಆರೋಪಿ ಬೋಜನ ಪತ್ತೆಗೆ ಪೊಲೀಸರು ಶೋಧ ಕಾರ್ಯ ಮುಂದುವರಿಸಿದ್ದರು. ಮುಗುಟಗೇರಿ ಸಮೀಪದ ಕಾಫಿ ತೋಟವೊಂದರಲ್ಲಿ ಏ.6ರ ಮುಂಜಾನೆ ಶವವಾಗಿ ಆರೋಪಿ ಪತ್ತೆಯಾಗಿದ್ದಾನೆ. ಕೃತ್ಯವೆಸಗಿದ ನಂತರ ಕ್ರೂರಿ ಆರೋಪಿ ಅದೇ ದಿನ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net