

ಜೈಪುರ, ರಾಜಸ್ಥಾನ: ತಿಂಗಳಾಂತ್ಯದಲ್ಲಿ ಸಾವಿರಾರು ರೂಪಾಯಿ ಸಂಬಳ ಪಡೆಯುವ ಸರ್ಕಾರಿ ನೌಕರರು ಬಡವರ ಪಾಲಿಗೆ ಸೇರಬೇಕಾದ ರೇಷನ್ ಅನ್ನು ಕೂಡ ಬಿಟ್ಟಿಲ್ಲ ಎಂಬ ವಿಷಯ ತೀರ ಶೋಚನೀಯ. ಮಾಸಿಕವಾಗಿ ಉತ್ತಮ ಸಂಬಳ, ಒಳ್ಳೆಯ ಸರ್ಕಾರಿ ಸೌಲಭ್ಯ, ಸವಲತ್ತುಗಳಿದ್ದರೂ ಸಹ ಬಡವರ ರೇಷನ್ ಮೇಲೆ ಕಣ್ಣು ಹಾಕಿರುವ ಇಂತಹ ನೌಕರರಿಗೆ ಏನು ಹೇಳಬೇಕು ಎಂಬುದೇ ತಿಳಿಯದಂತಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ನೀಡಲಾದ ಉಚಿತ ಗೋಧಿಯನ್ನು ಒಟ್ಟು 83,679 ಸರ್ಕಾರಿ ನೌಕರರು ತಿಂದು ತೇಗಿರುವುದು ಕಂಡುಬಂದಿದೆ. ಗುರುತಿಸಲಾದ ಸರ್ಕಾರಿ ನೌಕರರಿಂದ ಪ್ರಸ್ತುತ ಮಾರುಕಟ್ಟೆಯಲ್ಲಿ ಗೋಧಿ ಬೆಲೆ ಎಷ್ಟಿದೆಯೋ ಅಷ್ಟು ಹಣವನ್ನು ಇದೀಗ ಸರ್ಕಾರ ಅವರಿಂದಲೇ ವಸೂಲಿ ಮಾಡುತ್ತಿದೆ.
ಇದನ್ನೂ ಓದಿ: ಚಿನ್ನ ಕದ್ದಿದ್ದ ಲಕ್ಷ್ಮೀ ಬಂಧನ
NFSA ಅನುಷ್ಠಾನದ ಬಳಿಕ ಎರಡು ವರ್ಷಗಳ ಹಿಂದೆ ನಡೆದ ಯೋಜನೆಯ ಪರಿಶೀಲನೆ ಸಮಯದಲ್ಲಿ ಈ ಅಕ್ರಮವು ಮೊದಲ ಬಾರಿಗೆ ಸರ್ಕಾರದ ಗಮನಕ್ಕೆ ಬಂದಿತ್ತು. ಆಗ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ವಿಶೇಷ ತನಿಖೆ ನಡೆಸಿದ್ದು, ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಇಂತಹ ಅವ್ಯವಹಾರ ನಡೆಯುತ್ತಿರುವುದು ತೀರ ಸಾಮಾನ್ಯವಾಗಿದೆ ಎಂಬ ಮಾಹಿತಿ ಭಾರೀ ಅಚ್ಚರಿ ಮೂಡಿಸಿತ್ತು. ರಾಷ್ಟ್ರೀಯ ಆಹಾರ ಭದ್ರತಾ ಯೋಜನೆ ಜಾರಿಯಾದಾಗ ಈ ಯೋಜನೆಯಡಿ ಒಳಪಡುವ ರಾಜ್ಯದ ಸುಮಾರು ಒಂದು ಕೋಟಿ ಕುಟುಂಬಗಳಿಗೆ ಪ್ರತಿ ಕೆಜಿಗೆ 2 ರೂ.ಗೆ ಗೋಧಿ ಮತ್ತು ಅಕ್ಕಿ ನೀಡಲಾಗುತ್ತಿತ್ತು. ಕೋವಿಡ್ ಸಾಂಕ್ರಾಮಿಕ ಖಾಯಿಲೆ ಬಂದ ನಂತರ ಈ ಯೋಜನೆಯಡಿಯಲ್ಲಿ ಫಲಾನುಭವಿಗಳಿಗೆ ಪಡಿತರವನ್ನು ಉಚಿತವಾಗಿ ನೀಡಲಾಯಿತು.
ಈ ವರ್ಷದ ಏಪ್ರಿಲ್ 30ರವರೆಗಿನ ಅಂಕಿಅಂಶಗಳ ಪ್ರಕಾರ ನೋಡುವುದಾದರೆ, ರಾಜ್ಯದ ಒಟ್ಟು 83,679 ಸರ್ಕಾರಿ ನೌಕರರು ಬಡವರ ಗೋಧಿಯನ್ನು ಪಡೆದುಕೊಂಡಿದ್ದಾರೆ. ಇವರಲ್ಲಿ 7,702 ಉದ್ಯೋಗಿಗಳು ದೌಸಾ ಜಿಲ್ಲೆಯವರಾಗಿದ್ದರೆ, ಕನಿಷ್ಠ 314 ಉದ್ಯೋಗಿಗಳು ಜೈಪುರ ಮೂಲದವರಾಗಿದ್ದಾರೆ. ಈ ಅಕ್ರಮದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಿ ನೌಕರರು ಇದ್ದಾರೆ ಎಂಬುದೇ ಸದ್ಯ ಅಚ್ಚರಿ ಸಂಗತಿ. ಅಕ್ರಮಗಳು ಬೆಳಕಿಗೆ ಬಂದ ಬೆನ್ನಲ್ಲೇ ಸರ್ಕಾರವು ಗುರುತಿಸಲಾದ ನೌಕರರಿಂದ ಪ್ರತಿ ಕೆಜಿಗೆ 27.50 ರೂ. ಹಣವನ್ನು ಪಡೆದುಕೊಳ್ಳುವ ಮೂಲಕ ಲೆಕ್ಕ ಚುಕ್ತಾ ಮಾಡುತ್ತಿದೆ.
ಇದುವರೆಗೆ 67,297 ನೌಕರರಿಂದ 82,66,65,624 ರೂ. ಹಣವನ್ನು ವಸೂಲಾತಿ ಪ್ರಕ್ರಿಯೆ ಮೂಲಕ ಪಡೆದುಕೊಳ್ಳಲಾಗಿದೆ. ಇನ್ನು ಮುಂದೆ ಇಂತಹ ಅವ್ಯವಹಾರ ನಡೆಯದಂತೆ ಕಟ್ಟುನಿಟ್ಟಿನ ವ್ಯವಸ್ಥೆ ಕೂಡ ಜಾರಿಗೊಳಿಸಲಾಗಿದೆ ಎಂದು ಆಹಾರ ಸಚಿವ ಸುಮಿತ್ ಗೋಡಾರಾ ತಿಳಿಸಿದ್ದಾರೆ. ಉಳಿದ ನೌಕರರಿಗೆ ವಸೂಲಾತಿ ಪ್ರಕ್ರಿಯೆ ಮುಂದುವರಿದಿದ್ದು, ಇನ್ನು ಮುಂದೆ ಇಂತಹ ಅವ್ಯವಹಾರದಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಲಾಗಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).